ಹನೂರು: ದೇವಸ್ಥಾನದ ಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ

Update: 2018-12-14 15:23 GMT

ಹನೂರು,ಡಿ.14: ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ ಹನ್ನೊಂದಕ್ಕೆ ಏರಿದ್ದು, 80 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಬಿದ್ದರಹಳ್ಳಿ ನಿವಾಸಿಗಳಾದ ಗೋಪಿಯಮ್ಮ(35), ಶಾಂತರಾಜು (20) ಒಡರದೊಡ್ಡಿ ನಿವಾಸಿ ಅನಿತಾ, ದೊಡ್ಡಾಣೆ ನಿವಾಸಿ ಅಣ್ಣಯಪ್ಪ, ಎಂ.ಜಿ ದೊಡ್ಡಿ ನಿವಾಸಿ ಪಾಪಣ್ಣ(35) ಅನಿಲ್, ಶಾಂತ, ಕೃಷ್ಣನಾಯ್ಕ ಪ್ರಸಾದ್, ರಾಚಯ್ಯ, ದೊಡ್ಡಮಾದಯ್ಯ ಎಂದು ಗುರುತಿಸಲಾಗಿದೆ. ಘಟನೆಯಿಂದ ಹಲವರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆ ಹಾಗೂ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸುಲ್ವಾಡಿಯ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಈ ಅವಘಡ ಸಂಭವಿಸಿದ್ದು, ಕಾರ್ಯಕ್ರಮದಲ್ಲಿ ಭಕ್ತರಿಗೆ ಹಂಚಿದ ಪ್ರಸಾದ ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. 

ಪ್ರಸಾದವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸ್ಥಳಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಫೌಜಿಯಾ ತರುನ್ನಮ್ ಹಾಗೂ ಡಿ.ಹೆಚ್.ಓ ಪ್ರಸಾದ್, ತಹಶೀಲ್ದಾರ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಇಬ್ಬರ ವಶ: ಈ ಘಟನೆ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಷ ಹಾಕಿದ್ದಾರೆ ಎಂಬ ಶಂಕೆಯ ಮೇರೆಗೆ ಚಿನ್ನಪ್ಪಿ ಮತ್ತು ಮಾದೇವ ಎಂಬವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

60 ಕಾಗೆಗಳು ಸಾವು: ಘಟನೆಯಿಂದ ಹಲವರು ಅಸ್ವಸ್ಥಗೊಂಡಿದ್ದು ಮಾತ್ರವಲ್ಲದೇ, ದೇವಸ್ಥಾನದ ಅಂಗಳದಲ್ಲಿ ಬಿಸಾಕಿದ್ದ ಪ್ರಸಾದವನ್ನು ಸೇವಿಸಿದ ಪರಿಣಾಮ 60ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News