ಭೀಮಾ-ಕೋರೆಗಾಂವ್ ಹಿಂಸಾಚಾರ: ಮಹಾರಾಷ್ಟ್ರದ ಮನವಿ ವಿಚಾರಣೆ ಮುಂದೂಡಿದ ಸುಪ್ರೀಂ

Update: 2018-12-11 15:09 GMT

ಹೊಸದಿಲ್ಲಿ, ಡಿ. 11: ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪ ಪಟ್ಟಿ ಸಲ್ಲಿಸಲು 90 ದಿನಗಳ ಮಿತಿ ವಿಸ್ತರಿಸಲು ನಿರಾಕರಿಸಿರುವ ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋಟ್ ಮಂಗಳವಾರ ಮುಂದಿನ ತಿಂಗಳಿಗೆ ಮುಂದೂಡಿದೆ.

ಆರೋಪಿಗಳಲ್ಲಿ ಒಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲರ ಪ್ರತಿಪಾದನೆಯನ್ನು ಪರಿಗಣಿಸಿ ಬಂಧಿತರಾಗಿರುವ ಮಾನವ ಹಕ್ಕು ಹೋರಾಟಗಾರ ವಿರುದ್ಧ ದಾಖಲಿಸಲಾದ ಪ್ರಕರಣಗಳ ತನಿಖಾ ವರದಿ ಹಾಗೂ ಆರೋಪಗಳ ಮುಖ್ಯಾಂಶವನ್ನು ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದೆ. ಈ ಪ್ರಕರಣದಲ್ಲಿ ಇಂದು ಇದನ್ನು ಆಲಿಸಲು ಸಾಧ್ಯವಿಲ್ಲ. 8000 ಪುಟಗಳಿರುವ ದಾಖಲೆಗಳನ್ನು ನಾವು ಓದಿಲ್ಲ (ಆರೋಪ ಪಟ್ಟಿ ಹಾಗೂ ಮುಖ್ಯಾಂಶ) ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಇಂದು ನಿಗದಿಯಾಗಿದ್ದ ವಿಚಾರಣೆಯನ್ನು ಮುಂದೂಡುವಂತೆ ಕೋರಿದ ಹಾಗೂ ವಿಷಯ ಉಲ್ಲೇಖಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ಗೆ ತಿಳಿಸಿತು.

ವಿಚಾರಣೆಯನ್ನು ಅನಿರ್ದಿಷ್ಟಾವದಿ ಮುಂದೂಡಲಾಗಿದೆ ಎಂದು ಪೀಠ ಹೇಳಿತು. ಇದನ್ನು ವಿರೋಧಿಸಿದ ಸುರೇಂದ್ರ ಪುಂಡಲಿಕ ಗಾಡ್ಲಿಂಗ್ ಪರ ವಕೀಲೆ ಜೈಸಿಂಗ್, ಎಲ್ಲ ಆರೋಪಿಗಳು ಜೈಲಿನಲ್ಲಿ ಇದ್ದಾರೆ. ಆದುದರಿಂದ ಪ್ರಕರಣದ ವಿಚಾರಣೆಯನ್ನು ಜನವರಿ 8ಕ್ಕೆ ನಿಗದಿಪಡಿಸಿ ಎಂದು ಮನವಿ ಮಾಡಿದರು. ಮೇಡಂ ಎರಡೂ ದಾರಿಗಳು ಸಾಧ್ಯವಿಲ್ಲ ಎಂದು ಪೀಠ ಹೇಳಿತು. ಬಳಿಕ ಪ್ರಕರಣದ ವಿಚಾರಣೆಯ ದಿನಾಂಕವನ್ನು ಶೀಘ್ರದಲ್ಲಿ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News