ಸಕಲೇಶಪುರ: ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ

Update: 2018-12-14 18:30 GMT

ಸಕಲೇಶಪುರ, ಡಿ.14: ಅನೈತಿಕ ಸಂಬಂಧವನ್ನು ಪ್ರಶ್ನಿಸಿ ತಕರಾರು ತೆಗೆದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು, ತರಾತುರಿಯಿಂದ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪತಿಗೆ ಜೀವಾವಧಿ ಶಿಕ್ಷೆಯನ್ನು 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆದೇಶಿಸಿದ್ದಾರೆ.

ವಿಚಾರಣಾಕಾಲದಲ್ಲಿ ಮೃತೆ ಗೀತಾಳ ತಂದೆ-ತಾಯಿ, ಸಂಬಂಧಿಕರು ಹಾಗೂ ಸಾಕ್ಷಿದಾರರು ಆರೋಪಿ ಸುರೇಶನೊಂದಿಗೆ ರಾಜಿ ಮಾಡಿಕೊಂಡು ಪ್ರತಿಕೂಲ ಸಾಕ್ಷ ನುಡಿದಿದ್ದರು. ಡಿಎನ್‌ಎ ವರದಿ ಹಾಗೂ ವೈದ್ಯಕೀಯ ಸಾಕ್ಷದ ಆಧಾರದ ಮೇರೆಗೆ ಆರೋಪಿಯ ಮೇಲಿರುವ ದೋಷಾರೋಪಣೆ ಸಾಬೀತಾಗಿದೆ ಎಂದು ತೀರ್ಮಾನಿಸಿ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನ್‌ಭಟ್ ಆರೋಪಿ ಸುರೇಶ ಇವರಿಗೆ ಶಿಕ್ಷೆ ಪ್ರಕಟಿಸಿದ್ದಾರೆ.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ (ಸರಕಾರಿ ಅಭಿಯೋಜಕರು) ಜಯರಾಮಶೆಟ್ಟಿರವರು ವಾದ ಮಂಡಿಸಿದ್ದರು.

ಶಿಕ್ಷೆಗೆ ಪೂರಕವಾರ ಅಂಶ: ಸುರೇಶ್ ತನ್ನ ಪತ್ನಿಯನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ಸುರೇಶನ ಮುಖಕ್ಕೆ ಉಗುರಿನಿಂದ ಪರಚಿದ್ದಳು. ಈ ಸಂದರ್ಭದಲ್ಲಿ ಮೃತೆ ಗೀತಾಳ ಉಗುರಿನಲ್ಲಿ ಸುರೇಶ್ ದೇಹದ ಮಾಂಸದ ಅಂಶ ಡಿಎನ್‌ಎ ವರದಿ ಹಾಗೂ ವೈದ್ಯಕೀಯ ಸಾಕ್ಷದಲ್ಲಿ ಪತ್ತೆಯಾಗಿತ್ತು.

ಪ್ರಕರಣದ ಹಿನ್ನೆಲೆ: ಗೀತಾ(38) ಕೊಲೆಯಾದ ಮಹಿಳೆ. ಈಕೆಯ ಪತಿ ಮರದ ವ್ಯಾಪಾರಿ ಸುರೇಶ್‌ನನ್ನು ಬಂಧಿಸಲಾಗಿದೆ.

‘‘ಪಟ್ಟಣದ ಮಲ್ಲಿಕಾರ್ಜುನ ನಗರ ಬಡಾವಣೆಯ ಮನೆಯಲ್ಲಿ 2015 ಮಾರ್ಚ್ 8ರಂದು ಮಧ್ಯಾಹ್ನ 2:20ರ ಸಮಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಜಗಳ ವಿಕೋಪಕ್ಕೇರಿ ಸಿಟ್ಟು ತಾಳಲಾರದ ಸುರೇಶ್ ತನ್ನ ಪತ್ನಿಯ ಮೂಗಿಗೆ ದಿಂಬು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆಮಾಡಿದ್ದ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News