ಡಿ.14: ಕೊಡಗು ಪ್ರಕೃತಿ ವಿಕೋಪದ ನೈಜ ಘಟನೆಗಳನ್ನಾಧರಿಸಿದ ಪುಸ್ತಕ ಬಿಡುಗಡೆ

Update: 2018-12-12 12:18 GMT

ಮಡಿಕೇರಿ, ಡಿ.12 : ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದ ನೈಜ ಘಟನೆಗಳನ್ನಾಧರಿಸಿ ಪತ್ರಕರ್ತ ರವಿ ಪಾಂಡವಪುರ ರಚಿಸಿರುವ ‘ಕಥೆ ಹೇಳುವೆ ನನ್ನ’ (ಕೊಡಗಿನ  ನೊಂದ ಹೃದಯಗಳು.. ಮಿಡಿದ ಮನಗಳು) ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿ.14ರಂದು ಮೈಸೂರು ವಿವಿಯ ರಾಣಿ ಬಹದ್ದೂರು ಸಭಾಂಗಣದಲ್ಲಿ ನಡೆಯಲಿದೆ.

ಬುಧವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪತ್ರಕರ್ತ ಹಾಗೂ ಲೇಖಕ ರವಿ ಪಾಂಡವಪುರ ಅವರು, ಮೈಸೂರಿನ ಅಭಿರುಚಿ ಪ್ರಕಾಶನದ ವತಿಯಿಂದ ಹೊರತರಲಾಗಿರುವ ಪುಸ್ತಕದಲ್ಲಿ ಕಳೆದ ಆಗಸ್ಟ್ ನಲ್ಲಿ ಭಾರಿ ಜಲಪ್ರಳಯದಿಂದ ಕೊಡಗಿನಲ್ಲಿ ಉಂಟಾದ ನೈಜ ಪ್ರಕರಣಗಳನ್ನೇ ಕಥೆಗಳನ್ನಾಗಿ ನಿರೂಪಿಸಲಾಗಿದ್ದು, 125 ಪುಟಗಳಲ್ಲಿ 29 ಕಥೆಗಳನ್ನು ರಚಿಸಲಾಗಿದೆ. ತಂದೆ ತಾಯಿಯನ್ನು ಕಳೆದುಕೊಂಡವರು, ಮಕ್ಕಳನ್ನು ಕಳೆದುಕೊಂಡವರು, ಜೀವನವನ್ನೇ ಕಳೆದುಕೊಂಡ ಸಂತ್ರಸ್ತರು, ಊರುಗೋಲಾಗಿದ್ದ ಬದುಕನ್ನೇ ಕಳೆದುಕೊಂಡವರ ಬವಣೆಗಳು ಈ ಕಥೆಗಳ ವಸ್ತು ವಿಷಯವಾಗಿದ್ದು, ಪ್ರತಿಯೊಂದು ಕಥೆಯೂ ಓದುಗರ ಮನಕಲಕುವಂತಿದೆ ಎಂದು ಹೇಳಿದರು.

ಕೊಡಗಿನ ಜಲಪ್ರಳಯದಿಂದ ಸಂಭವಿಸಿದ ಅವಘಡಗಳನ್ನು, ಮಿಡಿದ ಮನಗಳ ವ್ಯಥೆಗಳನ್ನು, ಮಾನವೀಯತೆ ನೆಲೆಗಟ್ಟಿನಲ್ಲಿ ಮೂಡಿದ ಸಾರ್ವಜನಿಕ, ಮಾಧ್ಯಮಗಳ, ಸೈನ್ಯದ ಸಹಕಾರಗಳನ್ನು ಎಳೆಎಳೆಯಾಗಿ ಹೇಳುವ ಪ್ರಯತ್ನವನ್ನು ಪುಸ್ತಕದಲ್ಲಿ ಮಾಡಲಾಗಿದೆ. ಒಂದೊಂದು ಕಥೆಯೂ ವಿಭಿನ್ನವಾದ ನೋವನ್ನು ಸಂಕಷ್ಟವನ್ನು ಬಿಡಿಸುತ್ತವೆ. ಕಥೆಗೆ ಪೂರಕವಾಗಿ ಕಲಾವಿದ ಯೋಗಾನಂದ ಅವರು ರೇಖಾಚಿತ್ರಗಳನ್ನು ಬಿಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಜಲಪ್ರಳಯದಲ್ಲಿ ನಾಪತ್ತೆಯಾದ ಬಾಲಕಿ ಮಂಜುಳಾ ಅವರ ತಂದೆ ಸೋಮಯ್ಯ ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದು, ಪುಸ್ತಕದ ಕುರಿತು ಹಿರಿಯ ಪತ್ರಕರ್ತ ಅನಂತ ಚಿನಿವಾರ್ ಅವರು ಮಾತನಾಡಲಿದ್ದಾರೆ. ಕೊಡಗಿನ ನೆರೆ ವೇಳೆ ಉತ್ತಮ ಕೆಲಸ ಮಾಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹಾಗೂ ಎಸ್‍ಪಿ ಸುಮನ್ ಡಿ. ಪನ್ನೇಕರ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಪುಸ್ತಕವು 105 ರೂ. ಮುಖಬೆಲೆ ಹೊಂದಿದ್ದು, ಪುಸ್ತಕ ಲೋಕಾರ್ಪಣೆಯಂದು ಪುಸ್ತಕ ಮಾರಾಟದಿಂದ ಬಂದ ಎಲ್ಲಾ ಹಣವನ್ನು ಕೊಡಗಿನ ನೆರೆ ಸಂತ್ರಸ್ತರ ನಿಧಿಗೆ ನೀಡಲಾಗುವುದು ಎಂದು ಲೇಖಕ ರವಿಪಾಂಡವಪುರ ಇದೇ ಸಂದರ್ಭ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮೈಸೂರಿನ ರವಿಚಂಗಪ್ಪ, ನಂದೀಶ್ ಹಾಗೂ ನಂಜೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News