ಎಚ್‌ಐವಿ ಪೀಡಿತರ ಬದುಕು ಸಹ್ಯವಾಗಿಸೋಣ

Update: 2018-12-11 18:33 GMT

ಮೊನ್ನೆಯಷ್ಟೇ ವಿಶ್ವ ಏಡ್ಸ್ ದಿನ ನಡೆದಿದೆ. ಅದರ ಕುರಿತಂತೆ ವರದಿ, ಸುದ್ದಿ, ಭಾಷಣ, ಅರಿವು, ಜಾಗೃತಿಯ ಹೆಸರಲ್ಲಿ ಏನೇನೋ ನಡೆದವು. ಮರುದಿನಕ್ಕೆ ಮರೆಯಾದವು. ನೋವೆಂಬುದು ದಿವವೊಂದರಲ್ಲಿ ಮಾಯವಾಗುವಂತಹದ್ದಲ್ಲ. ಅದರಲ್ಲೂ ಎಚ್‌ಐವಿ ಸೋಂಕಿತರ ಜೀವನ ದಿನನಿತ್ಯದ ಹೋರಾಟ. ಆದರೆ ಚರ್ಚೆಯಿರುವುದು ಬಾಧಿತರ ನೋವಿಗೆ ಅನುಗಾಲ ನಾವೆಲ್ಲಾ ಹೇಗೆ, ಎಷ್ಟು ಸ್ಪಂದಿಸುತ್ತೇವೆ ಎಂಬಲ್ಲಿ. ದಿನಾಚರಣೆಗೆ, ಭಾಷಣಕ್ಕೆ, ಬರಹಕ್ಕೆ ಸೀಮಿತವಾದ ಯಾವ ಕಾಳಜಿಯು ವಾಸ್ತವದಲ್ಲಿ ಹೆಚ್ಚೇನನ್ನು ಸಾಧಿಸಲಾರದು. ಅದು ಕಾರ್ಯರೂಪಕ್ಕಿಳಿದಾಗ ಮಾತ್ರ ಒಂದಷ್ಟು ಬದಲಾವಣೆ ಸಾಧ್ಯ.
ಇತ್ತೀಚೆಗೆ ಪುಣೆಯ ಔಷಧಿ ತಯಾರಿಕಾ ಕಂಪೆನಿಯೊಂದು ಮಹಿಳೆಯೊಬ್ಬರನ್ನು ಎಚ್‌ಐವಿ ಸೋಂಕಿನ ಕಾರಣಕ್ಕಾಗಿ ಕೆಲಸದಿಂದ ವಜಾಗೊಳಿಸಿತ್ತು. ನ್ಯಾಯಾಲಯದ ಮೆಟ್ಟಿಲೇರಿದ್ದ ಮಹಿಳೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಮೂರು ವರ್ಷಗಳ ವೇತನ ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕೆಂದು ನ್ಯಾಯಾಧಿಕಾರಿಗಳು ತೀರ್ಪಿತ್ತಿರುವುದು ತುಸು ಸಮಾಧಾನಕಾರಿ ಸಂಗತಿ.
ಇಂತಹುದೇ ಮತ್ತೊಂದು ಘಟನೆ: ಎಚ್‌ಐವಿ ಸೋಂಕಿತ ಮಹಿಳೆಯೊಬ್ಬರು ಕೆರೆಗೆ ಬಿದ್ದು ಸತ್ತರೆಂದು, ಭರ್ತಿ ಕೆರೆಯ ನೀರನ್ನೇ ಖಾಲಿಮಾಡಿ ಮತ್ತೆ ತುಂಬಿಸಲಾಗಿತ್ತು.
ಇಂದಿಗೂ ಅದೆಷ್ಟೋ ಜನರಲ್ಲಿ ಎಚ್‌ಐವಿ ಎಂದರೆ ಕೇವಲ ಲೈಂಗಿಕ ಸಂಪರ್ಕದಿಂದ ತಗಲುವ ಸೋಂಕು, ಭಯಂಕರ ರೋಗವೆಂಬ ನಂಬಿಕೆ ಬಲವಾಗಿದೆ. ಎಚ್‌ಐವಿ ಪೀಡಿತರನ್ನು ಕಂಡರೆ ಅಸಹ್ಯ ವಸ್ತುವೊಂದನ್ನು ಕಂಡಂತೆ ಬೆಚ್ಚಿ, ಬೆದರಿ ದೂರ ಸರಿಯುತ್ತಾರೆ. ಏಡ್ಸ್ ಎಂದಾಕ್ಷಣ ಅದನ್ನು ದೈಹಿಕ ಸಂಪರ್ಕಕ್ಕೆ ತಾಳೆ ಹಾಕಿ, ತೂಗಿ ನೋಡುವಂಥದ್ದು ಸಾಮಾನ್ಯವಾಗಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಅಂತಹವರಿಂದ ಆದಷ್ಟು ಅಂತರ ಕಾಯ್ದುಕೊಳ್ಳುತ್ತಾರೆ. ಮತ್ತೊಬ್ಬರಲ್ಲಿ ಅವರ ಬಗ್ಗೆ ಎಚ್ಚರಿಸುತ್ತಾರೆ. ಆದರೆ ಸೋಂಕು ಹರಡಬಹುದಾದ ಸೂಜಿ, ಸಿರಿಂಜ್ ಗಳು, ಕ್ಷೌರ ಕತ್ತಿಗಳು, ತಾಯಿಯಿಂದ ಮಗುವಿಗೆ, ಮತ್ತೆ ಕೆಲವೊಮ್ಮೆ ವಿಕೃತ ಮನಸ್ಸಿನವರು ಮುದ್ದು ಮಕ್ಕಳಿಗೆ ಉದ್ದೇಪೂರ್ವಕವಾಗಿ ಸೋಂಕಿನ ಸೂಜಿಗಳನ್ನು ಚುಚ್ಚುವುದರಿಂದಲೂ ಅದು ಹರಡವುದೆಂಬುದು ಅರಿವಿನ ಕೊರತೆಯೋ? ಅಥವಾ ಮಾಹಿತಿಯ ಅಲಭ್ಯತೆಯೋ? ಎಂಬುದು ಚರ್ಚಿತ ಪ್ರಶ್ನೆ.
ಆಕಸ್ಮಿಕ ಅಥವಾ ಅನಿರೀಕ್ಷಿತವಾಗಿ ಸೋಂಕಿಗೆ ಬಲಿಯಾದವರ ಪರಿಸ್ಥಿತಿಯಂತೂ ಶೋಚನೀಯ. ದೈಹಿಕ ಕಾಯಿಲೆಗಿಂತ ಮಾನಸಿಕವಾಗಿ ಅವರು ಕುಗ್ಗಿ ಹೋಗುವ ಮತ್ತು ಅದರಿಂದ ಸಾವಿಗೂ ಶರಣಾಗಿರುವ ಘಟನೆಗಳು ಇಂದು-ನಿನ್ನೆಯದಲ್ಲ. ತಿರಸ್ಕಾರ, ಸ್ವಾನುಕಂಪದ ಕೂಪಕ್ಕೆ ಸಿಲುಕಿ ಜರ್ಝರಿತಗೊಳ್ಳುವ ಅಂತಹವರ ಧ್ವನಿಯಾಗಲು ಎಷ್ಟು ಮಂದಿ ಮುಂದಿದ್ದಾರೆ? ಸರಕಾರವು ಸರಕಾರಿ ಆಸ್ಪತ್ರೆಗಳಲ್ಲಿ ಎಚ್‌ಐವಿ ಪರೀಕ್ಷೆ ಉಚಿತ ಮತ್ತು ಗುಪ್ತ ಎಂದು ಪ್ರಚಾರ ಮಾಡಿ, ಕೆಲ ವೈದ್ಯರನ್ನು ಅದಕ್ಕಾಗಿ ನೇಮಿಸಿಬಿಟ್ಟು ಜವಾಬ್ದಾರಿ ಕಳೆದುಕೊಳ್ಳುತ್ತದೆ. ಆದರೆ ಅಲ್ಲಿನ ಕೆಲ ಸಿಬ್ಬಂದಿ ರೋಗಿಗಳೊಟ್ಟಿಗೆ ವರ್ತಿಸುವ ರೀತಿ ಮತ್ತಷ್ಟು ಕೀಳರಿಮೆಗೆ ಎಡೆ ಮಾಡಿಕೊಡುತ್ತಿದೆಯೇ ಹೊರತು ಸೋಂಕಿತರೊಡನೆ ಆಪ್ತ ಸಮಾಲೋಚನೆ ನಡೆಸುವ, ಅವರಿಗೆ ಧೈರ್ಯ, ಸಾಂತ್ವನ ಹೇಳುವುದು ತೀರಾ ವಿರಳ.
ಎಚ್‌ಐವಿ ಸೋಂಕು:ಭಾರತದ ಸ್ಥಿತಿ:
ಶೇ. 90ರಷ್ಟು ಎಚ್‌ಐವಿ ಸೋಂಕಿತ ಮಕ್ಕಳು ಭಾರತ ಮತ್ತು ದಕ್ಷಿಣ ಏಶ್ಯಾದವರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ‘ಅಂತರಾಷ್ಟ್ರೀಯ ಮಕ್ಕಳ ತುರ್ತುನಿಧಿ’ ವರದಿ ಮಾಡಿದೆ. ಅಂದಾಜಿನ ಪ್ರಕಾರ 2017ರಲ್ಲಿ 0-19 ವರ್ಷದವರ ಪೈಕಿ ಸುಮಾರು 1,20,000 ಸೋಂಕಿತ ಮಕ್ಕಳು, ಹದಿಹರೆಯದವರು ಭಾರತದವರಾಗಿದ್ದಾರೆ. ಭಾರತವನ್ನು ಹೊರತುಪಡಿಸಿ ಪಾಕಿಸ್ತಾನದಲ್ಲಿ 5,800, ನೇಪಾಳದಲ್ಲಿ 1,600 ಮತ್ತು ಬಾಂಗ್ಲಾದೇಶದಲ್ಲಿ 1,000ಕ್ಕೂ ಕಡಿಮೆ ಮಕ್ಕಳು ಎಚ್‌ಐವಿ ಸೋಂಕಿತರಾಗಿದ್ದಾರೆ. ಜಾಗತಿಕವಾಗಿ ಮೂರು ಮಿಲಿಯನ್ ಮಕ್ಕಳು ಹಾಗೂ ಹದಿಹರೆಯದವರು ಸೋಂಕುಳ್ಳವರಾಗಿದ್ದಾರೆ. ಇತರ ದೇಶಗಳಿಗೆ ಹೋಲಿಸಿಕೊಂಡರೆ ಭಾರತದ ಪರಿಸ್ಥಿತಿ ತೀರಾ ಶೋಚನೀಯ. ಕಾರಣಗಳೇನೂ ಎಲ್ಲೋ ದೂರದಲ್ಲಿಲ್ಲ. ಇಲ್ಲೇ ನಮ್ಮ ಕಾಲಬುಡದಲ್ಲಿರುತ್ತವೆ. ಆದರೆ ಮಡಿವಂತಿಕೆಯ ಮುಸುಕೆಳೆದೆಸೆದು ನೋಡಬೇಕಷ್ಟೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ‘‘ವಯಸ್ಕರಲ್ಲಿನ ಎಚ್‌ಐವಿ ಪ್ರಮಾಣ ಕಡಿಮೆಯಾಗಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಎಚ್‌ಐವಿ/ಏಡ್ಸ್ ಸೋಂಕಿತರ ಸಂಖ್ಯೆ ಶೇ. 25ರಷ್ಟು ಕುಸಿದಿದ್ದು ಆ ಮೂಲಕ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ 9ನೇ ಸ್ಥಾನಕ್ಕೆ ಇಳಿದಿದೆ’’ ಎಂದು ವರದಿ ಮಾಡಿದೆ. ಇದೇನು ಸಮಾಧಾನಕಾರಿ ಸಂಗತಿಯಲ್ಲ. ಆದರೆ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚಿ ನೋಡಿದರೆ ಇದರಲ್ಲಿ ನೈಜತೆಗೆ ಹತ್ತಿರವಾದ ಅಂಶಗಳೆಷ್ಟು ಎಂಬುದು ಅರಿವಾಗುತ್ತದೆ. ಮೇಲ್ನೋಟಕ್ಕೆ ಎಲ್ಲವೂ ಸುಧಾರಿಸುತ್ತಿದೆ ಎನಿಸಿದರೂ ಅದರಾಳಕ್ಕೆ ಇಳಿದು ಸೂಕ್ಷ್ಮವಾಗಿ ಗಮನಿಸಿದೆ ಪರಿಸ್ಥಿತಿಯ ಸ್ಥಿತಿಗತಿ ಅರಿವಾಗುತ್ತದೆ.
‘‘ನಮ್ಮಲ್ಲಿ ಖಾಯಿಲೆಯ ಪ್ರಮಾಣ ಇಳಿಕೆಯಾಗಿದೆ ಅಥವಾ ಸಂಪೂರ್ಣ ಇಲ್ಲವಾಗಿದೆ’’ ಎಂದು ಜಾಗತಿಕ ಮಟ್ಟದಲ್ಲಿ ತೋರಿಸಿಕೊಳ್ಳುವ ತೆವಲು ಸರಕಾರಗಳಿಗೆ. ಅಂಕಿಅಂಶಗಳಂತೂ ತಲೆಬುಡವಿಲ್ಲದ ತರ್ಕ. ಆದರೆ ತಿಳಿದೋ ತಿಳಿಯದೆಯೋ ಸೋಂಕಿಗೆ ಬಲಿಯಾದವರ ಪಾಡು ಅರಣ್ಯ ರೋದನ. ಗುಂಪಿನಲ್ಲಿ ಉದ್ದುದ್ದ ಭಾಷಣ ಬಿಗಿದು ಹೊರಗೆ ಬಂದಂತೆ ವರ್ತನೆ ಯಥಾಸ್ಥಿತಿ. ಸಹಜೀವಿಯೊಂದು ನೊಂದಾಗ ಅದಕ್ಕೆ ಸ್ಪಂದಿಸುವುದರ ಹೊರತು ಮತ್ತಷ್ಟು ಕೀಳರಿಮೆಗೆ ಒಳಗಾಗುವಂತಹ ವರ್ತನೆ ಸಲ್ಲ. ಅನುಕಂಪದ ದೃಷ್ಟಿಯಿಂದ ನೋಡುವುದು ಸಹ ಆತಂಕಕಾರಿಯೇ.
ಏಡ್ಸ್ ಕುರಿತಂತೆ ಅಂದಿಗೆ ಜಾಗೃತಿ ಮೂಡಿಸಿದ್ದ, ಎಚ್‌ಐವಿ ಸೋಂಕಿತರಾಗಿದ್ದರೂ ನಿರ್ಭೀತಿಯಿಂದ ಹೇಳಿಕೊಳ್ಳುತ್ತಿದ್ದ, ಅದೆಷ್ಟೋ ಸೋಂಕಿತರಿಗೆ ಬದುಕುವ ಭರವಸೆಯನ್ನು ಮೂಡಿಸಿದ್ದ, ಸೋಂಕಿತರ, ನೊಂದವರ ಧನಿಯಾಗಿದ್ದ ವೀಣಾಧರಿಯವರನ್ನು ಬಿಟ್ಟರೆ ಇಲ್ಲಿಯವರೆಗೆ ಅಂತಹವರು ತೀರಾ ವಿರಳ. ಸೋಂಕಿತರನ್ನೂ ಜೀವವೆಂದು, ಸಹ ಮನುಷ್ಯರೆಂದು ಭಾವಿಸುವ ಮನಸ್ಸುಗಳು ಬೇಕಿದೆ. ಸರಕಾರವು ಎಚ್‌ಐವಿ ಪೀಡಿತರ ಪರವಾದ ನೈಜ, ಪಾರದರ್ಶಕ ಕ್ರಮಗಳನ್ನು ಜಾರಿಗೊಳಿಸಿ ಅವುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡದ ಹೊರತು ಎಚ್‌ಐವಿ ಬಾಧಿತರ ಪರಿಸ್ಥಿತಿ ಸುಧಾರಣೆಯಾಗುವುದು ಬಿಸಿಲ ನಾಡಲ್ಲಿ ಮರೀಚಿಕೆ ಕಂಡಂತೆ.

Writer - ಪ್ರದೀಪ ಟಿ. ಕೆ.

contributor

Editor - ಪ್ರದೀಪ ಟಿ. ಕೆ.

contributor

Similar News