ಚುನಾವಣೆಯಲ್ಲಿ ಸೋಲು: ಆಘಾತದಿಂದ ಇಬ್ಬರು ಅಭ್ಯರ್ಥಿಗಳು ಆಸ್ಪತ್ರೆಗೆ ದಾಖಲು

Update: 2018-12-12 17:49 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್, ಡಿ. 11: ತೆಲಂಗಾಣ ವಿಧಾನ ಸಭೆ ಚುನಾವಣೆ ಸೋಲಿನ ಆಘಾತಕ್ಕೆ ಒಳಗಾದ ಇಬ್ಬರು ದುರೀಣರು ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಲಗೊಂಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೋಮಾಟಿರೆಡ್ಡಿ ವೆಂಕಟ ರೆಡ್ಡಿ ಅವರು ಇದ್ದಕ್ಕಿದ್ದಂತೆ ನಿಶ್ಯಕ್ತಿಗೆ ಒಳಗಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪಲೈರ್ ಕ್ಷೇತ್ರದಲ್ಲಿ ತನ್ನ ಕಾಂಗ್ರೆಸ್ ಪ್ರತಿಸ್ಪರ್ಧಿ ಕಂಡಾಲ ಉಪೇಂದ್ರ ರೆಡ್ಡಿ ಅವರ ವಿರುದ್ಧ ಸೋತ ಬಳಿಕ ಟಿಆರ್‌ಎಸ್ ಅಭ್ಯರ್ಥಿ ತುಮ್ಮಾಲ ನಾಗೇಶ್ವರ ರಾವ್ ಆರೋಗ್ಯ ಹದಗೆಟ್ಟಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ತನ್ನ ಪ್ರತಿಸ್ಪರ್ಧಿ ಟಿಆರ್‌ಎಸ್‌ನ ಕಂಚರ್ಲ ಭೂಪಾಲ ರೆಡ್ಡಿ ಅವರಿಂದ 8,633 ಮತಗಳ ಅಂತರದಲ್ಲಿ ಸೋತ ವೆಂಕಟ ರೆಡ್ಡಿ ಅವರ ರಕ್ತದೊತ್ತಡ ಇದ್ದಕ್ಕಿದ್ದಂತೆ ಇಳಿಕೆಯಾದ ಕಾರಣ ಪ್ರಜ್ಞೆ ತಪ್ಪಿದರು. 7,669 ಮತಗಳ ಅಂತರದಿಂದ ಸೋತ ಮಾಜಿ ಸಚಿವ ತುಮ್ಮಾಲ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಖಮ್ಮಾನ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಸತುಪಲ್ಲಿ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 1985, 1994 ಹಾಗೂ 1999ರಲ್ಲಿ ಜಯ ಗಳಿಸಿ ತಮ್ಮಾಲ ಮೂರು ಬಾರಿ ಆಂಧ್ರಪ್ರದೇಶ ವಿಧಾನ ಸಭೆ ಪ್ರವೇಶಿಸಿದ್ದರು.

2009ರ ಚುನಾವಣೆಯಲ್ಲಿ ತುಮ್ಮಾಲ ಖಮ್ಮಾಮ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2014ರಲ್ಲಿ ಅವರು ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಸೋತಿದ್ದರು. ಆದಾಗ್ಯೂ, 2016 ಮೇಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಟಿಆರ್‌ಎಸ್ ಟಿಕೆಟ್‌ನಲ್ಲಿ ಪಲೈರ್ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News