ಸಿದ್ದು ಕೆಳಗಿಳಿಸಲು ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರಿಂದ ರಹಸ್ಯ ಸಭೆ?

Update: 2018-12-15 04:19 GMT

ಬೆಳಗಾವಿ, ಡಿ.15: ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಗೈರುಹಾಜರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಿಂದುಳಿದ ವರ್ಗಗಳ ಪ್ರಬಲ ಮುಖಂಡ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಶಂಕೆಯ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು "ರಹಸ್ಯ" ಸಭೆ ನಡೆಸಿ, ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಈ ಹಿರಿಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಹಿರಿಯ ಶಾಸಕರಾದ ಆರ್.ರಾಮಲಿಂಗಾರೆಡ್ಡಿ ಮತ್ತು ರೋಶನ್ ಬೇಗ್, ಎಂಟಿಬಿ ನಾಗರಾಜ್, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮತ್ತಿತರರು ಪಾಲ್ಗೊಂಡಿದ್ದರು ಎಂದು ಸಭೆಯಲ್ಲಿ ಪಾಲ್ಗೊಂಡ ಶಾಸಕರೊಬ್ಬರು ಬಹಿರಂಗಪಡಿಸಿದ್ದಾರೆಂದು ಹೇಳಲಾಗಿದೆ. ಸಂಪುಟ ಸೇರ್ಪಡೆಗೆ ಹೆಸರುಗಳನ್ನು ಶಿಫಾರಸು ಮಾಡುವಲ್ಲಿ ತಮ್ಮ ಹಿರಿತನವನ್ನು ಕಡೆಗಣಿಸಲಾಗಿದೆ ಎಂಬ ಬಗ್ಗೆ ಸಿದ್ದು ಜತೆ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕರೂ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

ಬೂದಿಮುಚ್ಚಿದ ಕೆಂಡದಂತಿದ್ದ ರಾಜ್ಯ ಕಾಂಗ್ರೆಸ್ ಹಳೆ ಹುಲಿಗಳು ಹಾಗೂ ಸಿದ್ದರಾಮಯ್ಯ ನಡುವಿನ ವೈಮನಸ್ಯ ಇದೀಗ ತೀವ್ರ ಸ್ವರೂಪ ಪಡೆದಿದೆ. ಮಲೇಶ್ಯಗೆ ಖಾಸಗಿ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಅವರು ಸಿಎಲ್‌ಪಿಯ ಉದ್ದೇಶಿತ ಸಭೆಗೆ ಗೈರುಹಾಜರಾಗುತ್ತಾರೆ ಎಂಬ ಕಾರಣಕ್ಕೆ ಸಭೆಯನ್ನೇ ಮುಂದೂಡಿರುವುದು ಇದಕ್ಕೆ ಕಾರಣ.

"ಅವರು ಯಾರೆಂದು ತಿಳಿದುಕೊಂಡಿದ್ದಾರೆ? ಅವರು ತಮಗೆ ಅನಿಸಿದ್ದು ಮಾಡುತ್ತಾರೆ ಹಾಗೂ ನಾಯಕನಾದ ನನ್ನನ್ನು ಅನುಸರಿಸಬೇಕು ಎಂದು ಶಾಲಾ ಮಕ್ಕಳಿಗೆ ಸೂಚಿಸಿದಂತೆ ಹೇಳುತ್ತಾರೆ. ಸಿದ್ದರಾಮಯ್ಯ ಅವರಂತೆ ನಮ್ಮಲ್ಲಿ ಹಲವರು ಕೂಡಾ ನಾಲ್ಕು, ಐದು, ಆರು ಮತ್ತು ಏಳನೇ ಬಾರಿಗೆ ಸಚಿವರಾಗಿದ್ದೇವೆ" ಎಂದು ಹಿರಿಯ ಕಾಂಗ್ರೆಸ್ ಶಾಸಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಭೆಯಲ್ಲಿ 8-10 ಶಾಸಕರು ಭಾಗವಹಿಸಿದ್ದು, ಸರ್ಕಾರ ಪತನವಾಗಬಾರದು; ಆದರೆ ನಾಯಕತ್ವ ಬದಲಾಗಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕಗಿ ಲೋಕಸಭೆ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಚರ್ಚಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News