ಎಂಆರ್ ಪಿಎಲ್ ನಲ್ಲಿ ಕನ್ನಡಿಗರಿಗೇ ಹೆಚ್ಚು ಹುದ್ದೆ: ಸಚಿವ ಕೆ.ಜೆ.ಜಾರ್ಜ್

Update: 2018-12-12 16:52 GMT

ಬೆಳಗಾವಿ, ಡಿ.12: ದಕ್ಷಿಣ ಕನ್ನಡ ಜಿಲ್ಲೆಯ ಎಂಆರ್ ಪಿಎಲ್ ನಲ್ಲಿ ಸ್ಥಳೀಯ ಮತ್ತು ಕನ್ನಡಿಗರಿಗೆ ಹೆಚ್ಚಿನ ಹುದ್ದೆ ದೊರೆತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಬುಧವಾರ ವಿಧಾನ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆ ಸದಸ್ಯ ಐವನ್ ಡಿಸೋಜಾ, ಎಂಆರ್ ಪಿಎಲ್ ನಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ಕೆ.ಜೆ.ಜಾರ್ಜ್, ಎಂಆರ್ ಪಿಎಲ್ ಘಟಕದಲ್ಲಿ 1,868 ಉದ್ಯೋಗಿಗಳಿದ್ದು, ಅದರಲ್ಲಿ 1,304 ಹುದ್ದೆಗಳಲ್ಲಿ ಕನ್ನಡಿಗರಿದ್ದಾರೆ. ಅದರಲ್ಲೂ ಗ್ರೂಪ್ ಎ ಮತ್ತು ಸಿ ನಲ್ಲೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವಿವರ ನೀಡಿದರು.

ಇನ್ನೂ, 2015ರ ಎಸ್.ಎಚ್.ಎಲ್.ಸಿ.ಸಿ ಸಭೆಯಲ್ಲಿ ಎಂಆರ್ ಪಿಎಲ್ ಘಟಕದ 4ನೇ ಹಂತದ ವಿಸ್ತರಣಾ ಯೋಜನೆಗಾಗಿ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲೂಕು ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು, ಮೂಳೂರು ಮತ್ತು ಕಂದಾವರ ಗ್ರಾಮಗಳ ಒಟ್ಟು 1050 ಎಕರೆ ಜಮೀನನ್ನು ಕೆಐಎಡಿಬಿ ಮುಖಾಂತರ ಭೂ ಸ್ವಾಧೀನಪಡಿಸಿ ಹಂಚಿಕೆ ಮಾಡಲು ನಿರ್ಣಯಿಸಲಾಗಿದೆ ಎಂದು ಹೇಳಿದರು.

ಕ್ರಮ: ರಾಜ್ಯ ವ್ಯಾಪ್ತಿ ಕೈಗಾರಿಕೆ ಉದ್ದೇಶಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ಪ್ರತಿ ಕುಟುಂಬದ ಓರ್ವರಿಗೆ ಉದ್ಯೋಗವಕಾಶ ನೀಡದೆ ಇದ್ದಲ್ಲಿ, ಕ್ರಮ ಕೈಗೊಳ್ಳಲು ಕೆ.ಜೆ.ಜಾರ್ಜ್ ಹೇಳಿದರು.

2014-19ನೇ ಕೈಗಾರಿಕಾ ನೀತಿ ಅನ್ವಯ ಸ್ಥಳೀಯರಿಗೆ ಒಟ್ಟಾರೆಯಾಗಿ ಕನಿಷ್ಟ 70ರಷ್ಟು ಉದ್ಯೋಗ ನೀಡಬೇಕೆಂದು ಹಾಗೂ ಭೂಮಿ ಕಳೆದುಕೊಂಡ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗವಕಾಶವನ್ನು ನೀಡಬೇಕೆಂದು ಷರತ್ತು ವಿಧಿಸಲಾಗಿದೆ. ಇದರಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News