ಇಂದು ಭಾರತ- ಆಸ್ಟ್ರೇಲಿಯ ಎರಡನೇ ಟೆಸ್ಟ್ ಆರಂಭ

Update: 2018-12-13 18:37 GMT

ಪರ್ತ್, ಡಿ.13: ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸಿ 4 ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿ ಐತಿಹಾಸಿಕ ಸಾಧನೆ ಮಾಡಿರುವ ಭಾರತ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಆಸ್ಟ್ರೇಲಿಯ ವಿರುದ್ಧ ಶುಕ್ರವಾರದಿಂದ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ.

ಸ್ವಾನ್ ನದಿಯ ಇನ್ನೊಂದು ಭಾಗದಲ್ಲಿರುವ ನೂತನ ಪರ್ತ್ ಸ್ಟೇಡಿಯಂ ತನ್ನ ಚೊಚ್ಚಲ ಟೆಸ್ಟ್‌ಗೆ ಉಭಯ ತಂಡಗಳನ್ನು ಸ್ವಾಗತಿಸುತ್ತಿದೆ. ಪರ್ತ್ ಪಿಚ್‌ನ ಹಳೆಯ ಸ್ಟೇಡಿಯಂ ಕಳೆದ ಐದು ದಶಕಗಳಿಂದ ವೇಗ ಹಾಗೂ ಬೌನ್ಸ್‌ಗೆ ಸಮಾನಾಂತರವಾಗಿತ್ತು. ಪ್ರವಾಸಿ ತಂಡಗಳಿಗೆ ಕಠಿಣವಾಗಿ ಪರಿಗಣಸುತ್ತಿತ್ತು. ಭಾರತ ಕ್ರಿಕೆಟ್ ತಂಡ ಈ ಹಿಂದೆ ಹಸಿರು ಪಿಚ್‌ನಲ್ಲಿ ಆಡುವುದಕ್ಕೆ ಭಯಪಡುತ್ತಿತ್ತು. ಆದರೆ, ಇದು ಆಸ್ಟ್ರೇಲಿಯವನ್ನು ನೆಲಕ್ಕುರುಳಿಸಲು ಇರುವ ಅವಕಾಶವೆಂದು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಭಾವಿಸಿದೆ. ಭಾರತ ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ಕೊಹ್ಲಿಯ ದೊಡ್ಡ ಕೊಡುಗೆಯಿಲ್ಲದೇ ಚೇತೇಶ್ವರ ಪೂಜಾರ ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಬಲದಿಂದ 31 ರನ್‌ಗಳಿಂದ ರೋಚಕ ಜಯ ದಾಖಲಿಸಿತ್ತು. ಆದರೆ, ಆರ್.ಅಶ್ವಿನ್ ಹಾಗೂ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದಾಗಿ 2ನೇ ಪಂದ್ಯಕ್ಕೆ ಅಲಭ್ಯರಾಗಿದ್ದು ತಂಡಕ್ಕೆ ಹಿನ್ನಡೆಯಾಗಿದೆ.

ಈ ಇಬ್ಬರು ಗಾಯಗೊಂಡಿರುವ ಕಾರಣ ಪ್ರವಾಸಿ ಭಾರತ ತಂಡ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದೆ. ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಇನ್ನೂ ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಇನಿಂಗ್ಸ್ ಆರಂಭಿಸುವುದು ಖಚಿತ.

ಭಾರತ ಗುರುವಾರ 13 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಹನುಮ ವಿಹಾರಿ, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್ ಹಾಗೂ ಉಮೇಶ್ ಯಾದವ್‌ರಿದ್ದಾರೆ. ಭಾರತ 2012ರಲ್ಲಿ ಪರ್ತ್ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದಾಗ ನಾಯಕ ಎಂಎಸ್ ಧೋನಿ ವೇಗದ ಬೌಲರ್‌ಗಳಾದ ಝಹೀರ್ ಖಾನ್, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾರನ್ನು ಕಣಕ್ಕಿಳಿಸಿದ್ದರು. ಆ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಆಫ್-ಸ್ಪಿನ್‌ನಲ್ಲಿ 7.2 ಓವರ್ ಬೌಲಿಂಗ್ ಮಾಡಿದ್ದರು. ರೋಹಿತ್ ಬೆನ್ನುನೋವಿನಿಂದ ಬಳಲುತ್ತಿರುವ ಕಾರಣ ವಿಹಾರಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧ ದಿ ಓವಲ್‌ನಲ್ಲಿ ನಡೆದಿದ್ದ 5ನೇ ಟೆಸ್ಟ್ ಪಂದ್ಯದಲ್ಲಿ ವಿಹಾರಿ ಚೊಚ್ಚಲ ಪಂದ್ಯ ಆಡಿದ್ದರು. 56 ರನ್ ಗಳಿಸಿ ಗಮನ ಸೆಳೆದಿದ್ದರು.

ವಿಹಾರಿ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಓವಲ್‌ನಲ್ಲಿ ಭಾರತ ನಾಲ್ವರು ಪೂರ್ಣಕಾಲಿಕ ಬೌಲರ್‌ಗಳನ್ನು ಆಡಿಸಿದ್ದು, ವಿಹಾರಿ 10.3 ಓವರ್ ಬೌಲಿಂಗ್ ಮಾಡಿದ್ದರು. ಸಿಡ್ನಿಯಲ್ಲಿ ನಡೆದಿರುವ ಅಭ್ಯಾಸ ಪಂದ್ಯದಲ್ಲಿ 12 ಓವರ್ ಬೌಲಿಂಗ್ ಮಾಡಿದ್ದಾರೆ. ವಿಜಯ್ ಅವರೊಂದಿಗೆ ವಿಹಾರಿಯನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಲು ಭಾರತದ ಕ್ರಿಕೆಟ್ ಪಂಡಿತರು ಯೋಚಿಸುತ್ತಿದ್ದು, ಅಶ್ವಿನ್ ಬದಲಿಗೆ ತಂಡ ಸೇರಿರುವ ಭುವನೇಶ್ವರ್ ಗೆ ಅವಕಾಶ ನೀಡಿ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಲು ಚಿಂತಿಸಲಾಗುತ್ತಿದೆ.

ವಾಕಾ ಸ್ಟೇಡಿಯಂ ಪಿಚ್‌ನ್ನು ನವೀಕರಿಸಿದ ಬಳಿಕ ನವೆಂಬರ್‌ನಲ್ಲಿ ಶೀಫೀಲ್ಡ್ ಶೀಲ್ಡ್ ಪಂದ್ಯ ನಡೆದಿದೆ. 4 ದಿನಗಳ ಪಂದ್ಯದಲ್ಲಿ ಉರುಳಿದ್ದ 40 ವಿಕೆಟ್‌ಗಳ ಪೈಕಿ 8 ವಿಕೆಟ್ ಸ್ಪಿನ್ನರ್‌ಗಳ ಪಾಲಾಗಿದ್ದವು. ನಥಾನ್ ಲಿಯೊನ್ 120 ರನ್‌ಗೆ 7 ವಿಕೆಟ್ ಹಾಗೂ ಎಡಗೈ ಸ್ಪಿನ್ನರ್ ಅಶ್ಟನ್ ಅಗರ್ 69ಕ್ಕೆ1 ವಿಕೆಟ್ ಪಡೆದಿದ್ದರು.

ಆಸ್ಟ್ರೇಲಿಯ ತನ್ನ ಬ್ಯಾಟಿಂಗ್ ಸರದಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಮೊದಲ ಟೆಸ್ಟ್‌ನಲ್ಲಿ ವಿಫಲವಾಗಿರುವ ಆ್ಯರೊನ್ ಫಿಂಚ್ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಉಸ್ಮಾನ್ ಖ್ವಾಜಾ ಅಥವಾ ಶಾನ್ ಮಾರ್ಷ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಡಿಲೇಡ್‌ನಲ್ಲಿ ಬಲಗೈಗೆ ಗಾಯ ಮಾಡಿಕೊಂಡಿದ್ದ ನಾಯಕ ಟಿಮ್ ಪೈನ್ 2ನೇ ಟೆಸ್ಟ್ ಗೆ ಫಿಟ್ ಇರುವುದಾಗಿ ಹೇಳಿದ್ದಾರೆ. ಆಸ್ಟ್ರೇಲಿಯ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗುವ ನಿರೀಕ್ಷೆಯಿಲ್ಲ.

ಆಸ್ಟ್ರೇಲಿಯ ಸಿಡ್ನಿಯಲ್ಲಿ ಆ್ಯಶಸ್ ಸರಣಿಯನ್ನು ಜಯಿಸುವುದರೊಂದಿಗೆ 2018ರ ವರ್ಷವನ್ನು ಆರಂಭಿಸಿತ್ತು. ಡರ್ಬನ್‌ನಲ್ಲಿ ದ. ಆಫ್ರಿಕವನ್ನು ಸುಲಭವಾಗಿ ಸೋಲಿಸಿತ್ತು. ಆ ಬಳಿಕ ಆಸೀಸ್ ಅಂದುಕೊಂಡಂತೆ ಏನೂ ನಡೆದಿಲ್ಲ. ದುಬೈನಲ್ಲಿ ಪ್ರಯಾಸದಿಂದ ಟೆಸ್ಟ್ ಪಂದ್ಯ ಡ್ರಾಗೊಳಿಸಿತ್ತು.

ಅಂಕಿ ಅಂಶ

►ಮಿಚೆಲ್ ಸ್ಟಾರ್ಕ್ ಗೆ ಟೆಸ್ಟ್ ನಲ್ಲಿ 200 ವಿಕೆಟ್ ಪೂರೈಸಲು 9 ವಿಕೆಟ್‌ಗಳ ಅಗತ್ಯವಿದೆ. ಸ್ಟಾರ್ಕ್ ಈ ಸಾಧನೆ ಮಾಡಿದ ಆಸ್ಟ್ರೇಲಿಯದ 17ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

►ಲೋಕೇಶ್ ರಾಹುಲ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸಲು 106 ರನ್ ಅಗತ್ಯವಿದೆ.

►ಪರ್ತ್ ಸ್ಟೇಡಿಯಂ ಟೆಸ್ಟ್ ಪಂದ್ಯ ಆಯೋಜಿಸುತ್ತಿರುವ ಆಸ್ಟ್ರೇಲಿಯದ 10ನೇ ತಾಣ.

►ಭಾರತದ ವೇಗದ ಬೌಲರ್‌ಗಳು 2018ರಲ್ಲಿ ಒಟ್ಟು 47.3 ಸ್ಟ್ರೈಕ್‌ರೇಟ್‌ನಲ್ಲಿ ಬೌಲಿಂಗ್ ಮಾಡಿದ್ದಾರೆ. ಇದು ಕ್ಯಾಲೆಂಡರ್ ವರ್ಷದಲ್ಲಿ ಉತ್ತಮ ಸಾಧನೆಯಾಗಿದೆ.

ಪಂದ್ಯದ ಸಮಯ

ಬೆಳಗ್ಗೆ 7:50 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News