ದೇವಸ್ಥಾನದ ಪ್ರಸಾದ ಸೇವಿಸಿ 7 ಸಾವು ಪ್ರಕರಣ: ಜಿಲ್ಲಾಧಿಕಾರಿ ಬಳಿ ವರದಿ ಕೇಳಿದ ಸಿಎಂ ಕುಮಾರಸ್ವಾಮಿ

Update: 2018-12-14 14:04 GMT

ಚೆನ್ನೈ, ಡಿ.14: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಮಾರ್ತಳ್ಳಿಯಲ್ಲಿ ದೇವಾಲಯದಲ್ಲಿ ಪ್ರಸಾದ ಸ್ವೀಕರಿಸಿ ಮಗು ಸೇರಿ 7 ಜನ ಮೃತಪಟ್ಟಿರುವ ಘಟನೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಬಳಿ ವಿಸ್ತೃತ ವರದಿ ನೀಡುವಂತೆ ಸೂಚಿಸಿದ್ದಾರೆ.

ಶುಕ್ರವಾರ ತಮಿಳುನಾಡಿನ ಚೆನ್ನೈನಲ್ಲಿರುವ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಮಠದ ಶತಾಯುಷಿ ಡಾ.ಶಿವಕುಮಾರಸ್ವಾಮೀಜಿಯ ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಸಾಂತ್ವನ ಹೇಳಿದರು. ಅಲ್ಲದೆ, ಸರಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಾಗುವುದು. ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಲ್ಲಿನ ವೈದ್ಯರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.

ಇಂತಹ ಘಟನೆ ನಡೆಯಬಾರದಿತ್ತು. ಸರಕಾರದಿಂದ ಮೃತರ ಕುಟುಂಬಗಳಿಗೆ ನೆರವು ಒದಗಿಸಲಾಗುವುದು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವಿಸ್ತೃತ ವರದಿ ನೀಡುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಡಾ.ಮುಹಮ್ಮದ್ ರೇಲಾ ನೇತೃತ್ವದಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳ ಆರೋಗ್ಯ ದಿನದಿಂದ ದಿನಕ್ಕೆ ಗುಣಮುಖವಾಗುತ್ತಿದೆ. ಅವರು ಶೀಘ್ರವೇ ಸಂಪೂರ್ಣ ಗುಣಮುಖರಾಗಿ ಜನತೆಯ ಸೇವೆಯಲ್ಲಿ ತೊಡಗಲಿ ಎಂದು ಕುಮಾರಸ್ವಾಮಿ ಹಾರೈಸಿದರು.

ಸಿದ್ದಗಂಗಾ ಶ್ರೀಗಳು ಮಾಡಿಕೊಂಡು ಬಂದಿರುವ ತ್ರಿವಿಧ ದಾಸೋಹದ ಕೈಂಕರ್ಯ ಇಡೀ ದೇಶಕ್ಕೆ ಮಾದರಿಯಾಗಿದೆ. ಶ್ರೀಗಳ ಆಶೀರ್ವಾದ ಎಲ್ಲರ ಮೇಲೂ ನಿರಂತರವಾಗಿರಲಿ ಎಂದು ಅವರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಬೋಜೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News