ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳ ಏಕತೆ ಅಗತ್ಯ

Update: 2018-12-13 06:28 GMT

ಪಂಚರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶ ಪ್ರತಿಪಕ್ಷಗಳಲ್ಲಿ ಹೊಸ ಉತ್ಸಾಹ, ಭರವಸೆಗಳನ್ನು ಮೂಡಿಸಿದೆ. ಅದೇ ರೀತಿ ಬಿಜೆಪಿ ಪಾಳೆಯದಲ್ಲಿ ನಿರಾಶೆಯ ಕಾರ್ಮೋಡ ಕವಿದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದಿದ್ದರೆ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವನ್ನು ಉರುಳಿಸುವ ‘ಆಪರೇಶನ್ ಕಮಲ’ಕ್ಕೆ ಚಾಲನೆ ದೊರಕುತ್ತಿತ್ತು. ಮತ್ತೊಮ್ಮೆ ಮುಖ್ಯ ಮಂತ್ರಿಯಾಗಲು ಕನಸು ಕಾಣುತ್ತಿರುವ ಯಡಿಯೂರಪ್ಪನವರು ಸುಮ್ಮನಿರುತ್ತಿರಲಿಲ್ಲ. ಗಣಿ ಧಣಿಗಳು ಇದಕ್ಕಾಗಿ ಕೋಟಿ ಕೋಟಿ ರೂ. ಚೆಲ್ಲಲು ತಯಾರಾಗಿದ್ದರು. ಆದರೆ ಈ ಚುನಾವಣಾ ಫಲಿತಾಂಶ ಮತ್ತು ಅದಕ್ಕಿಂತ ಮುಂಚೆ ಬಂದ ಕರ್ನಾಟಕದ ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಸರಕಾರ ಉರುಳಿಸುವ ಬಿಜೆಪಿ ನಾಯಕರ ಕನಸನ್ನು ಭಗ್ನಗೊಳಿಸಿತು.

ಈ ಫಲಿತಾಂಶ ಪ್ರತಿಪಕ್ಷಗಳಲ್ಲಿ ಹೊಸ ಹುರುಪನ್ನು ತಂದಿದೆ. ಆದರೆ ಯಾವುದೇ ಬಿಜೆಪಿಯೇತರ ಮೈತ್ರಿಕೂಟ ರಚನೆಯಾಗಲಿ ಅದರಲ್ಲಿ ಕಾಂಗ್ರೆಸ್ ಪಾತ್ರ ಮುಖ್ಯವಾಗಿರುತ್ತದೆ ಎಂಬುದು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಿಂದ ಸ್ಪಷ್ಟವಾಗಿದೆ. ಬಿಜೆಪಿ ಪ್ರಬಲ ಪಕ್ಷವಾಗಿ ಕೇಂದ್ರದ ಅಧಿಕಾರ ಸೂತ್ರ ಹಿಡಿದ ನಂತರ ದೇಶದ ರಾಜಕೀಯ ಚಿತ್ರ ಬದಲಾಗಿದೆ. ಕಾಂಗ್ರೆಸ್-ಬಿಜೆಪಿ ಎರಡನ್ನೂ ಹೊರಗಿಟ್ಟು ಮೂರನೆಯ ರಂಗ ರಚಿಸುವ ಆ ದಿನಗಳು ಮುಗಿದವು. ಈಗ ಏನಿದ್ದರೂ ಕೋಮುವಾದಿ ಬಿಜೆಪಿ ವಿರುದ್ಧ ಎಲ್ಲ ಜಾತ್ಯತೀತ ಪ್ರತಿಪಕ್ಷಗಳ ಮೈತ್ರಿ ಅನಿವಾರ್ಯವಾಗಿದೆ. ಹಿಂದೆಲ್ಲ ಇಂಥ ನಿರ್ಣಾಯಕ ಸನ್ನಿವೇಶದಲ್ಲಿ ಕಮ್ಯುನಿಸ್ಟ್ ನಾಯಕರಾದ ಹರ್‌ಕಿಷನ್ ಸಿಂಗ್ ಸುರ್ಜಿತ್‌ರಂಥವರು ಪ್ರಮುಖ ಪಾತ್ರ ವಹಿಸುತ್ತಿದ್ದರು. ಜ್ಯೋತಿ ಬಸು ಅವರಂಥ ರಾಷ್ಟ್ರೀಯ ನಾಯಕರಿದ್ದರು. ಆದರೆ ಈಗ ಅವರಿಲ್ಲ. ಎಡಪಂಥೀಯ ಪಕ್ಷಗಳು ದೇಶದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿಲ್ಲ. ಅಂತಲೇ ಈ ಬಾರಿ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಕಾರ್ಯಕ್ಕೆ ಆಂಧ್ರಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಚಾಲನೆ ನೀಡಿದ್ದಾರೆ.

 ಬಿಜೆಪಿ ಕೇಂದ್ರದ ಅಧಿಕಾರ ಸೂತ್ರ ಹಿಡಿದ ನಂತರ ಎಂತಹ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ ಅಂದರೆ, ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆಗೆ ಗಂಡಾಂತರ ಎದುರಾಗಿದೆ. ಸಿಬಿಐ, ಆರ್‌ಬಿಐನಂಥ ಸಂವಿಧಾನಿಕ ಸ್ವಾಯತ್ತ ಸಂಸ್ಥೆಗಳಿಗೂ ಇದೇ ಸ್ಥಿತಿ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಜಾತ್ಯತೀತ ಪ್ರಗತಿಪರ ಪಕ್ಷಗಳು, ಸಂಘಟನೆಗಳು ಒಂದು ನಿರ್ದಿಷ್ಟ ಕಾರ್ಯಕ್ರಮದ ಆಧಾರದಲ್ಲಿ ಒಂದು ಗೂಡಬೇಕಾಗಿದೆ. ಪರ್ಯಾಯ ಜನಪರ ಕಾರ್ಯಕ್ರಮಗಳನ್ನು ನೀಡಬೇಕಾಗಿದೆ. ಬಹುಸಂಖ್ಯಾತ ಕೋಮುವಾದವನ್ನು ಕೆರಳಿಸಿರುವ ಕಾರ್ಪೊರೇಟ್ ಬಂಡವಾಳಶಾಹಿ ಬೆಂಬಲಿತ ಬಿಜೆಪಿಯಂಥ ದೈತ್ಯ ಶಕ್ತಿಯನ್ನು ಸೋಲಿಸಲು ಯಾವುದೇ ಪಕ್ಷದ ಏಕಾಂಗಿ ಹೋರಾಟದಿಂದ ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಪಕ್ಷಗಳ ಏಕತೆ ಅನಿವಾರ್ಯವಾಗಿದೆ. ಆದರೆ ಇಂತಹ ಮೈತ್ರಿ ಕೂಟ ರಚನೆಯಲ್ಲಿ ಕೆಲ ಸಮಸ್ಯೆಗಳಿವೆ. ಅವಿಭಜಿತ ಆಂಧ್ರಪ್ರದೇಶದಲ್ಲಿ ತೆಲಗುದೇಶಂ ಮತ್ತು ಟಿಆರ್ ಎಸ್ ನಡುವೆ ಹೊಂದಾಣಿಕೆ ಇಲ್ಲ. ಕೇರಳದಲ್ಲಿ ಅಧಿಕಾರಾರೂಢ ಕಮ್ಯುನಿಸ್ಟರಿಗೆ ಕಾಂಗ್ರೆಸ್ ಮುಖ್ಯ ಎದುರಾಳಿಯಾಗಿದೆ. ಕೇರಳದಲ್ಲಿ ಕಾಂಗ್ರೆಸ್ ವಿರೋಧಿಸುವ ಸಿಪಿಎಂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ ಜೊತೆ ಕೈಜೋಡಿಸಲು ತಯಾರಿದೆ. ದೇಶದ ಹಿತವನ್ನು ಗಮನದಲ್ಲಿರಿಸಿಕೊಂಡು ಪ್ರತಿಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದುಗೂಡಿದರೆ ಬಿಜೆಪಿಯ ಕೋಮುವಾದಿ ಕೂಟವನ್ನು ಸೋಲಿಸಬಹುದು.

 ಈ ಬಾರಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ನಿರ್ಮಾಣ ಹುನ್ನಾರಗಳು ತೀವ್ರಗೊಳ್ಳಲಿವೆ. ಅದನ್ನು ತಡೆಯಬೇಕಾದರೆ ಪ್ರತಿಪಕ್ಷಗಳು ಒಂದಾಗಬೇಕು. ಇದು ಬರೀ ಸಂದರ್ಭ ಸಾಧಕ ಒಪ್ಪಂದ ಆಗಬಾರದು. ನಿರ್ದಿಷ್ಟ ಕಾರ್ಯಕ್ರಮ ಆಧರಿತ ಒಪ್ಪಂದ ಆಗಬೇಕು. ಮಾಜಿ ಪ್ರಧಾನಿ ದೇವೇಗೌಡರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಸಿಪಿಎಂ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರು ಇಂತಹ ರಂಗ ರಚನೆಗೆ ಮುಂದುವರಿಯಲು ಅವರ ಪಕ್ಷ ಅವಕಾಶ ನೀಡಬೇಕು. ಮಾಯಾವತಿಯವರ ಬಿಎಸ್ಪಿ ಪಾತ್ರವೂ ಈ ನಿಟ್ಟಿನಲ್ಲಿ ಮುಖ್ಯವಾಗಿದೆ. ಈಗಾಗಲೇ ಅವರು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರದ ರಚನೆಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಅವರು ಮಾತ್ರವಲ್ಲದೆ ಡಿಎಂಕೆಯ ಸ್ಟಾಲಿನ್, ಚಂದ್ರಬಾಬು ನಾಯ್ಡು, ಟಿಆರ್‌ಎಸ್‌ನ ಚಂದ್ರಶೇಖರ್ ಪಾತ್ರ ಕೂಡ ಮುಖ್ಯವಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. ಆದರೆ ಲೋಕಸಭಾ ಚುನಾವಣೆಯಲ್ಲಿ ಅದು ಸುಮ್ಮನಿರಲಾರದು. ಈ ದೇಶ ಫ್ಯಾಶಿಸ್ಟ್ ಶಕ್ತಿಗಳ ಬಲೆಗೆ ಸಿಗಬಾರದೆಂದಿದ್ದರೆ, ಕಾಂಗ್ರೆಸ್ ಸಹಿತ ಪಕ್ಷಗಳ ಏಕತೆ ಅಗತ್ಯ.

ಕಾಂಗ್ರೆಸ್ ಕೂಡ ಸಾಕಷ್ಟು ಬದಲಾಗಬೇಕಿದೆ. ಅಧಿಕಾರಕ್ಕೆ ಬಂದ ತಕ್ಷಣ ಅದು ಸೋಮಾರಿತನದ ಜಡ ಜಗತ್ತಿನತ್ತ ಸಾಗುತ್ತದೆ. ಕೋಮುವಾದಿ ವ್ಯಕ್ತಿಗಳ ಅಪಾಯವನ್ನೇ ಮರೆತು ಬಿಡುತ್ತದೆ. ಅದರಲ್ಲಿ ಅವಕಾಶವಾದಿಗಳೇ ತುಂಬಿಕೊಳ್ಳುತ್ತಾರೆ. ಅಂತಲೇ ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ‘‘ಇದು ಗೆಲುವಿಗೆ ಸಂಭ್ರಮಿಸುವ ಕಾಲವಲ್ಲ. ಕೋಮುವಾದಿ ಶಕ್ತಿಗಳ ವಿರುದ್ಧ ಗಟ್ಟಿಯಾದ ಸೈದ್ಧಾಂತಿಕ ನೆಲೆಯಲ್ಲಿ ನಿಂತು ಹೋರಾಟ ಮಾಡಬೇಕು’’ ಎಂದು ಹೇಳಿದ್ದಾರೆ. ಕಾಂಗ್ರೆಸ್‌ಗೆ ಜನತೆ ನೀಡಿದ ಈ ಅವಕಾಶವನ್ನು ಬಳಸಿಕೊಂಡು ತನ್ನ ಕಾರ್ಯಕರ್ತರ ಪಡೆಯನ್ನು ಬಲಿಷ್ಠಗೊಳಿಸಬೇಕು. ಅವರಿಗೆ ಪಕ್ಷದ ಜಾತ್ಯತೀತ ಸಿದ್ಧಾಂತದ ಬಗ್ಗೆ ತರಬೇತಿ ನೀಡಬೇಕು. ಕೇರಳದ ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕೇರಳ ಘಟಕ ಅನುಸರಿಸುತ್ತಿರುವ ನೀತಿ ಸರಿಯಿಲ್ಲ. ಬಿಜೆಪಿ ಜೊತೆ ಸೇರಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಅದು ಚಳವಳಿ ನಡೆಸುತ್ತಿದೆ. ಇದು ಅವಕಾಶವಾದಿ ನಡೆಯಾಗಿದೆ. ಏಕೈಕ ದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರತಿಪಕ್ಷದ ಏಕತೆಯ ಬಗ್ಗೆ ಸಕಾರಾತ್ಮಕವಾಗಿ ವರ್ತಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News