ಗೋರಕ್ಷಕರ ಹಾವಳಿ ಮಿತಿಮೀರಿದ್ದ ಪ್ರದೇಶಗಳಲ್ಲಿ ಬಿಜೆಪಿ ಧೂಳೀಪಟ

Update: 2018-12-13 06:17 GMT

ಹೊಸದಿಲ್ಲಿ, ಡಿ.13: ರಾಜಸ್ಥಾನದಲ್ಲಿ 2014ರಿಂದೀಚೆಗೆ ಮುಖ್ಯವಾಗಿ ಆಲ್ವಾರ್-ಭರತಪುರ್ ಪ್ರಾಂತ್ಯದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಗೂಂಡಾಗಿರಿ ಸಾಕಷ್ಟು ಹೆಚ್ಚಾಗಿತ್ತು. ಗೋಸಾಗಾಟದ ವೇಳೆ ನಡೆದಿದ್ದ ಹೈನುಗಾರರಾದ ಪೆಹ್ಲೂ ಖಾನ್ ಹಾಗೂ ಉಮರ್ ಖಾನ್ ಅವರ ಹತ್ಯೆ ಪ್ರಕರಣಗಳಂತೂ ಸಾಕಷ್ಟು ಆಕ್ರೋಶ ಸೃಷ್ಟಿಸಿದ್ದವು. ಆದರೆ ಗೋರಕ್ಷಕರ ಹಾವಳಿ ಮಿತಿಮೀರಿದ್ದ ಪ್ರದೇಶಗಳಲ್ಲಿ ಬಿಜೆಪಿ ಈ ಚುನಾವಣೆಯಲ್ಲಿ ಧೂಳೀಪಟವಾಗಿದೆ. ಈ ಪ್ರಾಂತ್ಯದ ಒಟ್ಟು 18 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ ಕೇವಲ ಎರಡರಲ್ಲಿ ಮಾತ್ರ ಜಯ ಸಾಧಿಸಲು ಸಫಲವಾಗಿದೆ.

ಆಲ್ವಾರ್ ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿರುವ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಆಲ್ವಾರ್ ನಗರ (ಸಂಜಯ್ ಶರ್ಮ) ಹಾಗೂ ಮುಂದಾವರ್ (ಮಂಜಿತ್ ಧರಂಪಾಲ್ ಚೌಧುರಿ) ಕ್ಷೇತ್ರಗಳಲ್ಲಿ ಮಾತ್ರ ಜಯ ಗಳಿಸಿದೆ. ಆಲ್ವಾರ್ ಸಂಸತ್ ಕ್ಷೇತ್ರಕ್ಕೆ ಈ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಪ್ರಾಂತ್ಯದ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ (ಆಲ್ವಾರ್ ಗ್ರಾಮೀಣ, ಬನ್ಸೂರ್, ರಾಜಘರ್-ಲಕ್ಷ್ಮಣಘರ್ ಮತ್ತು ಕಥುಮಾರ್) ಜಯ ಗಳಿಸಿದೆ. ಬಿಎಸ್ಪಿ ಈ ಪ್ರಾಂತ್ಯದಲ್ಲಿ ಉತ್ತಮ ನಿರ್ವಹಣೆ ತೋರದೇ ಇರುತ್ತಿದ್ದಲ್ಲಿ ಪಕ್ಷ ಇನ್ನಷ್ಟು ಸ್ಥಾನ ಗಳಿಸುತ್ತಿತ್ತು. ಕಿಶನ್‌ಘರ್ ಬಸ್ ಹಾಗೂ ತಿಜುರ ಕ್ಷೇತ್ರ ಬಿಎಸ್ಪಿ ಪಾಲಿಗೆ ಒಲಿದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಲ್ವಾರ್ ಪ್ರಾಂತ್ಯದಲ್ಲಿ ಒಂಬತ್ತು ಸ್ಥಾನಗಳನ್ನು ಗಳಿಸಿತ್ತು. ಕಳೆದ ಬಾರಿ ಕಾಂಗ್ರೆಸ್ ಇಲ್ಲಿ ಕೇವಲ ಒಂದು ಸ್ಥಾನ ಗಳಿಸಿತ್ತು. ಇನ್ನೊಂದು ಸ್ಥಾನ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಗೊಲ್ಮಾ ದೇವಿಗೆ ಹೋಗಿದ್ದರೂ ಆಕೆ ಈ ವರ್ಷ ಬಿಜೆಪಿ ಸೇರಿದ್ದರು.

ಭರತಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಲ್ಕರಲ್ಲಿ (ಕಮನ್, ದೀಗ್ ಕುಮ್ಹೇರ್, ವೀರ್ ಹಾಗೂ ಬಯಾನ) ಇಲ್ಲಿ ಜಯ ಸಾಧಿಸಿದ್ದರೆ ಅದರ ಮಿತ್ರ ಪಕ್ಷ ರಾಷ್ಟ್ರೀಯ ಲೋಕ ದಳ್ ಒಂದು ಸ್ಥಾನ (ಭರತ್‌ಪುರ್) ಗಳಿಸಿದೆ. ಬಿಎಸ್ಪಿ ಅಭ್ಯರ್ಥಿಗಳು ನಗರ್ ಮತ್ತು ನದ್ಬಾಯ್ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಏಳು ಸ್ಥಾನಗಳನ್ನು ಗಳಿಸಿದ್ದರೆ ಕಾಂಗ್ರೆಸ್ ಪಕ್ಷ ಕೇವಲ ಒಂದು ಸ್ಥಾನ ಗಳಿಸಿತ್ತು. ಕಳೆದ ವರ್ಷ ರಾಜಸ್ಥಾನದಲ್ಲಿ ಗೋ ಹತ್ಯೆ ತಡೆ ಕಾಯ್ದೆಯನ್ವಯ 389 ಪ್ರಕರಣಗಳು ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News