ವಿಧಾನಪರಿಷತ್ ನಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಪ್ರಸ್ತಾಪ: ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ

Update: 2018-12-14 14:13 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.14: ಬೆಳಗಾವಿಯಲ್ಲಿ ಅಧಿವೇಶನ ಕರೆದಿರುವುದು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು. ಆದರೆ, ಪ್ರತಿಪಕ್ಷ ಬಿಜೆಪಿ ಮಾತ್ರ ರಾಜಕೀಯ ಲಾಭಕ್ಕಾಗಿ ಟಿಪ್ಪು ಸುಲ್ತಾನ್ ಜಯಂತಿ, ಅನ್ವರ್ ಮಾಣಿಪ್ಪಾಡಿ ವರದಿ ಕುರಿತು ಪ್ರಸ್ತಾಪ ಮಾಡುತ್ತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಕ್ಫ್ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಬಿಜೆಪಿ ಸರಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸಮಿತಿ ಸಲ್ಲಿಸಿದ್ದ ವರದಿ ಕುರಿತು ಪ್ರಸ್ತಾಪಿಸಿದ್ದರಿಂದ ಕೆಲಕಾಲ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಝಮೀರ್‌ ಅಹ್ಮದ್‌ ಖಾನ್, ರಾಜ್ಯ ಸರಕಾರದಿಂದ ವಕ್ಫ್ ಆಸ್ತಿಗಳ ಅಕ್ರಮಗಳ ಕುರಿತು ತನಿಖೆ ನಡೆಸಲು ಯಾವ ಸಮಿತಿಯನ್ನು ರಚಿಸಿಲ್ಲ ಎಂದರು. ಇದಕ್ಕೆ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು, ಅನ್ವರ್ ಮಾಣಿಪ್ಪಾಡಿ ವಕ್ಫ್ ಆಸ್ತಿಗಳಲ್ಲಿ ಆಗಿರುವ ಅಕ್ರಮಗಳ ಕುರಿತು ವರದಿ ನೀಡಿದ್ದಾರೆ. ಆದರೆ, ಸರಕಾರ ಮಾತ್ರ ಸಮಿತಿಯನ್ನು ರಚನೆ ಮಾಡಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ ಝಮೀರ್‌ ಅಹ್ಮದ್‌ ಖಾನ್, ಆಯೋಗವೇ ಬೇರೆ, ಸಮಿತಿಯೇ ಬೇರೆ. ರಾಜ್ಯ ಸರಕಾರ ಯಾವುದೆ ಸಮಿತಿಯನ್ನು ರಚನೆ ಮಾಡಿಲ್ಲ ಎಂದು ತಮ್ಮ ಉತ್ತರವನ್ನು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಪ್ರತಿಪಕ್ಷ ಬಿಜೆಪಿಗೆ ಕಾಳಜಿಯಿಲ್ಲ. ನಿನ್ನೆ ವಿಧಾನಸಭೆಯಲ್ಲಿ ಮೂರು ಗಂಟೆಗಳ ಕಾಲ ಟಿಪ್ಪು ಸುಲ್ತಾನ್ ಜಯಂತಿ ಬಗ್ಗೆ ಚರ್ಚೆ ಮಾಡಿದ್ದಾರೆ. ಈಗ ಅನ್ವರ್ ಮಾಣಿಪ್ಪಾಡಿ ವರದಿ ಬಗ್ಗೆ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಝಮೀರ್‌ ಅಹ್ಮದ್‌ ಖಾನ್ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ನ್ಯಾಯಾಲಯ ಈಗಾಗಲೇ ಆದೇಶಿಸಿದೆ. ಸುಮಾರು ಎರಡು ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಕ್ಫ್ ಆಸ್ತಿ ಒತ್ತುವರಿಯಾಗಿದೆ ಎಂದರು.

ನ್ಯಾಯಾಲಯದ ಆದೇಶದಂತೆ ಸದನದಲ್ಲಿ ವರದಿ ಮಂಡಿಸಿ ಹಾಗು ಸರಕಾರ ಉತ್ತರ ನೀಡಬೇಕೆಂದು ಅವರು ಒತ್ತಾಯಿಸಿದರು. ಇದಕ್ಕೆ ಆಡಳಿತ ಪಕ್ಷದ ಎಚ್.ಎಂ.ರೇವಣ್ಣ, ಧರ್ಮಸೇನಾ ಮತ್ತಿತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಬಿಜೆಪಿ ಸದಸ್ಯರು ಸದನದಲ್ಲಿ ಗದ್ದಲವನ್ನುಂಟು ಮಾಡಿದರು.

ಈ ವೇಳೆ ಸರಕಾರದ ನೆರವಿಗೆ ಬಂದ ಸಭಾಪತಿ ಕೆ.ಪ್ರತಾಪ್‌ ಚಂದ್ರ ಶೆಟ್ಟಿ, ಬಿಜೆಪಿ ಸದಸ್ಯ ನಾರಾಯಣ ಸ್ವಾಮಿಯನ್ನುದ್ದೇಶಿಸಿ ನೀವು ಕೇಳಿದ ಪ್ರಶ್ನೆಗೂ, ಈಗ ಪ್ರಸ್ತಾಪ ಮಾಡುತ್ತಿರುವ ವಿಷಯಕ್ಕೂ ಯಾವುದೆ ಸಂಂಬಂಧವಿಲ್ಲ ಎಂದರು. ಆಗ ಮಧ್ಯೆ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ, ಈ ವಿಷಯವನ್ನು ಪ್ರತಿಪಕ್ಷದ ಸದಸ್ಯರು ಬೇರೆ ರೂಪದಲ್ಲಿ ತಂದು ಚರ್ಚೆ ಮಾಡಲಿ, ಸರಕಾರ ಉತ್ತರ ಕೊಡುತ್ತದೆ ಎಂದರು.

ಆಗ ಮತ್ತೆ ಮಾತು ಮುಂದುವರೆಸಿದ ಝಮೀರ್‌ ಅಹ್ಮದ್‌ ಖಾನ್, ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ನ್ಯಾಯಾಲಯ ನೀಡಿರುವ ಆದೇಶದ ಪ್ರತಿ ಇನ್ನೂ ನಮಗೆ ಸಿಕ್ಕಿಲ್ಲ. ನಿಮ್ಮ ಬಳಿ ತೀರ್ಪಿನ ಪ್ರತಿ ಇದ್ದರೆ ಕೊಡಿ, ಅದನ್ನು ಓದಿದ ಬಳಿಕ ಉತ್ತರ ನೀಡುತ್ತೇನೆ. ರಾಜಕೀಯ ಲಾಭಕ್ಕಾಗಿ ಸದನದಲ್ಲಿ ಇದನ್ನು ಮಾತನಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News