ನಮಗೆ ಸಿಎಜಿ ವರದಿ ಬಂದೇ ಇಲ್ಲ: ಪಿಎಸಿ ಅಧ್ಯಕ್ಷ ಖರ್ಗೆ

Update: 2018-12-15 07:01 GMT

ಹೊಸದಿಲ್ಲಿ, ಡಿ.15: ಸುಪ್ರೀಂ ಕೋರ್ಟ್ ಶುಕ್ರವಾರ ರಫೇಲ್ ಒಪ್ಪಂದದ ಕುರಿತಾದ ತನಿಖೆ ಕೋರಿ ಸಲ್ಲಿಸಲಾದ ಅಪೀಲುಗಳನ್ನು ತಿರಸ್ಕರಿಸಿ ನೀಡಿದ್ದ ತನ್ನ 29 ಪುಟಗಳ ವರದಿಯಲ್ಲಿ ರಫೇಲ್ ದರ ವಿವರಗಳನ್ನು ಸಿಎಜಿ ಜತೆ ಹಂಚಿರುವ ಬಗ್ಗೆ ಹಾಗೂ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ (ಪಿಎಸಿ) ನೀಡಿರುವ ಬಗ್ಗೆ ಹೇಳಿದೆ. ಆದರೆ ಪಿಎಸಿ ಅಧ್ಯಕ್ಷರಾಗಿರುವ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮಗೆ ಅಂತಹ ಯಾವುದೇ ವರದಿ ಬಂದಿಲ್ಲ ಹಾಗೂ ``ಸಿಎಜಿಗೂ ಅದರ ಬಗ್ಗೆ ತಿಳಿದಿಲ್ಲ,'' ಎಂದಿದ್ದಾರೆ.

ಈ ಕುರಿತಂತೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಲ್ಲಿ ಕೇಳಿದಾಗ ``ವಿವಿಧ ಪ್ರಕ್ರಿಯೆಗಳ ವಿವರಗಳು ಅಥವಾ ನೀಡಲಾಗಿರುವ ಸೂಚನೆಯ ಕುರಿತಂತೆ ತೀರ್ಪಿನಲ್ಲಿರುವ ಅಂಶಗಳು ನಾವು ಪ್ರತಿಕ್ರಿಯಿಸಬೇಕಾದ ವಿಚಾರವಲ್ಲ ಎಂದು ನನಗನಿಸುತ್ತದೆ. ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕಿದ್ದರೆ ವಕೀಲರು ಅದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ,'' ಎಂದಿದ್ದಾರೆ.

ಇಪ್ಪತ್ತೈದು ಪುಟಗಳ ತೀರ್ಪಿನ 31ನೇ ಪುಟದಲ್ಲಿ ಹೀಗೆ ಬರೆಯಲಾಗಿದೆ: “ನಮ್ಮ ಮುಂದಿರಿಸಲಾದ ದಾಖಲೆಗಳ ಪ್ರಕಾರ ಸರಕಾರವು ವಿಮಾನದ ಮೂಲ ದರಗಳ ಹೊರತಾಗಿ ಇತರ ದರ ವಿವರಗಳನ್ನು, ಅವುಗಳು ರಾಷ್ಟ್ರೀಯ ಭದ್ರತೆಗೆ ಅಪಾಯವೊಡ್ಡಬಹುದೆಂಬ ನೆಲೆಯಲ್ಲಿ ಅವುಗಳ ಸೂಕ್ಷ್ಮತೆಯ ಆಧಾರದಲ್ಲಿ ಅವುಗಳನ್ನು ಸಂಸತ್ತಿಗೂ ತಿಳಿಸಿಲ್ಲ. ಆದರೆ ದರ ವಿವರಗಳ ಬಗ್ಗೆ ಸಿಎಜಿಗೆ ಹೇಳಲಾಗಿದೆ ಹಾಗೂ ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸಿದೆ. ವರದಿಯ ಸಣ್ಣ ಅಂಶವನ್ನು ಸಂಸತ್ತಿನ ಹಾಗೂ ಸಾರ್ವಜನಿಕರ ಮುಂದಿದೆ'' ಎಂದು ಹೇಳಿದೆ.

``ಸಿಎಜಿಯ ವರದಿಯಿಲ್ಲ, ಇಂತಹ ವರದಿಯ ಬಗ್ಗೆ ನನಗೆ ತಿಳಿದಿಲ್ಲ ಹಾಗೂ ಸಿಎಜಿಗೂ ಏನೂ ಗೊತ್ತಿಲ್ಲ,' ಎಂದು ಖರ್ಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

``ಪಿಎಸಿ ಸಭೆಯಿದ್ದುದರಿಂದ ಉಪ ಸಿಎಜಿ ಬಳಿ ಇದು ಹೇಗೆ ಬಂತು?, ನನ್ನ ಸಹಿಯನ್ನು ಯಾರಾದರೂ ಫೋರ್ಜರಿ ಮಾಡಿದ್ದಾರೆಯೇ ಎಂದು ಕೇಳಿದೆ. ಆದರೆ ಸಿಎಜಿ ಬಳಿ ಅದಿಲ್ಲದೇ ಇರುವಾಗ ಅದು ಪಿಎಸಿ ಬರುವ ಪ್ರಶ್ನೆಯೇ  ಇಲ್ಲ, ಸಿಎಜಿ ವರದಿ ಪಿಎಸಿ ಬಳಿ  ಬಂದಾಗ ಅದನ್ನು ಅಡಗಿಸಿಡುವ ಪ್ರಶ್ನೆಯೇ ಇಲ್ಲ, ಅದನ್ನು ಸಂಸತ್ತಿನ ಮುಂದಿಡಬೇಕು'' ಎಂದು ಖರ್ಗೆ ಹೇಳಿದರು.

``ವರದಿಯೊಂದು ಸಂಸತ್ತಿನ ಮುಂದೆ ಬರುವ ತನಕ ಅದರ ಬಗ್ಗೆ ಯಾರಿಗೂ ಮಾತನಾಡುವ ಹಾಗಿಲ್ಲ, ಇದು ಸುಳ್ಳು, ಪಿಎಸಿಯನ್ನು ಅನಗತ್ಯವಾಗಿ ಎಳೆದು ತರಲಾಗಿದೆ'' ಎಂದರು.

`ತಮಗೂ ಈ ವಿಚಾರ ಅರ್ಥವಾಗುತ್ತಿಲ್ಲ'' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ``ಬೇರೆಲ್ಲಿಯಾದರೂ ಬೇರೆ ಪಿಎಸಿ ಇದೆಯೇ ಅಥವಾ ಫ್ರಾನ್ಸಿನಲ್ಲಿದೆಯೇ?,'' ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News