ಸರಕಾರಿ ನೌಕರರ ಸಂಘದಿಂದ ದಬ್ಬಾಳಿಕೆ ಆರೋಪ: ರೈತ ಸಂಘದಿಂದ ಹೋರಾಟದ ಎಚ್ಚರಿಕೆ

Update: 2018-12-12 17:54 GMT

ಚಿಕ್ಕಮಗಳೂರು, ಡಿ.12: ರೈತ ಮಹಿಳೆಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿರುವ ಸರಕಾರಿ ನೌಕರರ ಸಂಘದ ದಬ್ಬಾಳಿಕೆ ವಿರುದ್ಧ ರೈತ ಸಂಘ ಕಾನೂನು ಹೋರಾಟ ನಡೆಸಲಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಹೋದ ರೈತ ಚಳುವಳಿಗಾರರು ಮತ್ತು ರೈತ ಮಹಿಳೆಯರ ಮೇಲೆ ಮಹಿಳಾ ನೌಕರರನ್ನು ಮುಂದಿಟ್ಟುಕೊಂಡು ತಹಶೀಲ್ದಾರ್ ಮತ್ತು ಸರ್ಕಾರಿ ನೌಕರರ ಸಂಘದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಚಳುವಳಿ ನಡೆದ 4 ದಿನಗಳ ನಂತರ ರೈತ ಮಹಿಳೆಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದನ್ನು ರೈತ ಸಂಘ ಖಂಡಿಸುತ್ತದೆ ಎಂದರು.

ಚಳುವಳಿಗಾರರ ಮೇಲೆ ಪ್ರಕರಣವನ್ನು ದಾಖಲಿಸಿ ತನ್ನ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ತಹಶೀಲ್ದಾರ್ ರಿಗೆ ರೈತರ ಸಂಕಟ ನಿವಾರಿಸುವಂತೆ ನೀಡಿದ ಹಲವು ಮನವಿಗಳಿಗೆ ಉತ್ತರಿಸುವ ಜವಾಬ್ದಾರಿ ಏಕಿಲ್ಲ ಎಂದು ಪ್ರಶ್ನಿಸಿದರು.

ದಾಖಲೆಗಳನ್ನು ತಿದ್ದಿ ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚನೆ ಮಾಡಿದ ಅಧಿಕಾರಿಗಳನ್ನು ರಕ್ಷಿಸಲಾಗುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಿಲ್ಲ. ಕಂದಾಯ ಅದಾಲತ್‍ನ ದುರುಪಯೋಗ, ಪೋಡಿ ಮುಕ್ತ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಟಾನವಾಗಿಲ್ಲ, ಅಕ್ರಮ ಗಣಿಗಾರಿಕೆಯಿಂದ ನದಿಗಳಿಗೆ ಆಗಿರುವ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ನಡೆಸಲು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ತಿಳಿಸಿ ಹಲವು ವರ್ಷಗಳೇ ಕಳೆದರೂ ಈವರೆಗೂ ಸಮೀಕ್ಷೆ ನಡೆಸಿಲ್ಲ ಎಂದು ದೂರಿದರು.

ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಪದ್ಮನಾಭಶಾಸ್ತ್ರಿ ಸೇರಿದಂತೆ ಹಲವು ಅಧಿಕಾರಿಗಳು ಅಮಾನತಾಗಿ ವರ್ಗಾವಣೆ ಆಗಿದ್ದರೂ ಅವರನ್ನು ಆಯಾಕಟ್ಟಿನ ಸ್ಥಳಕ್ಕೆ ಪ್ರತಿಷ್ಠಾಪಿಸಲಾಗಿದೆ ಇವರನ್ನು ತಕ್ಷಣ ವರ್ಗಾವಣೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News