ಸದನದಲ್ಲಿ ಹೊಸ ಶಾಸಕರಿಗೆ ಮಾರ್ಗದರ್ಶನದ ಅಗತ್ಯವಿದೆ: ಸಭಾಧ್ಯಕ್ಷ ರಮೇಶ್‍ ಕುಮಾರ್

Update: 2018-12-12 15:13 GMT

ಬೆಳಗಾವಿ, ಡಿ.12: ಹೊಸ ಶಾಸಕರು ಸದನದಲ್ಲಿ ಪ್ರಶ್ನೆ ಕೇಳುವುದು ಹೇಗೆ, ಸಚಿವರು ನೀಡುವ ಉತ್ತರಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆಂಬುದನ್ನು ಹಿರಿಯರು ಮಾರ್ಗದರ್ಶನ ಮಾಡಬೇಕೆಂದು ಸಭಾಧ್ಯಕ್ಷ ರಮೇಶ್‍ ಕುಮಾರ್ ತಿಳಿಸಿದರು.

ಕುಮುಟಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಅವರು ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದರು. ಅದಕ್ಕೆ ಅಧಿವೇಶನದಲ್ಲಿ ಉತ್ತರವನ್ನೂ ನೀಡಲಾಗಿತ್ತು. ಪೌರಾಡಳಿತ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಬದಲಾಗಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಉತ್ತರ ನೀಡಿದರು. ಆದರೆ, ಉಪ ಪ್ರಶ್ನೆ ಕೇಳುವಾಗ ಮೊದಲ ಬಾರಿಗೆ ಆಯ್ಕೆಯಾಗಿದ್ದ ಶಾಸಕ ದಿನಕರ್ ಶೆಟ್ಟಿ ಅವರು ತಬ್ಬಿಬ್ಬಾದರು. ತಾವು ಕೇಳಿದ ಲಿಖಿತ ಪ್ರಶ್ನೆಯನ್ನೇ ಓದಲು ಆರಂಭಿಸಿದರು. ಆಗ ಸ್ಪೀಕರ್ ಅವರು ಹೊಸ ಶಾಸಕರಿಗೆ ಶಾಸಕಾಂಗ ಸಭೆಯಲ್ಲಿ ಹಿರಿಯರು ಮಾರ್ಗದರ್ಶನ ಮಾಡಬೇಕೆಂದರು.

ಶಾಸಕ ಮಾಧುಸ್ವಾಮಿ ಅವರು ದಿನಕರ್ ಶೆಟ್ಟಿ ಅವರ ಪಕ್ಕ ಕುಳಿತು ಪ್ರಶ್ನೆ ಕೇಳುವ ರೀತಿ ಹೇಳಿಕೊಡುತ್ತಿದ್ದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಆಗ ಹೊಸ ಶಾಸಕರಿಗೆ ಇನ್ನಷ್ಟು ಧೈರ್ಯ ತುಂಬಿದ ಸ್ಪೀಕರ್, ಆತಂಕ ಪಡಬೇಡಿ, ನಿಮ್ಮ ಬಗ್ಗೆ ಸದನದಲ್ಲಿ ಗೌರವವಿದೆ, ಸಮಾಧಾನವಾಗಿ ಪ್ರಶ್ನೆ ಕೇಳಿ  ಎಂದರು.

ಕೊನೆಗೆ ದಿನಕರ್ ಶೆಟ್ಟಿ ಅವರು ಕಡಲ ಕೊರೆತ ದಿನೇ ದಿನೇ ಹೆಚ್ಚಾಗುತ್ತಿದೆ. ಲಕ್ಷಾಂತರ ಮನೆಗಳು ಕೊಚ್ಚಿ ಹೋಗುತ್ತಿವೆ. ಸರಕಾರ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ ಎಂದಾಗ, ಸರಕಾರದ ಪರವಾಗಿ ಉತ್ತರಿಸಿದ ಸಚಿವ ಶಿವಶಂಕರ್ ರೆಡ್ಡಿ, ಹೆಚ್ಚುವರಿ ಅನುದಾನಕ್ಕಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಅಂಗೀಕಾರಗೊಂಡ ನಂತರ ಹೆಚ್ಚುವರಿ ಅನುದಾನ ನೀಡುವುದಾಗಿ ಸಮಜಾಯಿಸಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News