ರೈತರ ಬೆಳೆಗಳ ಬಗ್ಗೆ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಕೆ: ಚಾ.ನಗರ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ

Update: 2018-12-12 17:35 GMT

ಹನೂರು,ಡಿ.12: ರೈತರು ಬೆಳೆದ ಬೆಳೆಗಳ ಬಗ್ಗೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖಾಧಿಕಾರಿಗಳಿಂದ ಜಂಟಿ ಸಮೀಕ್ಷೆ ಮಾಡಿ ನಂತರ ಸರ್ಕಾರಕ್ಕೆ ವರದಿ ನೀಡಲಾಗುವುದು ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ತಿಳಿಸಿದರು.

ತಾಲೂಕಿನ ಮಂಗಲ, ಕಣ್ಣೂರು, ಅನಾಪುರ ಚೆನ್ನಾಲಿಂಗನಹಳ್ಳಿ ಲೊಕ್ಕನಹಳ್ಳಿ ಸೇರಿದಂತೆ ಇನ್ನಿತರ ಹಲವು ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ಮತ್ತು ಅವರ ತಂಡ ರೈತರ ಜಮೀನುಗಳಿಗೆ ದಿಢೀರ್ ಭೇಟಿ ನೀಡಿ ಜಮೀನುಗಳಲ್ಲಿ ಒಣಗಿ ನಿಂತ ಬೆಳೆಯನ್ನು ವೀಕ್ಷಿಸಿದರು. ನಂತರ ಹಲವು ರೈತರು ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ, ಈ ಭಾಗದಲ್ಲಿ ಮಳೆಯನ್ನು ನಂಬಿ ರೈತರು ಬಿತ್ತನೆ ಮಾಡಿದ್ದಾರೆ. ಮಳೆ ಸಕಾಲಕ್ಕೆ ಬಾರದೇ ಇರುವುದರಿಂದ ನಾವು ಬೆಳೆದ ಬೆಳೆಗಳು  ಒಣಗಿ, ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ಆಳಲು ತೋಡಿಕೊಂಡರು. ಅಲ್ಲದೇ, ಸೂಕ್ತ ಪರಿಹಾರವನ್ನು ಕೊಡಿಸುವಂತೆ ಮನವಿ ಮಾಡಿದರು  

ಬಳಿಕ ಜಿಲ್ಲಾಧಿಕಾರಿಗಳು ಮಾತನಾಡಿ ಪ್ರಾಥಮಿಕ ಹಂತದಲ್ಲಿ ರೈತರು ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ತುರ್ತಾಗಿ ಸಮೀಕ್ಷೆ ಮಾಡಿ ನಷ್ಟದ ಕುರಿತು ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ರೈತರ ಬಳಿ ಕುಡಿಯುವ ನೀರಿನ ಸಮಸ್ಯೆ ಹಾಗೂ ದನ ಕರುಗಳಿಗೆ ಮೇವಿನ ಸಮಸ್ಯೆಯ ಕುರಿತು ಚರ್ಚಿಸಿದ್ದರಲ್ಲದೆ ಹಲವು ಜಮೀನುಗಳಲ್ಲಿ ಬೆಳೆದಿದ್ದ ರಾಗಿ, ಮುಸುಕಿನ ಜೋಳದ ಬೆಳೆಗಳ ಬಗ್ಗೆ ರೈತರಿಂದ ಮಾಹಿತಿ ಪಡೆದರು.

ಈ ಸಂದರ್ಭ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಪೌಝಿಯಾ ತರನ್ನಮ್, ತಹಶೀಲ್ದಾರ್ ರಾಯಪ್ಪಹುಣಸಗಿ, ಹನೂರು ವಿಶೇಷ ತಹಶೀಲ್ದಾರ್ ಶಿವರಾಮ್ ಆರ್.ಐ ಮಹದೇವ್ ಸೇರಿದಂತೆ ಕೃಷಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News