ವಿಜಯಪುರದ ಬರಕ್ಕೆ ಬೆದರಿ ಗುಳೆ ಹೋದ ಕೂಲಿ ಕುಟುಂಬದ ಯುವಕ ಇದೀಗ ಐಪಿಎಸ್ ಅಧಿಕಾರಿ

Update: 2018-12-15 12:46 GMT

ವಿಜಯಪುರ, ಡಿ.15: ಸಾಮಾನ್ಯವಾಗಿ ಗುಳೆ ಹೋಗುವ ಸಂಕಷ್ಟಕ್ಕೆ ಸಿಲುಕುವ ಕುಟುಂಬಗಳು ಬದುಕು ಸಾಗಿಸಲು ಒದ್ದಾಡುತ್ತವೆ. ಆದರೆ ಬರದಿಂದ ತತ್ತರಿಸಿದ ವಿಜಯಪುರದಿಂದ 25 ವರ್ಷಗಳ ಹಿಂದೆ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ತಾಂಡಾದ ಬಂಜಾರ ಸಮುದಾಯದ ಕೂಲಿ ಕುಟುಂಬದ ಯುವಕನೋರ್ವ ಇದಕ್ಕೆ ಅಪವಾದ ಎಂಬಂತೆ ಐಪಿಎಸ್ ಉತ್ತೀರ್ಣನಾಗಿ ಭೇಷ್ ಎನಿಸಿಕೊಂಡಿದ್ದಾನೆ.

 ಈ ಸಾಧಕನ ಹೆಸರು ಕಿರಣ್ ಚೌಹಾಣ್. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಂಡಾದವರು. ಒಂದು ಕಾಲದಲ್ಲಿ ವಿಜಯಪುರದ ಭೀಕರ ಬರಕ್ಕೆ ಬೇಸತ್ತು ಕಿರಣ್ ಚೌಹಾಣ್ ಕುಟುಂಬ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡಗೆ ಗುಳೆ ಹೋಗಿತ್ತು. ಬರದಿಂದ ತತ್ತರಿಸುವ ವಿಜಯಪುರ ಜಿಲ್ಲೆಯಿಂದ ತಾಂಡಾ ಜನರು (ಇಲ್ಲಿನ ಬಂಜಾರ ಸಮುದಾಯದವರು) ಕುಟುಂಬ ಸಮೇತ ಮಹಾರಾಷ್ಟ್ರಾ, ಗೋವಾ ರಾಜ್ಯಗಳಿಗೆ ಗುಳೆ ಹೋಗುವುದು ಸಾಮಾನ್ಯ. ಈ ರೀತಿ ಗುಳೆ ಹೋಗುವವರ ಮಕ್ಕಳು ಸಾಧಾರಣವಾಗಿ ಅನಕ್ಷರಸ್ಥರಾಗಿಯೇ ಉಳಿಯುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ ಕಿರಣ್ ಚೌಹಾಣ್ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಬರಗಾಲ ತಾಂಡವವಾಡುತ್ತಿದೆ. ಇಂತಹ ಸಂಕಷ್ಟಕ್ಕೆ ಕಿರಣ್ ಕುಟುಂಬವೂ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ 25 ವರ್ಷಗಳ ಹಿಂದೆ ಕಿರಣ್ ತಂದೆ ಗಂಗಾರಾಮ್ ಚೌಹಾಣ್, ತಾಯಿ ಶಾಂತಬಾಯಿ ತನ್ನ ಕುಟುಂಬ ಸಮೇತ ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡಗೆ ಗುಳೆ ಹೋಗಿದ್ದರು. ಅಲ್ಲಿಯೇ ಕಿರಣ್ ಜನಿಸಿದ್ದರು. ಸಂಕಷ್ಟದ ಬದುಕಿನಲ್ಲೂ ಗಂಗಾರಾಮ್ ತನ್ನ ಪುತ್ರ ಕಿರಣ್‌ಗೆ ಶಿಕ್ಷಣ ನೀಡುವುದನ್ನು ಮಾತ್ರ ಅವರು ಮರೆಯಲಿಲ್ಲ.

ಕೊಲ್ಲಾಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಶಾಲಾ ಶಿಕ್ಷಣ ಮುಗಿಸಿದ ಕಿರಣ್ ಬಳಿಕ ಚಂದಗಡ ಪಟ್ಟಣದ ಎನ್.ಬಿ.ಪಾಟೀಲ್ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿ ಮಾಡಿದರು. ಈ ಹಂತದಲ್ಲೇ ಐ.ಪಿ.ಎಸ್. ಅಧಿಕಾರಿಯಾಗುವ ಕನಸು ಕಂಡಿದ್ದ ಕಿರಣ್ ಕಡು ಬಡತನದಲ್ಲಿ ತಂದೆ-ತಾಯಿಯ ಜೊತೆಗೆ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದರು. ಪುಣೆಯ ಎ.ಐ.ಎಸ್.ಎಸ್. ಕಾಲೇಜ ಆಫ್ ಇಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಪದವಿ ಶಿಕ್ಷಣ ಮುಗಿಸಿದರು. ಬಳಿಕ ಪುಣೆಯಲ್ಲಿ ಪ್ರವೀಣ ಚೌಹಾಣ್ ಎಂಬವರ ಮಾರ್ಗದರ್ಶನದಲ್ಲಿ ಯುಪಿಎಸ್‌ಸ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡರು. ಇದಕ್ಕಾಗಿ ದಿನದ 10 ಗಂಟೆಗಳನ್ನು ಓದುವುದಕ್ಕೆಂದೇ ಮೀಸಲಿಟ್ಟಿದ್ದರು. ಮೊದಲ ಎರಡು ಪ್ರಯತ್ನಗಳಲ್ಲಿ ಕಿರಣ್ ಉತ್ತೀರ್ಣರಾಗಲಿಲ್ಲ. ಆದರೆ 3ನೇ ಪ್ರಯತ್ನದಲ್ಲಿ ಅಂದರೆ 2017ನೇ ಸಾಲಿನಲ್ಲಿ ಯುಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 779 ರಾಂಕ್‌ನೊಂದಿಗೆ ಅವರು ಉತ್ತೀರ್ಣರಾಗಿದ್ದಾರೆ.

ಇಂದಿನಿಂದ (ಡಿ.15ರಿಂದ) ತರಬೇತಿಗಾಗಿ ಅವರು ಹೈದರಾಬಾದ್ ನ್ಯಾಶನಲ್ ಪೊಲೀಸ್ ಅಕಾಡಮಿಗೆ ತೆರಳಿದ್ದಾರೆ.

ಬರದಿಂದ ಬೇಸತ್ತು ತಾಂಡಾದಿಂದ ಹೊಟ್ಟೆ ಹೊರೆಯಲು ಗುಳೆ ಹೋಗಿದ್ದ ಯುವಕ ಇಂದು ಐಪಿಎಸ್ ಅಧಿಕಾರಿಯಾಗುತ್ತಿರುವುದು ತಾಂಡಾ ಜನರಲ್ಲಿ ಖುಷಿ ಮೂಡಿಸಿದೆ. ಹೀಗಾಗಿ ಕಿರಣ್ ರನ್ನು ತಾಂಡಾದ ಜನರು ಸನ್ಮಾನಿಸಿ ಮೂಲಕ ಅಭಿನಂದಿಸಿದ್ದಾರೆ.



ಮಕ್ಕಳಿಗೆ ಶಿಕ್ಷಣ ಮುಖ್ಯ. ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಶಿಕ್ಷಣವು ಮಕ್ಕಳಿಗೆ ಒಳ್ಳೆಯ ನಾಗರಿಕರು ಹೇಗೆ ಅಗಬೇಕೆನ್ನುವುದನ್ನು ಕಲಿಸುತ್ತದೆ. ಬಂಜಾರ ಸಮಾಜದವರು ಗುಳೆ ಹೋಗುವುದನ್ನು ಬಿಟ್ಟು ಸ್ವಗ್ರಾಮದಲ್ಲೇ ಯಾವುದಾದರು ಉದ್ಯೋಗ ಕೈಗೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.

-ಕಿರಣ್ ಚೌಹಾಣ್


ಬಡ ಕುಟುಂಬದಲ್ಲಿ ಜನಿಸಿ ವಲಸೆ ಹೋಗಿದ್ದ ಯುವಕ ಇಂದು ಐಪಿಎಸ್ ಉತ್ತೀರ್ಣನಾಗುವ ಮೂಲಕ ನಮ್ಮ ಸಮಾಜಕ್ಕೆ ಕೀರ್ತಿ ತಂದಿದ್ದಾನೆ. ನಮ್ಮ ಸಮಾಜದವರು ಈಗಲಾದರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಗುಳೆ ಹೋದರು ಮಕ್ಕಳ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಬೇಕು.
-ಜುಗನು ಮಹಾರಾಜ

 

Writer - ವರದಿ: ಆಸಿಫ್ ಹುಸೈನ್

contributor

Editor - ವರದಿ: ಆಸಿಫ್ ಹುಸೈನ್

contributor

Similar News