ಪರೋಪಕಾರ ಗುಣಗಳಿಂದ ಮಾತ್ರ ಮನುಷ್ಯ ಶ್ರೇಷ್ಠನಾಗುತ್ತಾನೆ: ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞಿ

Update: 2018-12-12 17:59 GMT

ತರೀಕೆರೆ,ಡಿ.12: ಧರ್ಮವನ್ನು ಅರಿಯದೆ ಧರ್ಮವನ್ನು ನಾವೆಲ್ಲ ರಕ್ಷಿಸಲು ಹೊರಟಿರುವುದು ವಿಷಾದನೀಯ. ಧರ್ಮವನ್ನು ರಕ್ಷಿಸುವ ಬದಲು ಅನುಸರಿಸಬೇಕು ಎಂದು ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಹೇಳಿದರು.

ಪಟ್ಟಣದಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ತಾಲೂಕು ಘಟಕದ ವತಿಯಿಂದ ನಡೆದ ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಪರೋಪಕಾರ ಗುಣಗಳಿಂದ ಮಾತ್ರ ಶೇಷ್ಠನಾಗುತ್ತಾನೆಯೇ ಹೊರತು ಸಂಪತ್ತಿನಿಂದಲ್ಲ. ಮನುಷ್ಯ ಪರಿಶುದ್ಧವಾದ ಬದುಕನ್ನು ಸಾಗಿಸಬೇಕು ಎಂಬುದನ್ನು ಪ್ರವಾದಿಗಳು ಜಗತ್ತಿಗೆ ಹೇಳಿದರು. ಪ್ರವಾದಿಗಳು ಪ್ರತಿಪಾದಿಸಿದ ಅಂಶಗಳಿಗೆ ತಕ್ಕಂತೆ ಬದುಕಿದರು ಎಂದು ಹೇಳಿದರು.

ಇಂದು ದೇಶದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗದೇ ಕ್ಷುಲ್ಲಕ ವಿಚಾರಗಳನ್ನು ಸಮಸ್ಯೆಗೊಳಿಸಲಾಗುತ್ತಿದೆ. ದೇವರನ್ನು ಮಾನವ ವಿಭಜಿಸಲು ಹೊರಟಿದ್ದಾನೆ. ದೇವರೊಂದಿಗೆ ಮಾನವನಿಗೆ ಇರುವ ಸಂಬಂಧ ತಿಳಿದುಕೊಳ್ಳದೇ ನಾವೆಲ್ಲ ಬದುಕುತ್ತಿದ್ದೇವೆ. ಸಮಾಜದ ಇಂದಿನ ಸಮಸ್ಯಾತ್ಮಕ ವಿಷಯಗಳಿಗೆ ಪ್ರವಾದಿಗಳು ತಿಳಿಸಿದ ವಿಷಯಗಳು ಪರಿಹಾರವಾಗಬಲ್ಲವು ಎಂದು ಹೇಳಿದರು.

ಜಮಾಅತೇ ಇಸ್ಲಾಮಿ ಹಿಂದ್ ವತಿಯಿಂದ ಶಿಕ್ಷಕರಿಗೆ ಏರ್ಪಡಿಸಲಾಗಿದ್ದ 'ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಟ ಮಾರ್ಗದರ್ಶಕ' ವಿಷಯ ಕುರಿತು ಪ್ರಬಂಧ ಬರೆದ ಮಾಕನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೋಭರವರಿಗೆ 10 ಸಾವಿರ ರೂ.ಗಳನ್ನು ಪ್ರಥಮ ಪ್ರಶಸ್ತಿಯಾಗಿ ನೀಡಲಾಯಿತು.
ಹಾಫಿಝ್ ಸೈಯದ್ ಅಬ್ದುರ್ರಹ್ಮಾನ್ ಕುರ್ಆನ್ ಪಠಿಸಿದರು. ಆದಿಲ್ ಪಾಷ ಅನುವಾದಿಸಿದರು. ಜಮಾಅತೇ ಇಸ್ಲಾಮಿ ಹಿಂದ್ ಮುಖಂಡರಾದ ಸೈಯದ್ ಇಸ್ಮಾಯಿಲ್, ಉಮ್ರಿ, ಶೇಕ್ ಜಾವೀದ್ ಕಾರ್ಯಕ್ರಮದಲ್ಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News