14ನೇ ಹಣಕಾಸು ಯೋಜನೆಯಲ್ಲಿ 253 ಕೋಟಿಗೂ ಅಧಿಕ ಅವ್ಯವಹಾರ: ದಾವಣಗೆರೆ ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲ

Update: 2018-12-12 18:58 GMT

ದಾವಣಗೆರೆ,ಡಿ.12: ಜಿಲ್ಲಾ ಪಂ. ನಲ್ಲಿ 2016-17ನೇ ಸಾಲಿನ ವಿವಿಧ ಲೆಕ್ಕ ಶೀರ್ಷಿಕೆಗಳ ಯೋಜನೆಯಡಿ 14ನೇ ಹಣಕಾಸು ಯೋಜನೆಯಲ್ಲಿ 253 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲ ದೂರಿದರು. 

ಜಿಪಂನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಪಂ ಸಿಇಒ ಮತ್ತು ಉಪಕಾರ್ಯದರ್ಶಿ ಅವರು ಈ ಭ್ರಷ್ಟಚಾರ ಎಸಗಿದ್ದು, ಈ ಸಂಬಂಧ ಎಸಿಬಿ ತನಿಖೆಗೆ ಜಿಪಂ ಹಗಣರಣ ಒಳಪಡಿಸಲಾಗುವುದು. ಇದರ ಜೊತೆಗೆ ಸಿಎಂ, ಗ್ರಾಮೀಣಾಭಿವೃದ್ದಿ ಸಚಿವರು, ಜಿಪಂ ಅಧೀನ ಕಾರ್ಯದರ್ಶಿಗಳಿಗೂ ದೂರು ಸಲ್ಲಿಸಲಾಗುವುದು ಎಂದ ಅವರು, ಯಾವುದೇ ಕಾರಣಕ್ಕೂ ಜನರ ಹಣ ದುರುಪಯೋಗವಾಗಲು ಬಿಡುವುದಿಲ್ಲ ಎಂದರು. 

ಈ ಹಿಂದೆ ಜಿಲ್ಲೆಯ ಆರು ತಾಲೂಕುಗಳಲ್ಲಿ 189 ಅಧಿಕಾರಿಗಳನ್ನು ಸಾರ್ವಜನಿಕ ದೂರು ಆಧರಿಸಿ ಶಿಸ್ತು ಕ್ರಮದಡಿ ಅಮಾನತು ಮಾಡಲಾಗಿತ್ತು. ಅದರೆ, ಅವರಿಂದ ಲಕ್ಷಾಂತರ ರೂ. ಹಣ ಪಡೆದು ಅವರ ಅಮಾನತು ರದ್ದುಗೊಳಿಸಲಾಗಿದೆ. ಜಗಳೂರು ತಾಲೂಕಿನ ಪಿಡಿಓ ಎ.ಟಿ. ನಾಗರಾಜ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿ, ಅಮಾನತು ಮಾಡಿದ್ದ ಪ್ರಕರಣವನ್ನು ಜಿಪಂ ಸಿಇಓ, ಡಿಎಸ್ ಮುಚ್ಚಿ ಹಾಕಿದ್ದಾರೆ. ಹನುಮಂತಾಪುರ ಗ್ರಾಪಂ ಪಿಡಿಓ ಲೋಹಿತಕುಮಾರ್ 14ನೇ ಹಣಕಾಸು ಯೋಜನೆ ಹಣ ದುರುಪಯೋಗ, ತೋಳಹುಣಸೆ ಗ್ರಾಪಂ ಪಿಡಿಓ ಸವಿತಾಬಾಯಿ ನಿಯಮ ಬಾಹಿರವಾಗಿ ಇ-ಸ್ವತ್ತು ಮಾಡಿದ ಪ್ರಕರಣ, ದಿದ್ದಿಗೆ ಗ್ರಾಪಂ ಪಿಡಿಓ ಎ.ಟಿ.ನಾಗರಾಜ ಗ್ರಾಮ ವಿಕಾಸದಡಿ 6.64 ಲಕ್ಷ ರೂ. ಸಿಮೆಂಟ್ ಖರೀದಿ ಕೇಸ್ ಬಗ್ಗೆಯೂ ದೂರು ನೀಡುವೆ ಎಂದು ತಿಳಿಸಿದರು.

ದೇವಿಕೆರೆ ಗ್ರಾಪಂ ಕಾರ್ಯದರ್ಶಿ ಎ.ನಾಗಪ್ಪ ಪ್ರಕರಣ, ಮತ್ತಿಹಳ್ಳಿ, ದುಗ್ಗಾವತಿ ಕಾರ್ಯದರ್ಶಿ ಎಸ್.ಎಂ.ವೀರೇಶ, ಜಗಳೂರು ಪರಾಇಂ ವಿಭಾಗದ ಇಂಜಿನಿಯರ್ ವೈ.ಎನ್.ಮಹಂತೇಶಕುಮಾರ, ಮಂಜುನಾಥ್‍ರ ಖಾತರಿ ಪ್ರಕರಣ, ಹೊಸಕೋಟೆ ಗ್ರಾಪಂ ಕಾರ್ಯದರ್ಶಿ ಟಿ.ಅಂಜಿನಪ್ಪ ಹೀಗೆ ಸಾಕಷ್ಟು ಅವ್ಯವಹಾರವಾಗಿದೆ. ಅರಸೀಕೆರೆಯಲ್ಲಿ ಖಾತರಿ, ಬಿಆರ್‍ಜಿಎಫ್, 14ನೇ ಹಣಕಾಸು, ಗ್ರಾಮ ವಿಕಾಸದಡಿ 48 ಲಕ್ಷ ಅವ್ಯವಹಾರವಾಗಿದೆ. ಸಂತೇಬೆನ್ನೂರು, ಕಾರಿಗನೂರು ಗ್ರಾಪಂನಲ್ಲಿ ನಿಯಮ ಬಾಹಿರವಾಗಿ ಜಿ.ಎಸ್. ಜಯಪ್ಪ ಎಂಬ ಗುತ್ತಿಗೆದಾರರಿಗೆ 1 ವರ್ಷಕ್ಕೆ 1.92 ಕೋಟಿ, ಬಿ.ಮುರಿಗೇಂದ್ರಪ್ಪ ಎಂಬವರಿಗೆ 1.12 ಕೋಟಿ ಹಣ ನೀಡಲಾಗಿದೆ ಎಂದು ದೂರಿದರು. 

ಖಾತರಿಯಲ್ಲಿ ಒಬ್ಬ ಗುತ್ತಿಗೆದಾರನಿಗೆ ವರ್ಷಕ್ಕೆ ಗರಿಷ್ಟ 35 ಲಕ್ಷ ಮಾತ್ರ ನೀಡಬಹುದು. ನಂತರದ ವರ್ಷ ಅದೇ ಗುತ್ತಿಗೆದಾರನಿಗೆ ನೀಡುವಂತಿಲ್ಲ. ಆದರೆ, ಇಲ್ಲಿ ಈ ನಿಯಮ ಗಾಳಿಗೆ ತೂರಲಾಗಿದೆ. ದೇವಿಕೆರೆ, ದಿದ್ದಿಗೆ, ಕ್ಯಾಸನಹಳ್ಳಿ ಗ್ರಾಪಂನಲ್ಲಿ ಜಿ.ಸಿ.ಬಸವನಗೌಡ ಎಂಬವರ ಹೆಸರಿಗೆ 12 ಕೋಟಿ ಹಣವನ್ನು ಅಕ್ರಮವಾಗಿ ಜಮಾ ಮಾಡಲಾಗಿದೆ. ಹೀಗೆ ಸುಮಾರು 200ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣ ಲಂಚ ಪಡೆದು, ಮುಚ್ಚಿ ಹಾಕಲಾಗಿದೆ. ಈ ಎಲ್ಲದರ ಬಗ್ಗೆಯೂ ಸಮಗ್ರ ತನಿಖೆ ನಡೆಸಲು ಸಿಎಂ, ಗ್ರಾಮೀಣಾಭಿವೃದ್ಧಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸುವೆ ಎಂದು ಹೇಳಿದರು. 

ಹರಪನಹಳ್ಳಿ ತಾಲೂಕಿನ ಅರಣ್ಯ ಇಲಾಖೆಯಲ್ಲಿ ಕಂಚಿಕೆರೆ 112 ಲಕ್ಷ, ತೊಗರಿಕಟ್ಟೆ 89 ಲಕ್ಷ, ಹಾರಕನಾಳ್ 82 ಲಕ್ಷ ಹಣವನ್ನು ದೇವರಾಜ ನಾಯ್ಕ ಎಂಬ ಡಿಟಿಪಿ ಅಂಗಡಿ ಹುಡುಗನ ಹೆಸರಿಗೆ ಅಕ್ರಮವಾಗಿ ಕಡತಿ ಗ್ರಾಪಂ ಎಸ್‍ಬಿಐ ಖಾತೆಗೆ ಜಮಾ ಮಾಡಲಾಗಿದೆ. 2017-18, 2018-19ರಲ್ಲಿ ಸಿಇಓ ಅಶ್ವತಿ, ಡಿಎಸ್ ಷಡಕ್ಷರಪ್ಪ ಆರೋಪ ಮುಕ್ತಗೊಳಿಸಿದ ಪ್ರಕರಣಗಳನ್ನು ಸಂಪೂರ್ಣ ಮರು ತನಿಖೆ ಮಾಡಿದರೆ ಸತ್ಯ ಬಯಲಾಗುತ್ತದೆ. ಸರ್ಕಾರದ ಸಾರ್ವಜನಿಕ ಹಣ ದುರುಪಯೋಗವಾಗದಂತೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News