ಜಾಗತೀಕರಣ, ಉದಾರೀಕರಣ, ಖಾಸಗೀಕರಣದಿಂದ ಕನ್ನಡ ಭಾಷೆಗೆ ಕಂಟಕ: ಸರ್ವಾಧ್ಯಕ್ಷ ಡಾ. ಜಯಪ್ರಕಾಶ್

Update: 2018-12-12 18:37 GMT

ಶಿವಮೊಗ್ಗ, ಡಿ. 12: ಜಾಗತೀಕರಣ- ಉದಾರೀಕರಣ-ಖಾಸಗೀಕರಣದ ಪ್ರಭಾವವು ಕನ್ನಡ ಭಾಷೆಗೆ ಕಂಟಕಪ್ರಾಯವಾಗಿ ಪರಿಣಮಿಸುತ್ತಿದ್ದು, ಕನ್ನಡ ಭಾಷೆ ನಿಧಾನವಾಗಿ ಕರಗುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಜಯಪ್ರಕಾಶ್ ಮಾವಿನಕುಳಿ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರದಿಂದ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಜಾಗತೀಕರಣವು ಇಂಗ್ಲಿಷ್ ಭಾಷೆ ಬೇಡುತ್ತಿದೆ. ಇದಕ್ಕೆ ಕನ್ನಡ ಭಾಷೆಯ ಅಗತ್ಯವಿಲ್ಲ. ಇದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ. ನಮ್ಮ ಆಸ್ಮಿತೆಯಲ್ಲೊಂದಾದ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಅವರು ಕರೆ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಭಾಷಾ ಮಾಧ್ಯಮದ ಬಗ್ಗೆ ನಿರ್ಧಾರವಾಗಿಲ್ಲ. ಕನ್ನಡ ಭಾಷೆ ಹೃದಯದ ಮಾಧ್ಯಮವಾಗಬೇಕು ಎಂಬುದರ ಬಗ್ಗೆ ಸ್ಪಷ್ಟ ಅಭಿಪ್ರಾಯಗಳೇ ವ್ಯಕ್ತವಾಗುತ್ತಿಲ್ಲ. ಉನ್ನತ ಶಿಕ್ಷಣದ ಪಠ್ಯಗಳು ಕನ್ನಡಕ್ಕೆ ಭಾಷಾಂತರವಾಗುತ್ತಿಲ್ಲ. ಸರಕಾರ ಸಂಕಲ್ಪ ಮಾಡಿದರೂ, ಭಾಷಾಂತಗೊಳಿಸುವ ತಜ್ಞರ ಪಡೆ ನಮ್ಮಲ್ಲಿಲ್ಲ. ಈ ಕಾರಣದಿಂದ ನಮ್ಮ ಯುವ ಜನಾಂಗ ಕನ್ನಡವನ್ನು ಸರಿಯಾಗಿ ಕಲಿಯದೆ, ಇಂಗ್ಲಿಷ್‌ನ್ನೂ ಸರ್ಪಕವಾಗಿ ಅರ್ಥೈಸಿಕೊಳ್ಳದೆ ಎಡಬಿಡಂಗಿಗಳಾಗಿ ಪರಿವರ್ತಿತವಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಸ್ತುತ ಸ್ಥಿತಿಗತಿ ಗಮನಿಸಿದರೆ ಮಕ್ಕಳು ಕನ್ನಡ ಭಾಷೆಯಿಂದ ದೂರವಾಗುತ್ತಿದ್ದಾರೆ. ಮಕ್ಕಳ ಸಾಹಿತ್ಯವೂ ಇಲ್ಲವಾಗಿದೆ. ಪತ್ರ ಸಂಸ್ಕೃತಿಯೂ ಮರೆಯಾಗಿದೆ. ಕನ್ನಡ ಭಾಷೆಯನ್ನು ಬೋಧಿಸುವ ಶಿಕ್ಷಕರೂ ನಿರ್ಲೀಪ್ತತೆ ವಹಿಸುತ್ತಿದ್ದಾರೆ. ಕನ್ನಡ ಅಂಕಿಗಳೂ ಮಾಯವಾಗುತ್ತಿವೆ ಎಂದು ಸರ್ವಾಧ್ಯಕ್ಷರು ಕಳವಳ ವ್ಯಕ್ತಪಡಿಸಿದರು. ಕನ್ನಡ ಭಾಷೆ ಮತ್ತು ಕನ್ನಡಿಗರ ಸಂಕಟಗಳ ವಿರುದ್ಧ ನಾವೆಲ್ಲರೂ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಾಗಿದೆ. ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ. ಕಾಲ ಬದಲಾದಂತೆ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ ಎಂದು ಕರೆ ನೀಡಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಸಮರಂಭವನ್ನು ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನಾ. ಡಿಸೋಜಾ, ಶ್ರೀಕಂಠ ಕೂಡಿಗೆ, ಡಾ. ಸಣ್ಣರಾಮ, ವಿಜಯಶ್ರೀ, ಸುನಿತಾರಾವ್, ಸಿ.ಎಸ್.ಷಡಕ್ಷರಿ, ಎನ್.ರವಿಕುಮಾರ್, ಎಸ್.ಎನ್.ಚೆನ್ನಬಸಪ್ಪ ಸೇರಿದಂತೆ ಮೊದಲಾದವರಿದ್ದರು.

‘ಬಳಸದೇ ಭಾಷೆಯ ಬೆಳವಣಿಗೆ ಅಸಾಧ್ಯ’
ಕನ್ನಡ ಭಾಷೆಯನ್ನು ಹೇಗೆ ಉಳಿಸಿಕೊಳ್ಳಲು ಸಾಧ್ಯ ಎಂಬುವುದನ್ನು ನಾವೆಲ್ಲ ಆಲೋಚಿಸಬೇಕಾಗಿದೆ. ನಾವು ಭಾಷೆ ಬಳಸದೆ, ಅದು ಬೆಳೆಯಲು ಸಾಧ್ಯವಿಲ್ಲ. ಶಾಲೆ, ಮನೆಗಳಲ್ಲಿ ಕನ್ನಡ ವಾತಾವರಣವಿಲ್ಲದಿದ್ದರೆ ಭಾಷೆ ಬೆಳೆಯುವುದಾದರೂ ಹೇಗೆ? ಎಂದು ಡಾ. ಜಯಪ್ರಕಾಶ್ ಮಾವಿನಕುಳಿ ಸಭಿಕರಲ್ಲಿ ಪ್ರಶ್ನಿಸಿದರು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಪರಿಣಾಮಗಳು ನಮ್ಮನ್ನು ಆವರಿಸಿಕೊಳ್ಳುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ಭಾಷೆಯ ಮೇಲೂ ಪರಿಣಾಮ ಬೀರುತ್ತಿದೆ. ವಿಶ್ವಮಾನವ ಪ್ರಜ್ಞೆಗೆ ಇವು ಅಡೆತಡೆಗಳಾಗಿ ಪರಿವರ್ತಿತವಾಗುತ್ತಿವೆ.
-ಡಾ. ಜಯಪ್ರಕಾಶ್ ಮಾವಿನಕುಳಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಕನ್ನಡದ ಸಂಕಟಗಳ ಬಗ್ಗೆ ಬೆಳಕು ಚೆಲ್ಲಿದ ಸರ್ವಾಧ್ಯಕ್ಷರು

 ಭಾಷೆಯ ಸ್ಥಿತಿ ಈ ರೀತಿಯಾದರೆ, ಇನ್ನೂ ಕನ್ನಡದ ಸಂಕಟಗಳು ಬೇರೆ ಬೇರೆ ರೀತಿಯಾಗಿ ನಮ್ಮನ್ನು ಕಾಡುತ್ತಿವೆ. ಒಂದು ಕಡೆ ಪರಿಸರವೇ ವಿನಾಶವಾಗುತ್ತಿದೆ. ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಕೃಷಿ ಮರೆಯಾಗುತ್ತಿದೆ. ಜಾನಪದ ಇಲ್ಲವಾಗಿವೆ ಕಾಡಿನ ಪ್ರಾಣಿಗಳು ನಾಡಿಗೆ ಬರತೊಡಗಿವೆ. ಮಳೆಯೇ ಇಲ್ಲವಾಗಿದೆ. ಕಾರ್ಖಾನೆಗಳು ಮುಚ್ಚಿ ಹೋಗುತ್ತಿವೆ. ಕೃಷಿ ಆಧಾರಿತ ಯುವಕರನ್ನು ಮದುವೆಯಾಗಲು ಯಾವ ಯುವತಿಯೂ ಮುಂದೆ ಬಾರದಂತಹ ಸ್ಥಿತಿಯಿದೆ. ಕೆರೆಗಳು ಮುಚ್ಚಿ ಹೋಗಿವೆ. ಮಲೆನಾಡು ಬಿಸಿಲನಾಡಾಗುತ್ತಿದೆ. ಲಿಂಗನಮಕ್ಕಿ ಡ್ಯಾಂನಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆಗಳು ರೂಪುಗೊಳ್ಳುತ್ತಿವೆ ಸರಕಾರಗಳು ಪರಿಜ್ಞಾನವಿಲ್ಲದೆ, ಹಣ ದೋಚಿಕೊಳ್ಳಲೆಂದೇ ಯೋಜನೆಗಳನ್ನು ರೂಪಿಸ ಅನುಷ್ಠಾನಗೊಳಿಸುತ್ತಿವೆ. ಗೋಮಾಳಗಳು ನಿವೇಶನಗಳಾಗುತ್ತಿವೆ ಎಂದು ನೋವು ವ್ಯಕ್ತಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News