ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಪ್ರಧಾನಿ ಮಹಿಂದ ರಾಜಪಕ್ಸ ರಾಜೀನಾಮೆ

Update: 2018-12-15 16:41 GMT

ಕೊಲಂಬೊ, ಡಿ. 15: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರಿಂದ ವಿವಾದಾಸ್ಪದ ಸನ್ನಿವೇಶದಲ್ಲಿ ಪ್ರಧಾನಿಯಾಗಿ ನೇಮಕಗೊಂಡಿರುವ ಮಹಿಂದ ರಾಜಪಕ್ಸ ಶನಿವಾರ ಕೊನೆಗೂ ರಾಜೀನಾಮೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಎರಡು ಮಹತ್ವದ ತೀರ್ಪುಗಳು ಅವರಿಗೆ ವಿರುದ್ಧವಾಗಿ ಬಂದ ಹಿನ್ನೆಲೆಯಲ್ಲಿ, ಅಧಿಕಾರಕ್ಕೆ ಜೋತುಬೀಳುವ ಅವರ ಪ್ರಯತ್ನಗಳು ಕೈಗೂಡಲಿಲ್ಲ.

ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂಬುದಾಗಿ ರಾಜಪಕ್ಸ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲಯನ್ಸ್ (ಯುಪಿಎಫ್‌ಎ)ನ ಸಂಸದರಿಗೆ ತಿಳಿಸಿದ್ದಾರೆ ಎಂದು ಸಂಸದ ಶೆಹನ್ ಸೆಮಸಿಂ ಸುದ್ದಿಗಾರರಿಗೆ ತಿಳಿಸಿದರು.

‘ದೇಶದ ಸ್ಥಿರತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ರಾಜಪಕ್ಸ ಶನಿವಾರ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಅವರ ಪುತ್ರ ನಮಲ್ ರಾಜಪಕ್ಸ ಶುಕ್ರವಾರ ಹೇಳಿದ್ದರು.

ಪ್ರಧಾನಿ ಹುದ್ದೆಯ ಅಧಿಕಾರವನ್ನು ರಾಜಪಕ್ಸ ಚಲಾಯಿಸಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಇದಕ್ಕೂ ಒಂದು ದಿನ ಮುಂಚೆ, ಅಂದರೆ ಗುರುವಾರ ಇನ್ನೊಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಶ್ರೀಲಂಕಾ ಸಂಸತ್ತನ್ನು ಅಧ್ಯಕ್ಷರು ವಿಸರ್ಜಿಸಿರುವುದು ಕಾನೂನುಬಾಹಿರ ಎಂದು ಘೋಷಿಸಿತ್ತು.

ಅಧ್ಯಕ್ಷ ಮೈತ್ರಿಪಾಲ ಸಿರಿಸೇನರ ವಿವಾದಾತ್ಮಕ ನಿರ್ಧಾರಗಳು ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರವನ್ನು ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟಿಗೆ ಸಿಲುಕಿಸಿರುವುದನ್ನು ಸ್ಮರಿಸಬಹುದಾಗಿದೆ.

ರಾಜಪಕ್ಸ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ನವೆಂಬರ್ 14 ಮತ್ತು 16ರಂದು ಅವರ ವಿರುದ್ಧ ಮಂಡಿಸಲಾದ ಎರಡು ಅವಿಶ್ವಾಸ ನಿರ್ಣಯಗಳಲ್ಲೂ ಅವರು ಸೋತಿದ್ದಾರೆ. ಆದಾಗ್ಯೂ, ಅಧಿಕಾರದಿಂದ ಕೆಳಗಿಳಿಯಲು ಅವರು ನಿರಾಕರಿಸಿದ್ದರು.

ಒಳಗೆ ಬಾಕ್ಸ್

ಇಂದು ಪ್ರಧಾನಿಯಾಗಿ ವಿಕ್ರಮೆಸಿಂಘೆ ಅಧಿಕಾರ ಸ್ವೀಕಾರ

ಅಕ್ಟೋಬರ್ 26ರಂದು ಪ್ರಧಾನಿ ಹುದ್ದೆಯಿಂದ ವಜಾಗೊಂಡಿದ್ದ ರನಿಲ್ ವಿಕ್ರಮೆಸಿಂಘೆ ನಾಳೆ (ರವಿವಾರ) ಮತ್ತೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ವಿಕ್ರಮೆಸಿಂಘೆಯನ್ನು ಪ್ರಧಾನಿಯಾಗಿ ಮರು ನೇಮಿಸಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಒಪ್ಪಿಕೊಂಡಿದ್ದಾರೆ ಎಂದು ವಿಕ್ರಮೆಸಿಂಘೆಯ ಪಕ್ಷ ಯುನೈಟೆಡ್ ನ್ಯಾಶನಲ್ ಪಾರ್ಟಿ ಶನಿವಾರ ತಿಳಿಸಿದೆ.

ಶುಕ್ರವಾರ ಅವರೊಂದಿಗೆ ಫೋನ್‌ನಲ್ಲಿ ಚರ್ಚಿಸಿದ ಬಳಿಕ ಈ ಪ್ರಸ್ತಾಪಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಕಿಲ ವಿರಾಜಿ ಕರಿಯವಾಸಂ ತಿಳಿಸಿದರು.

‘‘ನಮ್ಮ ನಾಯಕನಿಗೆ ನಾಳೆ ಬೆಳಿಗ್ಗೆ ಪ್ರಮಾಣವಚನ ಬೋಧಿಸಲಾಗುವುದು ಎಂಬ ಸಂದೇಶವನ್ನು ಅಧ್ಯಕ್ಷರ ಕಾರ್ಯಾಲಯ ನಮಗೆ ರವಾನಿಸಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News