ಒಪ್ಪಂದದ ವಿಚಾರದಲ್ಲಿ ರಾಜ್ಯ ಸರಕಾರದ ಪ್ರವೇಶ ಇಲ್ಲ: ಸಚಿವ ಕೆ.ಜೆ.ಜಾರ್ಜ್

Update: 2018-12-12 14:45 GMT

ಬೆಳಗಾವಿ, ಡಿ.12: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲಕರ ನಡುವಿನ ಒಪ್ಪಂದದ ವಿಚಾರದಲ್ಲಿ ರಾಜ್ಯ ಸರಕಾರ ಪ್ರವೇಶಿಸುವುದಿಲ್ಲ ಎಂದು ಸಕ್ಕರೆ ಹಾಗೂ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಬುಧವಾರ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು- ಮಾಲಕರ ನಡುವೆ ಒಪ್ಪಂದ ಮಾಡಿಕೊಂಡಂತೆ ನೂರಾರು ಕೋಟಿ ರೂ. ಬಾಕಿ ಉಳಿದಿದೆ. ಈ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲಕರ ಜೊತೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಬಾಕಿ ಹಣ ಪಾವತಿ ಕುರಿತಂತೆ ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಭರವಸೆಯನ್ನು ಸಕ್ಕರೆ ಕಾರ್ಖಾನೆ ಮಾಲಕರು ನೀಡಿದ್ದರು. ಹೀಗಾಗಿ, ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನರೇಂದ್ರ ಮೋದಿಯವರು ಮಾತ್ರ ದೇಶದ ಪ್ರಧಾನಿಯಾಗಬಹುದು ಎಂಬ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಅವರದು ಫ್ಯಾಸಿಸ್ಟ್ ಮನೋಭಾವ. ಹಾಗಾಗಿಯೇ ಇಂತಹ ಹೇಳಿಕೆ ನೀಡಲು ಸಾಧ್ಯ. ಪ್ರಧಾನಿ ಮೋದಿಯವರಿಗೆ ಅರ್ಹತೆ ಇರಬಹುದು. ಆದರೆ ಹಿಟ್ಲರ್ ವ್ಯವಸ್ಥೆ ಸರಿಯಲ್ಲ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News