ವಾಣಿಜ್ಯ ಬ್ಯಾಂಕ್‍ಗಳ ಬೆಳೆ ಸಾಲಮನ್ನಾ: ಡಿ.28 ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ: ಮಂಡ್ಯ ಡಿಸಿ

Update: 2018-12-13 18:47 GMT

ಮಂಡ್ಯ, ಡಿ.13: ರಾಜ್ಯ ಸರಕಾರ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಒಂದು ತಂತ್ರಾಂಶವನ್ನು ತಂದಿದ್ದು, ಡಿಸೆಂಬರ್ 31, 2017 ರೊಳಗೆ ಬೆಳೆಸಾಲ ಪಡೆದ ಪ್ರತಿಯೊಬ್ಬ ರೈತರು ಸಾಲ ಪಡೆದ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಡಿ.28ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. 

ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ತದನಂತರದ ರೈತರಿಗೆ ಕ್ರಮಬದ್ದವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‍ಗಳನ್ನು ನೀಡಿದ ದಿನಾಂಕಗಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ರೈತರ ಸ್ವಯಂ ದೃಢೀಕರಣ ಪತ್ರದೊಂದಿಗೆ ಆಧಾರ್ ಕಾರ್ಡ್, ಪಡಿತರ ಚೀಟಿಗಳ ನಕಲು ಮತ್ತು ಭೂಮಿಯ ಸರ್ವೆ ನಂಬರ್ ವಿವರಗಳನ್ನು ಒದಗಿಸಬೇಕು. 

ಎಪ್ರಿಲ್ 1, 2009 ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆಸಾಲಗಳು ಮತ್ತು ಡಿಸೆಂಬರ್ 31, 2017ರವರೆಗೆ ಬಾಕಿ ಇರುವ ಬೆಳೆಸಾಲ ಹಾಗೂ ಕೇವಲ ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ ಅರ್ಹರಿರುತ್ತಾರೆ. ಒಂದು ಕುಟುಂಬವು ಗರಿಷ್ಠ 2 ಲಕ್ಷ ರೂ.ವರೆಗೆ ಮಾತ್ರ ಬೆಳೆಸಾಲ ಮನ್ನಾ ಪಡೆಯಲು ಅರ್ಹರಿದ್ದು, ಜುಲೈ 5, 2018ಕ್ಕಿಂತ ಮುಂಚಿತವಾಗಿ ಪಡೆದ ರೇಶನ್ ಕಾರ್ಡ್‍ನ್ನು ಕಡ್ಡಾಯವಾಗಿ ಸಲ್ಲಿಸುವವರನ್ನು ಮಾತ್ರ ಪರಿಗಣಿಸಲಾಗುವುದು.

ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರೋ ಮತ್ತು ರಾಜ್ಯ, ಕೇಂದ್ರ ಸರಕಾರಿ, ಅರೆ ಸರಕಾರಿ, ಸರಕಾರದಿಂದ ಅನುದಾನಕ್ಕೊಳಪಡುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪ್ರತಿ ತಿಂಗಳು 15,000 ರೂ.ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.

ಪ್ರತಿ ಬ್ಯಾಂಕ್ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತನ್ನು ಕೂಡ ನೀಡಲಾಗಿದ್ದು, ರೈತರಿಗೆ ಯಾವುದಾದರೂ ಗೊಂದಲು ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಸಹಾಯವಾಣಿ ಸಂಖ್ಯೆ 08232-231215 ಅಥವಾ 08232231596 ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News