ಕಸದ ಗುತ್ತಿಗೆ ನಿರ್ವಹಣೆಯಲ್ಲಿ ಅವ್ಯವಹಾರ: ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ; ಡಾ.ಜಿ.ಪರಮೇಶ್ವರ್

Update: 2018-12-12 12:32 GMT

ಬೆಳಗಾವಿ,ಡಿ.12: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜೆ.ಪಿ.ಉದ್ಯಾನವನ ವಾರ್ಡ್ ನಂ.17ರಲ್ಲಿ  ಕಸದ ಗುತ್ತಿಗೆ ನಿರ್ವಹಣೆಯಲ್ಲಿ ನಡೆದಿರುವ ಅಕ್ರಮದ ವಿರುದ್ಧ ಎಸಿಬಿ ತನಿಖೆ ನಡೆಸುತ್ತಿದ್ದು, ಬಿಬಿಎಂಪಿ ಸದಸ್ಯರೂ ಸೇರಿದಂತೆ ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ಬುಧವಾರ ವಿಧಾನಸಭೆಯಲ್ಲಿ ಶಾಸಕ ಮುನಿರತ್ನ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಪರಮೇಶ್ವರ್, ಗುತ್ತಿಗೆ ನಿರ್ವಹಣೆಯಲ್ಲಿ ಅಕ್ರಮ ನಡೆದಿರುವುದನ್ನು ಖುದ್ದಾಗಿ ಶಾಸಕರೇ ಪರಿಶೀಲನೆ ಮಾಡಿ ಬಯಲಿಗೆ ತಂದಿದ್ದಾರೆ. ಬಿಬಿಎಂಪಿ ಆಯುಕ್ತರು, ಜಂಟಿ ಆಯುಕ್ತರು ಪರಿಶೀಲನೆ ನಡೆಸಿ ಅವ್ಯವಹಾರವನ್ನು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಜಂಟಿ ಆಯುಕ್ತರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಿರಿಯ ಆರೋಗ್ಯ ಪರಿವೀಕ್ಷಕರು ಜವಾಬ್ದಾರರು ಎಂದು ಆಯುಕ್ತರು ಸರಕಾರಕ್ಕೆ ವರದಿ ನೀಡಿದ್ದಾರೆ. ಗುತ್ತಿಗೆದಾರರಾದ ಓಂ ಎಸ್‍ಎಲ್‍ವಿ ಕನ್‍ಸ್ಟ್ರಕ್ಷನ್ ಮಾಲಕ ವೆಂಕಟೇಶ್ ವಿರುದ್ಧ ಯಶಂವತಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಿಚಾರಣೆಯನ್ನು ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ಶಾಸಕ ಮುನಿರತ್ನ  ಮಾತನಾಡಿ, ಬಿಬಿಎಂಪಿ ಸದಸ್ಯರ ಶಿಫಾರಸು ಆಧರಿಸಿ ತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಿರುವುದಾಗಿ ಸರಕಾರ ಉತ್ತರಿಸಿದೆ. ಆದರೆ, ಶಿಫಾರಸು ಮಾಡಿದ ದಾಖಲೆಗಳಿಲ್ಲ ಎನ್ನಲಾಗುತ್ತಿದೆ. ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಬಿಬಿಎಂಪಿ ಸದಸ್ಯರ ವಿರುದ್ಧ ಕೆಎಂಸಿ ಕಾಯ್ದೆ 1976 ಸೆಕ್ಷನ್ 26/1 ಕೆ ಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ವಾದಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಪರಮೇಶ್ವರ್, ಕೆಎಂಸಿ ಕಾಯ್ದೆಯಲ್ಲಿ ಸದಸ್ಯರ ವಿರುದ್ಧ ಕ್ರಮ ಜರುಗಿಸಲು ಅವಕಾಶ ಇಲ್ಲ ಎಂದು ನಾನು ಹೇಳಿದ್ದೇನೆ. ಆದರೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅವಕಾಶ ಇದೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News