ಕೃಷ್ಣ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಉಪಸಮಿತಿ ರಚನೆ: ಸಚಿವ ಡಿಕೆಶಿ

Update: 2018-12-11 17:27 GMT

ಬೆಳಗಾವಿ,ಡಿ.11: ಕೃಷ್ಣ ಮೇಲ್ದಂಡೆ ಯೋಜನೆಗೆ ಭೂಮಿ ನೀಡಿ ವಸತಿ ಇಲ್ಲದಾಗಿರುವ ಸಂತ್ರಸ್ತರಿಗೆ ಪುನರ್ವವಸತಿ ಕಲ್ಪಿಸಲು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉಪಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ಪರಿಷತ್ತಿನ ಕಲಾಪದಲ್ಲಿ ಬಿಜೆಪಿ ಸದಸ್ಯ ಕವಟಗಿ ಮಠ ಮಲ್ಲಿಕಾರ್ಜುನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 115 ದಿನದೊಳಗಾಗಿ ವರದಿ ನೀಡಿದ ಬಳಿಕ ಪುನರ್ವಸತಿ ಕಲ್ಪಿಸಲು ಭೂ ಒತ್ತುವರಿಗೆ ದರ ನಿಗದಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ಸಂತ್ರಸ್ತರನ್ನು ಸರ್ಕಾರ  ಕಡೆಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಲವು ವರ್ಷಗಳಿಂದ ನಿರ್ವಸತಿಗರಿಗೆ ಪರಿಹಾರ ನೀಡಲು ವಿಳಂಬವಾಗಿದೆ. ವರದಿ ಬಂದ ನಂತರ ಎಷ್ಟು ಸಾಧ್ಯವೋ ಅಷ್ಟು ಶೀಘ್ರದಲ್ಲಿ ದರ ನಿಗದಿಪಡಿಸಿ ಪರಿಹಾರ ನೀಡುವ ಆಶ್ವಾಸನೆ ನೀಡಿದರು.

ಬಳಿಕ ಕಾಂಗ್ರೆಸ್ ಹಿರಿಯ ಸದಸ್ಯ ಎಸ್.ಆರ್.ಪಾಟೀಲ್, ಕೃಷ್ಣ ಉತ್ತರ ಕರ್ನಾಟಕದ ಜೀವನಾಡಿ. ಈ ಯೋಜನೆಗೆ ಲಕ್ಷಾಂತರ ಕುಟುಂಬದವರು ಮನೆ-ಮಠ, ಜಮೀನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂಥವರನ್ನು ಕಡೆಗಣಿಸಬಾರದು ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವರು, ನಾವು ಯಾವುದೇ ಕಾರಣಕ್ಕೂ ರಾಜ್ಯದ ಯಾವುದೇ ಭಾಗವನ್ನು ನಿರ್ಲಕ್ಷ್ಯ ಮಾಡಿಲ್ಲ. ಕೃಷ್ಣ ಭಾಗದಲ್ಲಿ ಅಧಿಕಾರಿಗಳು ಕೆಲಸ ಮಾಡಲು ಸಿದ್ಧರಿಲ್ಲ. ಕರ್ತವ್ಯಕ್ಕೆ ಹಾಜರಾಗದ 7 ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಉದ್ದೇಶ. ಕೃಷ್ಣಾ ನದಿ ನೀರು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರಕಾರ ಬದ್ದ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News