ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್: ಇಬ್ಬರು ಬಜರಂಗದಳ ಮುಖಂಡರ ವಿರುದ್ಧ ಪ್ರಕರಣ ದಾಖಲು

Update: 2018-12-12 17:26 GMT

ಚಿಕ್ಕಮಗಳೂರು, ಡಿ.12: ದತ್ತ ಜಯಂತಿ ಅಂಗವಾಗಿ ಬುಧವಾರ ನಗರದಲ್ಲಿ ದತ್ತಮಲಾಧಾರಣೆ ಆರಂಭವಾಗಿದ್ದು, ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಸಂಬಂಧ ಪೋಸ್ಟ್ ಹಾಕಿದ ಆರೋಪದ ಮೇಲೆ ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ರಘು ಸಕಲೇಶಪುರ, ಪ್ರಾಂತ ಸಂಯೋಜಕ ಕೆ.ಆರ್.ಸುನೀಲ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ "ಕರ್ನಾಟಕದ ಅಯೋಧ್ಯೆ ಪೀಠವನ್ನು ಮುಕ್ತಗೊಳಿಸಲು ಕರಸೇವೆಗೆ ಸಜ್ಜಾಗಿ" ಎಂದು ಕೋಮು ಭಾವನೆ ಕೆರಳಿಸುವ ಪೋಸ್ಟ್ ಅನ್ನು ಹರಿಯ ಬಿಟ್ಟಿದ್ದಾರೆಂದು ಕರ್ನಾಟಕ ಕೋಮುಸೌಹಾರ್ದ ವೇದಿಕೆ ನಗರ ಠಾಣೆಗೆ 4 ದಿನಗಳ ಹಿಂದೆ ದೂರು ನೀಡಿತ್ತು. ಈ ದೂರಿನ ಮೇರೆಗೆ ಪೊಲೀಸರು ಈ ಇಬ್ಬರು ಬಜರಂಗದಳದ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದ ಮೂಲಕ ಯುವಕರಿಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಇವರ ಮೇಲೆ 153(ಎ), 505(1)(ಬಿ), 34, 35 ಸೆಕ್ಷನ್ ಅಡಿಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News