'ನಕಲಿ ಭರವಸೆಯ ಮೋದಿ ಬೇಡ, ಹಿಂದುತ್ವದ ಐಕಾನ್ ಯೋಗಿ ಬೇಕು': ವಿಧಾನಸಭಾ ಚುನಾವಣೆ ಸೋಲಿನ ಬೆನ್ನಿಗೆ ಕಾಣಿಸಿದ ಪೋಸ್ಟರ್

Update: 2018-12-12 10:53 GMT

ಲಕ್ನೋ, ಡಿ.12: ವಿಧಾನಸಭಾ ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಬಿಜೆಪಿ ಸೋಲುಂಡ ಕೆಲವೇ ಗಂಟೆಗಳಲ್ಲಿ ‘ಯೋಗಿ ಫಾರ್ ಪಿಎಂ' ಎಂದು ಹ್ಯಾಶ್ ಟ್ಯಾಗ್ ಜತೆ ಬರೆಯಲಾದ ಒಂದು ಪೋಸ್ಟರ್ ಗಳು ಲಕ್ನೋದಲ್ಲಿ ಕಾಣಿಸಿಕೊಂಡಿದೆ ಎಂದು jantakareporter.com ವರದಿ ಮಾಡಿದೆ.

ಉತ್ತರ ಪ್ರದೇಶ ನವನಿರ್ಮಾಣ ಸೇನಾ ಎಂಬ ಸಂಘಟನೆಯ ಹೆಸರಿನಲ್ಲಿ ಹಾಕಲಾಗಿರುವ ಈ ಪೋಸ್ಟರಿನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಚಿತ್ರವನ್ನು ಮುದ್ರಿಸಲಾಗಿದೆಯಲ್ಲದೆ ‘ಯೋಗಿ ಲಾವೋ-ದೇಶ್ ಬಚಾವೋ' ಎಂಬ ಘೋಷವಾಕ್ಯವನ್ನೂ ಬರೆಯಲಾಗಿದೆ. ಮುಂದಿನ ವರ್ಷ ಈ ನಿರ್ದಿಷ್ಟ ಸಂಘಟನೆ ಆಯೋಜಿಸಲಿರುವ ಧಾರ್ಮಿಕ ಸಮಾವೇಶವನ್ನು ಪ್ರಚುರ ಪಡಿಸುವ ಉದ್ದೇಶದಿಂದ ಹಾಕಲಾದ ಪೋಸ್ಟರಿನಲ್ಲಿ ಮೇಲಿನಂತೆ ಬರೆಯಲಾಗಿದೆ.

`ಜುಮ್ಲೆಬಾಝಿಯ (ನಕಲಿ ಭರವಸೆಗಳು) ಇನ್ನೊಂದು ಹೆಸರು ಮೋದಿ, ಹಿಂದುತ್ವದ ಬ್ರ್ಯಾಂಡ್ ಐಕಾನ್ ಯೋಗಿ' ಎಂದೂ ಬರೆಯಲಾಗಿದೆ. ಈ ಪೋಸ್ಟರ್ ಹಾಕಿದವನೆಂದು ತಿಳಿಯಲಾದ ಅಮಿತ್ ಜನಿ ಎಂಬಾತ ಮೋದಿಯನ್ನು ಟೀಕಿಸಿ ಹಿಂದುತ್ವ ಅಜೆಂಡಾ ಮುಂದಿಟ್ಟ ಆದಿತ್ಯನಾಥ್ ರನ್ನು ಹೊಗಳಿದ್ದಾನೆ. ಆದಿತ್ಯನಾಥ್ ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡದೇ ಇದ್ದಲ್ಲಿ ಹಿಂದುಗಳು ಬಿಜೆಪಿಗೆ ಮತ ನೀಡುವುದಿಲ್ಲವೆಂದು ಮುಂದಿನ ಫೆಬ್ರವರಿಯಲ್ಲಿ ನಡೆಯುವ ಧಾರ್ಮಿಕ ಸಮಾವೇಶದಲ್ಲಿ ಘೋಷಿಸಲಾಗುವುದು ಎಂದೂ ಆತ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News