ಸಾಲ ಮನ್ನಾ ಯೋಜನೆಗೆ ರೈತರ ಹೆಸರು ನೋಂದಾಯಿಸಲು ಚಿಕ್ಕಮಗಳೂರು ಡಿಸಿ ಸೂಚನೆ

Update: 2018-12-14 19:09 GMT

ಚಿಕ್ಕಮಗಳೂರು, ಡಿ.14: ಸರಕಾರ ಬೆಳೆ ಸಾಲಮನ್ನಾ ಯೋಜನೆ ಜಾರಿಗಾಗಿ ಸಾಲ ಪಡೆದ ರೈತರು ವಾಣಿಜ್ಯ ಬ್ಯಾಂಕ್‍ಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ರಾಜ್ಯ ಸರಕಾರ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನಾ ಮಾಡಲು ತಂತ್ರಾಂಶವೊಂದನ್ನು ಪರಿಚಯಿಸಿದ್ದು, ಸಾಲ ಮನ್ನಾಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಫಲಾನುಭವಿಗಳು ಅನುಸರಿಸಬೇಕಾಗಿದೆ. 2019ರ ಜ.10ರೊಳಗೆ ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತ ತಮ್ಮ ತಮ್ಮ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಸಾಕಷ್ಟು ಸಮಯಾವಕಾಶ ಇರುವುದರಿಂದ ಯಾವುದೇ ದಿನದಲ್ಲಿ ರೈತರು ಬ್ಯಾಂಕ್‍ಗಳಿಗೆ ಭೇಟಿ ನೀಡಬಹುದು. ಆಧಾರ್, ರೇಷನ್  ಕಾರ್ಡ್ ಪ್ರತಿ ಮತ್ತು ಸಾಲ ಪಡೆದ ಜಾಗದ ಸರ್ವೆ ಸಂಖ್ಯೆಯ ಮಾಹಿತಿಯನ್ನು ತಪ್ಪದೇ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಒಂದು ಬ್ಯಾಂಕ್ ಶಾಖೆಯನ್ನು ಪ್ರತಿ ದಿನ ಕನಿಷ್ಟ 40 ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ನಂತರ ಅವರಿಗೆ ಟೋಕನ್‍ಗಳನ್ನು ನೀಡಿದ ದಿನಾಂಕದಂದು ಬ್ಯಾಂಕ್ ಶಾಖೆಗೆ ತೆರಳಿ ಸ್ವಯಂ ದೃಢೀಕರಣ ಪತ್ರದೊಂದಿಗೆ ಇತರ ದಾಖಲೆಗಳ ವಿವರವನ್ನು ಫಲಾನುಭವಿಗಳು ಸಲ್ಲಿಸಬೇಕು. 2009ರ ಎ.1ರಂದು ಹಾಗೂ ನಂತರ ದಿನಗಳಲ್ಲಿ ಮಂಜೂರಾದ ಬೆಳೆ ಸಾಲಗಳು ಹಾಗೂ 2017ರ ಡಿ.31 ರವರೆಗೆ ಬಾಕಿ ಇರುವ ಬೆಳೆ ಸಾಲ ಪಡೆದ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅಲ್ಲದೇ ಕೇವಲ ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ  ಫಲಾನುಭವಿಗಳು ಅರ್ಹರಾಗಿರುತ್ತಾರೆ (ಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್‍ಪಿಎ ಸಾಲಗಳು ಅರ್ಹವಾಗಿದೆ) ಎಂದು ಅವರು ತಿಳಿಸಿದ್ದಾರೆ. 

ಇದರ ಜೊತೆಗೆ ಒಂದು ಕುಟುಂಬದಲ್ಲಿ (ಗಂಡ-ಹೆಂಡತಿ-ಅವಲಂಬಿತ ಮಕ್ಕಳು) ಗರಿಷ್ಟ 2 ಲಕ್ಷ ರೂ. ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅರ್ಹರಿದ್ದಾರೆ. ಇದಕ್ಕಾಗಿ 2018ರ ಜುಲೈ 5 ಕ್ಕಿಂತ ಮುಂಚಿತವಾಗಿ ಪಡೆದ ರೇಷನ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು. ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರು ಮತ್ತು ರಾಜ್ಯ, ಕೇಂದ್ರ ಸರಕಾರಿ, ಅರೆ ಸರಕಾರಿ ಅನುದಾನಕ್ಕೊಳಪಡಿಸುವ ಸಂಸ್ಥೆಯಲ್ಲಿ ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಈ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹತೆಯನ್ನು ಹೊಂದಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ತಿಂಗಳಿಗೆ 15,000ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಈ ಯೋಜನೆಯ ಸೌಲಭ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಸಾಲ ಮನ್ನಾ ಮಾಡಲು ಅರ್ಹ ಇರುವುದಿಲ್ಲ. ರೈತರು ಸಾಲಮನ್ನಾ ಯೋಜನೆಯಡಿಯಲ್ಲಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೋಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ರೈತರು ಯಾವುದೇ ಗೊಂದಲಕ್ಕೊಳಗಾಗದೇ ಶಾಂತ ರೀತಿಯಿಂದ ನೋಂದಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ ಸಂಖ್ಯೆ: 08262-235262 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News