ಹನೂರು ವಿಷ ಪ್ರಸಾದ ಪ್ರಕರಣ: ಇನ್ನೂ ಹಲವರ ಸ್ಥಿತಿ ಗಂಭೀರ

Update: 2018-12-15 05:24 GMT

ಹನೂರು, ಡಿ.15: ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಕುತ್ ಮಾರಮ್ಮ ದೇವಳದಲ್ಲಿ ಶುಕ್ರವಾರ ವಿತರಿಸಲಾದ ವಿಷಪೂರಿತ ಪ್ರಸಾದ ಸ್ವೀಕರಿಸಿ ಅಸ್ವಸ್ಥರಾದವರ ಪೈಕಿ ಇನ್ನೂ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.

ಶುಕ್ರವಾರ ದೇವಳದ ಗೋಪುರ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿತರಿಸಲಾಗಿದ್ದ ಪ್ರಸಾದ ಸೇವಿಸಿದ್ದರಿಂದ ಈ ದುರಂತ ಸಂಭವಿಸಿದೆ. ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಇದುವರೆಗೆ ಒಟ್ಟು 94 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದವರನ್ನು ತುರ್ತಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯ ಕೊಳ್ಳೇಗಾಲ ಮತ್ತು ಕಾಮಗೆರೆ ಆಸ್ಪತ್ರೆಯಲ್ಲಿ ಯಾವುದೇ ರೋಗಿಗಳಿಲ್ಲ. ಅವೆರಲ್ಲರನ್ನು ಮೈಸೂರಿಗೆ ಕಳುಹಿಸಲಾಗಿದೆ ಎಂದು ಕೊಳ್ಳೇಗಾಲ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಇಂದು ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗ ಶೆಟ್ಟಿ, ಸಂಸದ ಆರ್. ಧ್ರುವನಾರಾಯಣ, ಶಾಸಕ ಆರ್.ನರೇಂದ್ರ ಭೇಟಿ ನೀಡಿದರು. ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರನ್ನು ಮತ್ತು ಅಸ್ವಸ್ಥರಾದವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಉಸ್ತುವಾರಿ ಸಚಿವರು ಸಾಂತ್ವನ ಹೇಳಿದರು.

ಈ ಸಂದರ್ಭ ಮಾತನಾಡಿದ ಸಂಸದ ಸಿ.ಪುಟ್ಟರಂಗ ಶೆಟ್ಟಿ, ಶಾಸಕ ಆರ್.ನರೇಂದ್ರ, ಅಸ್ವಸ್ಥಗೊಂಡು ಗಂಭೀರಾವಸ್ಥೆಯಲ್ಲಿರುವವರನ್ನು ಮೈಸೂರಿನ ಏಳೆಂಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿದೆ. ತನಿಖೆ ಪ್ರಗತಿಯಲ್ಲಿದೆ. ಈ ಬಗ್ಗೆ ಈಗಾಗಲೇ ರಾಜ್ಯ ಗೃಹ ಸಚಿವರೊಂದಿಗೆ ಮಾತನಾಡಲಾಗಿದೆ ಎಂದರು.

ಮೃತರ ಕುಟುಂಬಸ್ಥರಿಗೆ ಹಾಗೂ ಅಸ್ವಸ್ಥರಾದವರಿಗೆ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಸಚಿವರು, ಸಂಸದರು ಹಾಗೂ ಶಾಸಕರು ಭರವಸೆ ನೀಡಿದರು.

ಇದೇ ವೇಳೆ ಪ್ರಸಾದ ಸ್ವೀಕರಿಸಿದವರ ಪೈಕಿ ಇಬ್ಬರು ತಮಿಳುನಾಡಿನವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಮಿಳುನಾಡಿನ ಅಂದಿಯೂರು ಸಮೀಪದ ಬರಗೂರು ಗ್ರಾಮದ ಶಿವಣ್ಣ (55) ಹಾಗೂ ಪುಟ್ಟಮಾದೇವಿ(50) ಅಸ್ವಸ್ಥಗೊಂಡವರು. ಇವರಿಗೆ ಆರಂಭದಲ್ಲಿ ಈರೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಇವರಿಬ್ಬರನ್ನು ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News