ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಸಾಮ್ರಾಜ್ಯ

Update: 2018-12-11 17:25 GMT

ಹೈದರಾಬಾದ್,ಡಿ.11: ತೆಲಂಗಾಣ ವಿಧಾನಸಭೆಯ 119 ಸ್ಥಾನಗಳ ಪೈಕಿ 87 ಸ್ಥಾನಗಳಲ್ಲಿ ಜಯಭೇರಿಯನ್ನು ಮೊಳಗಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯು ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರದ ಗದ್ದುಗೆಯನ್ನೇರಲು ಸಜ್ಜಾಗುವ ಮೂಲಕ ತನ್ನ ವರಿಷ್ಠ ಕೆ.ಚಂದ್ರಶೇಖರ ರಾವ್ ಅವರ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಗೊಳಿಸಿದೆ. ಕಾಂಗ್ರೆಸ್ ಕೇವಲ 21 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದರೆ,ಎಐಎಂಐಎಂ ಏಳು ಮತ್ತು ಇತರರು ಏಳು ಸ್ಥಾನಗಳನ್ನು ಗೆದ್ದಿದ್ದಾರೆ. ಬಿಜೆಪಿಗೆ ಒಂದೇ ಸ್ಥಾನ ದಕ್ಕಿದೆ.

ಸ್ವತಃ ರಾವ್ ಅವರು ಗಜ್ವೆಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿ.ಪ್ರತಾಪ ರೆಡ್ಡಿಯವರನ್ನು 51,000ಕ್ಕೂ ಅಧಿಕ ಮತಗಳಿಂದ ಮಣಿಸಿ ಗೆಲುವಿನ ನಗು ಬೀರಿದ್ದಾರೆ. ಉಸ್ತುವಾರಿ ಸರಕಾರದಲ್ಲಿ ಸಚಿವರಾಗಿರುವ ರಾವ್ ಪುತ್ರ ಕೆ.ಟಿ.ರಾಮರಾವ್ ಮತ್ತು ಸೋದರ ಪುತ್ರ ಟಿ.ಹರೀಶ ರಾವ್ ಅವರೂ ಗೆಲುವು ಸಾಧಿಸಿದ್ದಾರೆ.

ರಾವ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನಿಗದಿತ ಅವಧಿಗೆ ಎಂಟು ತಿಂಗಳ ಮೊದಲೇ ವಿಧಾನಸಭೆಯನ್ನು ವಿಸರ್ಜಿಸುವ ಮೂಲಕ ಆಡಿದ್ದ ರಾಜಕೀಯ ಜೂಜು ಅದ್ಭುತ ಲಾಭಗಳನ್ನು ನೀಡಿದೆ. ಟಿಆರ್‌ಎಸ್ ಹಿಂದಿನ ವಿಧಾನಸಭೆಯಲ್ಲಿ 63 ಶಾಸಕರನ್ನು ಹೊಂದಿತ್ತು. ಆದರೆ ಟಿಡಿಪಿ ಮತ್ತು ಕಾಂಗ್ರೆಸ್ ಶಾಸಕರ ಪಕ್ಷಾಂತರಗಳ ಬಳಿಕ ಈ ಸಂಖ್ಯೆ 82ಕ್ಕೇರಿತ್ತು. ಜನರು ನಮ್ಮ ಮುಖ್ಯಮಂತ್ರಿಗಳಲ್ಲಿ ಮತ್ತೊಮ್ಮೆ ವಿಶ್ವಾಸವನ್ನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರು ಪ್ರತಿಪಕ್ಷದ ಅಪಪ್ರಚಾರಕ್ಕೆ ಮರುಳಾಗಿಲ್ಲ ಎಂದು ಸಿದ್ದಿಪೇಟ್ ವಿಧಾನಸಭಾ ಕ್ಷೇತ್ರದಲ್ಲಿ 1,18,499 ಮತಗಳನ್ನು ಗಳಿಸಿ ಗೆದ್ದಿರುವ ಟಿ.ಹರೀಶ ರಾವ್ ಸಂಭ್ರಮಿಸಿದರು.

ತೆಲಂಗಾಣ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಕೇವಲ 60 ಸ್ಥಾನಗಳ ಅಗತ್ಯವಿದ್ದರೂ ಅದಕ್ಕಿಂತ ಹೆಚ್ಚೇ ಸ್ಥಾನಗಳು ಟಿಆರ್‌ಎಸ್‌ಗೆ ಒಲಿದಿವೆ.

 ಟಿಆರ್‌ಎಸ್‌ನ ಮಿತ್ರಪಕ್ಷ ಎಐಎಂಐಎಂ ಅಭ್ಯರ್ಥಿ ಮುಹಮ್ಮದ್ ವೌಝಮ್ ಖಾನ ಅವರು ಬಹಾದುರಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ,ಪಕ್ಷದ ಮುಖ್ಯಸ್ಥ ಅಸದುದ್ದೀನ ಉವೈಸಿಯವರ ಕಿರಿಯ ಸೋದರ ಅಕ್ಬರುದ್ದೀನ್ ಉವೈಸಿ ಅವರು ಚಂದ್ರಾಯನಗುಟ್ಟಾ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.

ಟಿಆರ್‌ಎಸ್‌ನ ಭಾರೀ ವಿಜಯ ತೆಲಂಗಾಣದಲ್ಲಿ ನೆಲೆಯನ್ನು ಕಂಡುಕೊಳ್ಳುವ ಬಿಜೆಪಿಯ ಕನಸನ್ನು ನುಚ್ಚುನೂರಾಗಿಸಿದೆ.

ಪ್ರತಿಪಕ್ಷದಲ್ಲಿ ರಾವ್ ಅವರಂತಹ ವರ್ಚಸ್ಸನ್ನು ಹೊಂದಿರುವ ನಾಯಕರಿಲ್ಲದಿರುವುದು ಅವರು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಕಾರಣಗಳಲ್ಲೊಂದಾಗಿದೆ ಎನ್ನಬಹುದು. 2014ರಲ್ಲಿ ಪ್ರತ್ಯೇಕ ರಾಜ್ಯ ಚಳವಳಿಯ ಅಲೆ ಮತ್ತು ತನ್ನ ಸ್ವಂತ ಚರಿಷ್ಮಾದಿಂದಾಗಿ ಅವರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದರು. ಆದರೆ ಈ ಬಾರಿ ಪ್ರತ್ಯೇಕ ತೆಲಂಗಾಣ ಭಾವನೆ ಇರದಿದ್ದರೂ ಅವರ ಚರಿಷ್ಮಾ ಒಂದಿನಿತೂ ಮುಕ್ಕಾಗಿಲ್ಲ ಎನ್ನುವುದನ್ನು ಚುನಾವಣಾ ಫಲಿತಾಂಶವು ಸಾಬೀತುಗೊಳಿಸಿದೆ.

ಉದ್ಯೋಗಗಳು ಮತ್ತು ಎರಡು ಬೆಡ್‌ರೂಮ್ ಮನೆಗಳನ್ನು ನೀಡುವ ತನ್ನ ಭರವಸೆಗಳನ್ನು ರಾವ್ ಈಡೇರಿಸಿಲ್ಲ ಎಂದು ಜನರು ದೂರಿದ್ದರೂ ಆಡಳಿತ ವಿರೋಧಿ ಅಲೆಯು ರಾವ್ ವಿರುದ್ಧ ಕೆಲಸ ಮಾಡಲಿಲ್ಲ ಎನ್ನುವುದೂ ಟಿಆರ್‌ಎಸ್‌ನ ಬೃಹತ್ ಗೆಲುವಿಗೆ ಕಾರಣವಾಗಿದೆ.

ಕಾಂಗ್ರೆಸ್,ಟಿಡಿಪಿ,ಸಿಪಿಐ ಮತ್ತು ಟಿಎಸ್‌ಜೆಗಳ ಮಹಾಮೈತ್ರಿಕೂಟಕ್ಕಿಂತ ಟಿಆರ್‌ಎಸ್‌ಗೇ ಮುಸ್ಲಿಂ ಮತದಾರರು ಹೆಚ್ಚಿನ ಒಲವು ವ್ಯಕ್ತಪಡಿಸಿರುವಂತೆ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News