ರಾಜಕೀಯ ಪಕ್ಷಗಳಲ್ಲಿ ಆಂತರಿಕ ಸ್ವಾತಂತ್ರ್ಯ ಸತ್ತು ಹೋಗಿದೆ: ಮಾಜಿ ಶಾಸಕ ವೈ.ಎಸ್.ವಿ. ದತ್ತ

Update: 2018-12-12 18:29 GMT

ಶಿವಮೊಗ್ಗ, ಡಿ. 12: ಎಲ್ಲ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಸ್ವಾತಂತ್ರ್ಯ ಸತ್ತು ಹೋಗಿದೆ. ಇದು ನಿಜಕ್ಕೂ ದುರಂತದ ಸಂಗತಿ ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಬೆಂಗಳೂರಿನ ಜೆ.ಎಚ್.ಪಟೇಲ್ ಪ್ರತಿಷ್ಠಾನ ಹಾಗೂ ಶಿವಮೊಗ್ಗದ ಜೆ.ಎಚ್.ಪಟೇಲ್ ಅಭಿಮಾನಿ ವೇದಿಕೆ ಆಯೋಜಿಸಿದ್ದ, 18ನೇ ವರ್ಷದ ‘ಜೆ.ಎಚ್. ಪಟೇಲ್ ನೆನಪು... ಮುಂದೇನು?’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಈ ಹಿಂದೆ ಜನಾಂದೋಲನದ ಮೂಲಕ ನಾಯಕರು ಹೊರಹೊಮ್ಮುತ್ತಿದ್ದರು. ತಳಮಟ್ಟದಿಂದ ಕಾರ್ಯಕರ್ತರು ಬೆಳೆದು ನಾಯಕರಾಗುತ್ತಿದ್ದರು. ಆದರೆ, ಪ್ರಸ್ತುತ ಫ್ಲೆಕ್ಸ್‌ಗಳ ಮೂಲಕ ನಾಯಕರು ಹುಟ್ಟುತ್ತಿದ್ದಾರೆ. ಇದು ವಿಷಾದಕರ ಸಂಗತಿ ಎಂದರು.

ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ನೀಡುವಾಗ ರಿಯಲ್ ಎಸ್ಟೇಟ್, ಗಣಿ ಮಾಲಕರು, ಉದ್ಯಮಿಗಳಿಗೆ ಮಣೆ ಹಾಕಲಾಗುತ್ತಿದೆ. ಪಕ್ಷಕ್ಕೆ ಯಾರು ಎಷ್ಟು ಬಂಡವಾಳ ಹೂಡುತ್ತಾರೆ ಎಂಬುದರ ಮೇಲೆ ಅವರಿಗೆ ಟಿಕೆಟ್ ನೀಡುವ ಸಂಸ್ಕೃತಿ ಬೆಳೆದಿದೆ. ಪ್ರಾಮಾಣಿಕರಿಗೆ, ಸಮಾಜಮುಖಿ ಚಿಂತನೆವುಳ್ಳವರು ಲೆಕ್ಕಕ್ಕೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾತ್ವಿಕ ನೆಲೆಗಟ್ಟಿನ, ಆರೋಗ್ಯಕರ, ವೈಚಾರಿಕ, ವಿಷಯಾಧಾರಿತ ರಾಜಕೀಯ ವ್ಯವಸ್ಥೆ ಸೃಷ್ಟಿಯಾಗಬೇಕು. ವ್ಯಕ್ತಿಗತ ಆಧಾರಿತ ಚುನಾವಣೆಯಾಗಬೇಕು. ಯುವ ಪೀಳಿಗೆಯ ಮನಸ್ಥಿತಿ ಬದಲಾಯಿಸಬೇಕಾಗಿದೆ. ಡಾ.ಬಿ.ಆರ್. ಅಂಬೇಡ್ಕರ್, ಲೋಹಿಯಾ ಚಿಂತನೆಗಳತ್ತ ಕರೆತರಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಶಿವಮೊಗ್ಗವು ಸಮಾಜವಾದಿ ಹೋರಾಟದ ನೆಲೆವೀಡು. ಇಲ್ಲಿನ ಹೋರಾಟ ಇಡೀ ರಾಜ್ಯದ ಗಮನ ಸೆಳೆಯುತ್ತದೆ. ಇಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಹಿಮಾ ಪಟೇಲ್ ಸ್ಪರ್ಧಿಸಿ ಸೋತಿರಬಹುದು. ಆದರೆ, ಅವರ ಸ್ಪರ್ಧೆ ಪ್ರಜ್ಞಾವಂತ ರಾಜಕಾರಣದ ಸಂಕೇತ ಎಂದು ಅಭಿಪ್ರಾಯಪಟ್ಟರು.

ಲಘು ದಾಟಿ ಸರಿಯಲ್ಲ: ಮಾಜಿ ಸಿಎಂ ಜೆ.ಎಚ್. ಪಟೇಲ್ ಅವರೊಂದಿಗೆ ಸುಮಾರು 30 ವರ್ಷಗಳ ಒಡನಾಟ ತಮ್ಮದು. ಅವರು ಅದಮ್ಯ ಜೀವನೋತ್ಸಾಹ, ಜೀವತತ್ಪರತೆ, ಆತ್ಮಸಾಕ್ಷಿಯ ವ್ಯಕ್ತಿತ್ವದವರಾಗಿದ್ದರು. ರಾಜಿರಹಿತ ಮನೋಭಾವದವರಾಗಿದ್ದರು. ರಾಜಕಾರಣವನ್ನು ಗಂಭೀರ ವೃತ್ತಿಯಾಗಿ ಪರಿಗಣಿಸಿರಲಿಲ್ಲ. ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದ ಜೀವಪರತೆ, ಜನಪರತೆ, ಜಾತ್ಯತೀತ ಗುಣ ಹೊಂದಿದ್ದರು. ಆದರೆ, ಪ್ರಸ್ತುತ ರಾಜಕಾರಣಕ್ಕೂ ಸಾಹಿತ್ಯ, ಸಂಸ್ಕೃತಿಗೂ ಸಂಬಂಧವೇ ಇಲ್ಲದಂತಹ ಸ್ಥಿತಿಯಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಧರ್ಮಸ್ಥಳದ ಫೋಟೊ ಹಣದ ಪರಿಣಾಮ ನನಗೆ ಸೋಲು’

ಕಳೆದ ವಿಧಾನಸಭೆ ಚುನಾವಣೆ ವೇಳೆ ಕಡೂರು ಕ್ಷೇತ್ರದಲ್ಲಿ, ಧರ್ಮಸ್ಥಳದ ಫೋಟೊ ಹಾಗೂ ಹಣ ವ್ಯಾಪಕ ಪರಿಣಾಮ ಬೀರಿತು. ಇದರಿಂದಾಗಿ ತಾವು ಸೋಲನುಭವಿಸುವಂತಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ, ಕಡೂರಿನಲ್ಲಿ ಧರ್ಮಸ್ಥಳದ ಫೋಟೊ ಪ್ರಚಾರಕ್ಕೂ ಧರ್ಮಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪತ್ರಿಕೆಗಳಲ್ಲಿ ಪ್ರಕಟನೆ ನೀಡುವಂತಾಯಿತು ಎಂದು ದತ್ತ ತನ್ನ ಸೋಲಿನ ನೋವನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News