ಸಚಿವ ರೇವಣ್ಣ ವಿರುದ್ಧ ಅಪಪ್ರಚಾರ: ಶಿಕ್ಷಕರನ್ನು ಅಮಾನತು ಮಾಡಿದ ಶಿಕ್ಷಣ ಇಲಾಖೆ

Update: 2018-12-12 14:58 GMT
ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು, ಡಿ. 12: ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣರನ್ನು ತಮ್ಮ ಸಹೋದ್ಯೋಗಿಯೊಂದಿಗೆ ಶಿಕ್ಷಕರೊಬ್ಬರು ನಿಂದಿಸಿ ಮಾತನಾಡಿದ್ದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಜೆಡಿಎಸ್ ಕಾರ್ಯಕರ್ತರು ಆಕ್ರೋಶಗೊಂಡು ದೂರು ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ಪ್ರಕರಣ ತನಿಖೆ ನಡೆಸಿದ ಪೊಲೀಸರು ಆ ಧ್ವನಿ ಆರೋಪಿಸಿರುವ ಶಿಕ್ಷಕರದ್ದೇ ಎಂದು ದೃಢೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರ ಮೇಲಿನ ಆರೋಪವನ್ನು ಪರಿಗಣಿಸಿ ಸಚಿವರ ಗೌರವಕ್ಕೆ ಕುಂದು ತಂದಿರುವ ಆಧಾರದ ಮೇಲೆ ಕರ್ನಾಟಕ ನಾಗರಿಕ ಸೇವಾ ನಿಯಮ 1966ರಡಿಯಲ್ಲಿ ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅರಕಲಗೂಡು ತಾಲೂಕಿನ ಬಿದನೂರುವಿನ ಸರಕಾರಿ ಶಾಲೆ ಶಿಕ್ಷಕರನ್ನೂ ಶಿಕ್ಷಣ ಇಲಾಖೆ ಅಮಾನತು ಮಾಡಿದೆ.

ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪರ ಮಾಡುತ್ತಿದ್ದ ಮತಯಾಚನೆ ದೃಶ್ಯಗಳನ್ನು ವಾಟ್ಸ್ ಆ್ಯಪ್ ಮೂಲಕ ಪ್ರಚಾರ ಮಾಡಿದ್ದರು. ಉಳಿದಂತೆ ಶಿಕ್ಷಕರಿಗೆ ಅಂಚೆ ಮತಪತ್ರ ನೀಡುವಂತೆ ಹಾಗೂ ಅಭ್ಯರ್ಥಿ ಮಂಜುಗೆ ಮತ ನೀಡುವಂತೆ ಮನವಿ ಮಾಡಿದ್ದನ್ನು ಪರಿಗಣಿಸಿ ಅಮಾನತು ಮಾಡಲಾಗಿದೆ.

ಡಿ. 4 ರಂದು ಶಿಕ್ಷಕರಿಗೆ ಅಮಾನತು ಆದೇಶ ನೀಡಲಾಗಿದ್ದು, ಶಿಕ್ಷಕರ ಪರ ವಕೀಲರ ಹೇಳಿಕೆಯನ್ವಯ ಉನ್ನತಾಧಿಕಾರಿಗಳು ಈ ಶಿಕ್ಷಕರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಡ ಹಾಕಿರುವುದೇ ಈ ಪ್ರಕರಣಕ್ಕೆ ಮೂಲ ಕಾರಣ. ಆ ಘಟನೆ ನಡೆದ 6 ತಿಂಗಳ ನಂತರ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಪ್ರಕರಣ ಕುರಿತಂತೆ ತನಿಖೆ ನಡೆಸದೆ ಶಿಕ್ಷಕರಿಗೆ ಅಮಾನತು ಆದೇಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News