ವಿಧಾನ ಪರಿಷತ್ ಸಭಾಪತಿಯಾಗಿ ಪ್ರತಾಪ್ ಚಂದ್ರ ಶೆಟ್ಟಿ ಆಯ್ಕೆ

Update: 2018-12-12 14:03 GMT

ಬೆಳಗಾವಿ, ಡಿ.12: ವಿಧಾನ ಪರಿಷತ್‍ನ ನೂತನ ಸಭಾಪತಿಯಾಗಿ ಕಾಂಗ್ರೆಸ್‍ನ ಹಿರಿಯ ಮುಖಂಡ ಕೆ.ಪ್ರತಾಪ ಚಂದ್ರಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ಸುವರ್ಣಸೌಧದ ಪರಿಷತ್ ಸಭಾಂಗಣದಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಅವರು ನೂತನ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರ ಆಯ್ಕೆಯನ್ನು ಪ್ರಕಟಿಸಿದರು. ತದನಂತರ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪರಿಷತ್ ಸಭಾನಾಯಕಿ ಡಾ.ಜಯಮಾಲ ರಾಮಚಂದ್ರ, ಕಾನೂನು ವ್ಯವಹಾರಗಳ ಸಚಿವ ಕೃಷ್ಣೇಭೈರೇಗೌಡ, ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಐವನ್ ಡಿಸೋಜ ಅವರು ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿಗಳ ಪೀಠಕ್ಕೆ ಬರಮಾಡಿಕೊಂಡರು. ಬಳಿಕ, ಸದಸ್ಯರೆಲ್ಲಾ ಮೇಜು ತಟ್ಟಿ ನೂತನ ಸಭಾಪತಿಗಳನ್ನು ಅಭಿನಂದಿಸಿದರು.

ನೂತನ ಸಭಾಪತಿ ಆಯ್ಕೆ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಭಾಪತಿಗಳ ಸ್ಥಾನಕ್ಕೆ ನಿಮ್ಮಂಥ ಹಿರಿಯರು ಆಯ್ಕೆಯಾಗಿರುವುದು ಅತ್ಯಂತ ಸೂಕ್ತ ಮತ್ತು ಗೌರವವೂ ಹೌದು. ಒಂದು ಬಾರಿ ವಿಧಾನಸಭೆಯ ಸದಸ್ಯರಾಗಿ, ಮೂರು ಬಾರಿ ಮೇಲ್ಮನೆ ಸದಸ್ಯರಾಗಿರುವ ನಿಮ್ಮಂಥವರು ಸಭಾಪತಿ ಸ್ಥಾನದಲ್ಲಿ ಉಪಸ್ಥಿತರಾಗಿರುವುದು ಈ ಸದನಕ್ಕೂ ಹಾಗೂ ಪೀಠಕ್ಕೆ ಗೌರವವನ್ನು ಹೆಚ್ಚಿಸಿದೆ ಎಂದು ಬಣ್ಣಿಸಿದರು.

ಶತಮಾನಗಳ ಇತಿಹಾಸ ಹೊಂದಿರುವ ಕರ್ನಾಟಕ ವಿಧಾನ ಪರಿಷತ್‍ಗೆ ಈ ಹಿಂದೆ ಅತ್ಯುತ್ತಮ ಸಂಸದೀಯ ಪಟುಗಳು, ಬುದ್ದಿಜೀವಿಗಳು ಆಯ್ಕೆಯಾಗಿದ್ದರು. ಅದೇ ರೀತಿ ನೀವು ಕೂಡ ಪಕ್ಷಾತೀತವಾಗಿ ಸದನದ ನೀತಿ ನಿಯಮಗಳನ್ನು ಎತ್ತಿ ಹಿಡಿಯುವ ವಿಶ್ವಾಸ ನಮಗಿದೆ. ನಿಮ್ಮನ್ನು ಸಭಾಪತಿ ಸ್ಥಾನಕ್ಕೆ ಪರಿಗಣಿಸಲಾಗಿದೆ ಎಂದು ಕೇಂದ್ರ ವರಿಷ್ಠರಿಗೆ ಹೇಳಿದಾಗ ಅವರು ಕೂಡ ಮರು ಮಾತನಾಡಲಿಲ್ಲ. ನಿಮ್ಮ ವ್ಯಕ್ತಿತ್ವ, ಹಿನ್ನೆಲೆ, ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ವರಿಷ್ಠರು ನಿಮ್ಮ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿಮ್ಮ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಲ್ಪಾವಧಿಗೆ ಸಭಾಪತಿಗಳಾಗಿದ್ದ ಬಸವರಾಜ್ ಹೊರಟ್ಟಿ ಸಹ ಅತ್ಯುತ್ತಮವಾಗಿ ಸದನ ನಡೆಸಿಕೊಟ್ಟಿದ್ದಾರೆ. ವೈಯಕ್ತಿಕವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಪರಮೇಶ್ವರ್ ಹೇಳಿದರು.

ಸಭಾನಾಯಕಿ ಡಾ.ಜಯಮಾಲ ಮಾತನಾಡಿ, ಬ್ಯಾಂಕ್ ಉದ್ಯೋಗಿಯಾಗಿ ನಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ರಾಜಕಾರಣಕ್ಕೆ ಬಂದಿರುವ ನಿಮ್ಮಂಥವರು ಸಭಾಪತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಒಂದು ಬಾರಿ ವಿಧಾನಸಭೆಗೆ, ಮೂರು ಬಾರಿ ಮೇಲ್ಮನೆಗೆ ಆಯ್ಕೆಯಾಗಿ ಅನೇಕ ಏಳುಬೀಳನ್ನು ಕಂಡು ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದೀರಿ. ಕೆಲವು ಸಂದರ್ಭಗಳಲ್ಲಿ ಸಮಾಜಮುಖಿಯಾಗಿ ನೀವು ಕೇಳಿರುವ ಪ್ರಶ್ನೆಗಳು ನಮ್ಮೆಲ್ಲರಿಗೂ ಅನುಕರುಣೀಯ. ಸಭಾಪತಿಯಂತಹ ಉನ್ನತ ಹುದ್ದೆಗೆ ನಿಮ್ಮನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದರು.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಮಾತನಾಡಿ, ಸೈದ್ದಾಂತಿಕವಾಗಿ ಪ್ರತಾಪ ಚಂದ್ರಶೆಟ್ಟಿ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಅವರ ವಿರುದ್ಧ ಈವರೆಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಮೂರು ದಶಕಗಳಿಂದ ಯಾವುದೇ ವಿವಾದವಿಲ್ಲದೆ ರಾಜಕಾರಣ ಮಾಡಿದ್ದೀರಿ. ಒಂದು ರೀತಿ ನೀವು ಕರಾವಳಿಯ ಭೀಷ್ಮ ಇದ್ದ ಹಾಗೆ. ಈ ಕಲಾಪವನ್ನು ಅರ್ಥಪೂರ್ಣವಾಗಿ ನಡೆಸಿ, ಹಿಂದಿನವರು ನಡೆಸಿಕೊಂಡು ಬಂದ ಸಂಪ್ರದಾಯ ಹಾಗೂ ಘನತೆಯನ್ನು ಎತ್ತಿ ಹಿಡಿಯುತ್ತೀರಿ ಎಂಬ ವಿಶ್ವಾಸ ನಮಗಿದೆ ಎಂದರು.

"ಕರಾವಳಿ ಕೈಯಲ್ಲಿ ಸದನ"
ಈ ಸದನದಲ್ಲಿ ಪ್ರಮುಖ ಮೂರು ಹುದ್ದೆಗಳನ್ನು ಉಡುಪಿ ಜಿಲ್ಲೆಯವರು ಅಲಂಕರಿಸಿರುವುದು ವಿಶೇಷ. ಸಭಾನಾಯಕಿಯಾಗಿರುವ ಡಾ.ಜಯಮಾಲ, ವಿರೋಧ ಪಕ್ಷದ ನಾಯಕರಾಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಸಭಾಪತಿಗಳಾಗಿರುವ ಪತಾಪ ಚಂದ್ರ ಶೆಟ್ಟಿ ಒಂದೇ ಜಿಲ್ಲೆಯವರು. ಈ ಸದನಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಮುಂದುವರೆಸಿಕೊಂಡು ಹೋಗುವ ಸವಾಲು ನಿಮ್ಮ ಮುಂದಿದೆ ಎಂದು ಸಚಿವ  ಕೃಷ್ಣೇಭೈರಗೌಡ ನುಡಿದರು. 

ಸದನ ಕಷ್ಟ
ಸಭಾಪತಿಯಾಗಿ ನನಗೆ ಬಹಳ ಅನುಭವ ಆಗಿದೆ. ಬೆಳಗಾವಿಯಲ್ಲಿ ಸಭಾಪತಿಯಾಗಿ ಈ ಭಾಗದ ಸಮಸ್ಯೆಗೆ ದನಿಯಾಗಬೇಕೆಂಬ ಬಯಕೆ ಇತ್ತು. ಇದಕ್ಕೆ ಎರಡು ದಿನವಾದರೂ ಇಲ್ಲಿ ಸದನದಲ್ಲಿ ಭಾಗಿಯಾಗಿದ್ದಕ್ಕೆ ತೃಪ್ತಿ ಇದೆ. ಇನ್ನೂ, ಸದನವನ್ನು ನೀತಿ-ನಿಯಮಗಳಂತೆ ನಡೆಸುವುದು ಕಷ್ಟದ ಕೆಲಸವಾಗಿದೆ. ಸಭಾಪತಿ ನ್ಯಾಯಾಧೀಶರಂತೆ ಇರಬೇಕು. ಎಲ್ಲರಿಗೂ. ಅದರಲ್ಲೂ ಹೊಸಬರಿಗೆ ಹೆಚ್ಚಿನ ಅವಕಾಶ ನೀಡಬೇಕು.
-ಬಸವರಾಜ ಹೊರಟ್ಟಿ, ನಿರ್ಗಮಿತ ಪರಿಷತ್ತು ಸಭಾಪತಿ

'ಸೂಟು ಹಾಕಿಕೊಳ್ಳಿ'
ಈ ಹಿಂದಿನ ಸಭಾಪತಿ ಸೂಟು ಹಾಕಿಕೊಂಡು ಬರುತ್ತಿದ್ದರು.ಅದೇ ರೀತಿ, ನಾಳೆಯಿಂದ ನೀವು ಸಹ ಸೂಟು ಹಾಕಿಕೊಂಡು ಸಭಾಪತಿ ಸ್ಥಾನದಲ್ಲಿ ಕುಳಿದುಕೊಳ್ಳಬೇಕು ಎಂದು ಪರಿಷತ್ತು ಸದಸ್ಯ ರಿಝ್ವಾನ್ ಆರ್ಶದ್ ನೂತನ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರಿಗೆ ಹೇಳಿದರು.

'ಉತ್ತರಕ್ಕೆ ಅನ್ಯಾಯ'

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ವೀಕರ್ ಹಾಗೂ ಪರಿಷತ್ತು ಸಭಾಪತಿ ಸೇರಿದಂತೆ ಎಲ್ಲವೂ ದಕ್ಷಿಣ ಮತ್ತು ಕರಾವಳಿ ಭಾಗದ ಮುಖಂಡರಿಗೆ ದೊರೆತಿದೆ. ಆದರೆ, ಉತ್ತರ ಕರ್ನಾಟಕಕ್ಕೆ ಹಿಂದಿನಿಂದಲೂ ಅನ್ಯಾಯವಾಗುತ್ತಿದೆ ಎಂದು ಸಭಾಪತಿ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ನ ಎಸ್.ಆರ್.ಪಾಟೀಲ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

"ಹೊರಟ್ಟಿ ಅನ್ನು ಮಂತ್ರಿ ಮಾಡೋಣ'
ಬಸವರಾಜ ಹೊರಟ್ಟಿ ಅವರು ಹಿರಿಯರು. ಅವರನ್ನು ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಮಾಡೋಣ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಸದನದಲ್ಲಿ ಹೇಳುತ್ತಿದ್ದಂತೆ ಎದ್ದು ನಿಂತ, ಜೆಡಿಎಸ್ ನ ಶರವಣ ಅವರು, ಹೌದು, ಮಾಡೋಣ. ಆದರೆ, ಕಾಂಗ್ರೆಸ್ ಕೋಟಾದಲ್ಲಿ ಅವರಿಗೆ ಸ್ಥಾನ ನೀಡಿ. ನಾವು ಹೋರಾಟ ಮಾಡುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News