ವಕ್ಫ್ ಆಸ್ತಿ ಅಕ್ರಮ ವಿಚಾರ: ಮಾಣಿಪ್ಪಾಡಿ ವರದಿ ಮಂಡನೆಗೆ ಹೈಕೋರ್ಟ್ ಆದೇಶ

Update: 2018-12-12 16:46 GMT

ಬೆಂಗಳೂರು, ಡಿ.12: ವಕ್ಫ್ ಆಸ್ತಿ ಅಕ್ರಮ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಕೂಡಲೇ ಮಂಡನೆ ಮಾಡಬೇಕೆಂದು ಧಾರವಾಡ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

2012ರಲ್ಲಿ 30 ಸಾವಿರ ಎಕರೆ ವಕ್ಫ್ ಆಸ್ತಿಯನ್ನು ಕಬಳಿಸಿರುವ ಕುರಿತ ಸಾಕ್ಷಿ ಸಹಿತ 7 ಸಾವಿರಕ್ಕೂ ಹೆಚ್ಚು ಪುಟಗಳ ವರದಿಯನ್ನು ಮಾಣಿಪ್ಪಾಡಿ ಸಲ್ಲಿಸಿದ್ದರು. ಆದರೆ, ವರದಿಯನ್ನು ಸದನದಲ್ಲಿ ಮಂಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತಡ ಮಾಡಿತ್ತು. ವರದಿ ತಡ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಲಾಗಿತ್ತು. ಅಲ್ಲದೆ, ವರದಿ ಮಂಡಿಸುವಂತೆ ಕೋರ್ಟ್ ಸೂಚಿಸಿದರೂ ವರದಿ ಮಂಡನೆಯಾಗಿರಲಿಲ್ಲ. ಆದೇಶ ಪುನರ್ ಪರಿಶೀಲಿಸುವಂತೆ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ನ್ಯಾಯಪೀಠವು ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆಗೆ ಆದೇಶ ನೀಡಿದೆ.

ಕಾಂಗ್ರೆಸ್ ಮುಖಂಡರಿಗೆ ಸಂಕಷ್ಟ: ಒಂದು ವೇಳೆ ವಕ್ಫ್ ಆಸ್ತಿ ಅಕ್ರಮ ಕುರಿತ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆಯಾದರೆ ಕೆಲ ಕಾಂಗ್ರೆಸ್ ಮುಖಂಡರಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ. ಅಲ್ಲದೆ, ಈಗ ಹಾಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ ವಿಚಾರವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಕಾದು ನೋಡಬೇಕಾಗಿದೆ. ಈ ವರದಿಯಲ್ಲಿ ಕಾಂಗ್ರೆಸ್ ಮುಖಂಡರ ಹೆಸರುಗಳಿವೆ ಎನ್ನಲಾಗುತ್ತಿದೆ. ಅಲ್ಲದೆ, ಎಚ್‌ಡಿಕೆ ಅವರು ವರದಿಯನ್ನು ಸದನದಲ್ಲಿ ಮಂಡಿಸುತ್ತಾರಾ ಅಥವಾ ಮುಂದೂಡುತ್ತಾರ ಅಥವಾ ಮತ್ತೊಂದು ಕಾನೂನು ಮಾರ್ಗ ಹುಡುಕುತ್ತಾರ ಎಂಬುದರ ಬಗ್ಗೆಯೂ ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News