'ಜಾತ್ಯತೀತ ಮತಗಳನ್ನು ಒಡೆಯಲು ಸಿಪಿಎಮ್‌ನ ಕಾರಟ್ ಗುಂಪು ಬಿಜೆಪಿಯಿಂದ 100 ಕೋ. ರೂ. ಪಡೆದಿತ್ತು'

Update: 2018-12-14 18:38 GMT

ಹೊಸದಿಲ್ಲಿ, ಡಿ.14: ದೇಶದಲ್ಲಿ ಜಾತ್ಯತೀತ ಮತಗಳನ್ನು ಒಡೆಯುವುದಕ್ಕೆ ನೆರವಾಗಿದ್ದಕ್ಕಾಗಿ ಸಿಪಿಎಂನ ಪ್ರಕಾಶ ಕಾರಟ್ ಬಣವು ಬಿಜೆಪಿಯಿಂದ 100 ಕೋಟಿ ರೂ. ಸ್ವೀಕರಿಸಿದೆ ಎಂದು ಕೇರಳದ ಸಿಪಿಎಂ ಮಾಜಿ ಸಂಸದ ಎ.ಪಿ. ಅಬ್ದುಲ್ಲಾ ಕುಟ್ಟಿ ಅವರು ಹೇಳಿದ್ದಾರೆ.

ತನ್ನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಅವರು ಪೋಸ್ಟ್ ಮಾಡಿರುವ ಈ ಆಘಾತಕಾರಿ ವಿಷಯ ಇತ್ತೀಚಿನ ರಾಜಸ್ಥಾನ ವಿಧಾನಸಭಾ ಚುನಾವಣೆಯೊಂದಿಗೆ ತಳುಕು ಹಾಕಿಕೊಂಡಿದೆ.

2009ರಲ್ಲಿ ಪಕ್ಷದಿಂದ ಉಚ್ಚಾಟನೆಗೊಳ್ಳುವ ಮುನ್ನ ಎರಡು ಬಾರಿ ಕಣ್ಣೂರಿನ ಸಿಪಿಎಂ ಸಂಸದರಾಗಿದ್ದ ಕುಟ್ಟಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೀಳಲಿದ್ದ ಮತಗಳನ್ನು ಒಡೆಯುವ ಮೂಲಕ ಸಿಪಿಎಂ ಬಿಜೆಪಿ ಅಭ್ಯರ್ಥಿಗಳಿಗೆ ನೆರವಾಗುತ್ತಿದೆ ಎಂದು ದಿಲ್ಲಿಯಲ್ಲಿ ಪಕ್ಷದ ಹಿರಿಯ ಕಾಮ್ರೇಡ್‌ಗಳು ಮಾತನಾಡುತ್ತಿ ದ್ದುದನ್ನು ತಾನು ಕೇಳಿಸಿಕೊಂಡಿದ್ದೆ ಎಂದು ಬರೆದಿದ್ದಾರೆ.

ರಾಜಸ್ಥಾನದಲ್ಲಿ ಕೇವಲ 28 ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಸಿಪಿಎಂ ಸುಮಾರು ನಾಲ್ಕು ಲಕ್ಷ ಮತಗಳನ್ನು ವಿಭಜಿಸಲು ನೆರವಾಗಿತ್ತು. ಸಿಪಿಎಂ ಉಪಸ್ಥಿತಿಯು ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿತ್ತು. ಹೆಚ್ಚಿನ ಕ್ಷೇತ್ರಗಳಲ್ಲಿ ಠೇವಣಿಗಳನ್ನು ಉಳಿಸಿಕೊಳ್ಳಲು ಸಿಪಿಎಂಗೆ ಸಾಧ್ಯವಾಗಿಲ್ಲವಾದರೂ ಅವರ ಚಾಣಾಕ್ಷ ನಡೆಯ ಮೂಲಕ ಪಕ್ಷವು ಕೋಟಿಗಳ ಲೆಕ್ಕದಲ್ಲಿ ಗಳಿಸುತ್ತಿದೆ ಎಂದು ಕುಟ್ಟಿ ಪ್ರತಿಪಾದಿಸಿದ್ದಾರೆ.

 2009ರಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಅವರು ಕಾಂಗ್ರೆಸ್‌ಗೆ ಸೇರಿ ಉಪಚುನಾವಣೆಯಲ್ಲಿ ಕಣ್ಣೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. 2011ರಲ್ಲಿಯೂ ಅದೇ ಕ್ಷೇತ್ರದಿಂದ ಗೆದ್ದಿದ್ದ ಅವರು 2016ರಲ್ಲಿ ತಲಶ್ಶೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News