ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಸ್ಮಾರ್ಟ್ ನಗರ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ: ಪರಮೇಶ್ವರ್

Update: 2018-12-15 18:25 GMT

ತುಮಕೂರು,ಡಿ.15: ಅನುದಾನ ಬಳಕೆ ಮಾಡಬೇಕೆಂಬ ಕಾರಣಕ್ಕೆ ಅನಾವಶ್ಯಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ, ನಗರ ಜನರಿಗೆ ಶುದ್ಧ ಕುಡಿಯುವ ನೀರು, ಒಳ್ಳೆಯ ರಸ್ತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಸ್ಮಾರ್ಟ್ ನಗರವನ್ನು ರೂಪಿಸುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲಿರುವ ಗುರುತರ ಜವಾಬ್ದಾರಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ಸಂಜೆ ತುಮಕೂರು ವಿವಿ ಆವರಣದಲ್ಲಿ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಆಯೋಜಿಸಿದ್ದ 195 ಕೋಟಿ ರೂಗಳ ಮೊದಲ ಹಂತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತುಮಕೂರು ಮಹಾನಗರ ಪಾಲಿಕೆಯಾಗಿ ಅಭಿವೃದ್ಧಿ ಹೊಂದಿದ್ದರೂ, ಇಲ್ಲಿನ ರಸ್ತೆ, ಚರಂಡಿ ವ್ಯವಸ್ಥಿತವಾಗಿಲ್ಲ. ಮುಖ್ಯ ರಸ್ತೆಯೇ ಹಳ್ಳಿ ರಸ್ತೆಯಂತಿದೆ. ಹಾಗಾಗಿ ಬೆಂಗಳೂರಿನ ಎಲ್ಲ ಒತ್ತಡಗಳನ್ನು ಬಾಚಿಕೊಳ್ಳುವ ಮಟ್ಟಿಗೆ ತುಮಕೂರು ನಗರವನ್ನು ಅಭಿವೃದ್ಧಿ ಪಡಿಸುವ ಹೊಣೆ ನಮ್ಮದು. ತ್ವರಿತವಾಗಿ ಕಾಮಗಾರಿಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಗುಣಮಟ್ಟದ ಕಾರ್ಯವನ್ನು ಮಾಡಬೇಕಿದೆ ಎಂದರು.

ಸ್ಮಾರ್ಟಿಸಿಟಿ ಯೋಜನೆ ಯುಪಿಎ ಸರಕಾರದ ಕನಸಿನ ಕೂಸು. ಅಂದಿನ ಪ್ರಧಾನಿ ಡಾ.ಮನಮೋಹನ್‍ ಸಿಂಗ್ ನಗರಗಳ ಜೊತೆ ಹಳ್ಳಿಗಳನ್ನು ಸ್ಮಾರ್ಟ್ ಹಳ್ಳಿಗಳಾಗಿ ರೂಪಿಸುವ ಕನಸು ಹೊತ್ತು ಯೋಜನೆ ರೂಪಿಸಿದ್ದರು. ನರೇಂದ್ರ ಮೋದಿ ಅವರು ಅದನ್ನು ಸ್ಮಾರ್ಟ್‍ಸಿಟಿ ಎಂದು ಕರೆದರು. ರಾಜ್ಯ ಸರಕಾರದ ಜವಾಬ್ದಾರಿಯೂ ಇರಬೇಕೆಂಬ ಕಾರಣದಿಂದ ಶೇ.50:50 ರ ಅನುಪಾತದಲ್ಲಿ ಹಣ ಹೂಡಿಕೆಗೆ ತೀರ್ಮಾನಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಹಣ ತುಮಕೂರು ನಗರಕ್ಕೆ ಹರಿದು ಬರಲಿದ್ದು, ಜನರಿಗೆ ಶುದ್ಧ ಕುಡಿಯುವ ನೀರು, ತಡೆಯಿಲ್ಲದ ವಿದ್ಯುತ್, ಚರಂಡಿ, ಸಮರ್ಪಕ ಘನತ್ಯಾಜ್ಯ ವಿಲೇವಾರಿ ಇವುಗಳು ನಮ್ಮ ಮುಂದಿರುವ ಬಹುಮುಖ್ಯ ಅಭಿವೃದ್ಧಿ ಕಾಮಗಾರಿಗಳಾಗಿದ್ದು, ಇದು ಜನರ ಕಣ್ಣಿಗೆ ಕಾಣುವಂತೆ ಮಾಡಬೇಕಿದೆ ಎಂದು ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸ್ಪಷ್ಠ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಮೇಕಿಂಗ್ ಸ್ಮಾರ್ಟ್‍ಸಿಟಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ತುಮಕೂರು ನಗರದ ಬಹಳ ವರ್ಷಗಳ ಕನಸು ನನಸಾಗುತ್ತಿದೆ. ಪ್ರವಾಸೋದ್ಯಮವನ್ನು ಪ್ರಮುಖ ಉದ್ದೇಶವನ್ನಾಗಿಟ್ಟುಕೊಂಡು ಸ್ಮಾರ್ಟ್‍ಸಿಟಿ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ 2-3 ವರ್ಷಗಳಲ್ಲಿ ಇಡೀ ನಗರದ ಚಿತ್ರಣವೇ ಬದಲಾಗಲಿದ್ದು, ಅಭಿವೃದ್ಧಿ ಜೊತೆಗೆ ಸಂಪನ್ಮೂಲ ಕ್ರೋಢಿಕರಣಕ್ಕೂ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಸ್ಮಾರ್ಟ್‍ಸಿಟಿ ಅಂದರೆ ಚರಂಡಿ, ರಸ್ತೆ ಬದಲಾದರೆ ಸಾಲದು, ಜನರ ಮನಸ್ಥಿತಿಯೂ ಬದಲಾಗಬೇಕು. ಶುದ್ಧ ಕುಡಿಯುವ ನೀರು, ಯುಜಿಡಿ ಸಂಪರ್ಕ, ರಸ್ತೆ ಕೇಳುವ ನಾವು ಅದಕ್ಕೆ ತಕ್ಕಂತೆ ತೆರಿಗೆ ಹಣವನ್ನು ಕಟ್ಟಬೇಕು. ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಿರುವ ಮನೆಗಳನ್ನು ನಾವೇ ತೆರವುಗೊಳಿಸುವ ಮೂಲಕ ಸ್ಮಾರ್ಟ್‍ಸಿಟಿಗೆ ಸಹಕಾರ ನೀಡಬೇಕಿದೆ. ತೆರಿಗೆ ಕಳ್ಳರಲ್ಲಿ ಬಡವರಿಗಿಂತ ಶ್ರೀಮಂತರ ಸಂಖ್ಯೆಯೇ ಹೆಚ್ಚಿದೆ. ಆರ್ಥಿಕ ಸಂಪನ್ಮೂಲ ಕ್ರೋಢಿಕರಣವಾಗದೇ ಅಭಿವೃದ್ಧಿ ಮಾಡಲು ಆಗುವುದಿಲ್ಲ. ಅಭಿವೃದ್ಧಿ ಮಾಡದೇ ಇದ್ದರೆ ಹೂಡಿಕೆದಾರರು ಬರುವುದಿಲ್ಲ ಎಂದ ಅವರು, ಹೂಡಿಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏಕಗವಾಕ್ಷಿ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಹೂಡಿಕೆದಾರರಿಗೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಒಂದೇ ತಿಂಗಳಲ್ಲಿ ದೊರಕುವಂತೆ ಮಾಡಲಾಗುವುದು ಎಂದು ಹೇಳಿದರು.

ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದ ಮೊಬೈಲ್ ಟವರ್ ಬಗ್ಗೆ ಹೊಸ ನಿಯಮ ರೂಪಿಸಲಾಗಿದೆ. ಅದೇ ರೀತಿ ಅಕ್ರಮ ಸಕ್ರಮ ಸಂದರ್ಭದಲ್ಲಿಯೂ ಆಸ್ತಿ ಮಾಲಕರಿಗೆ ಅಷ್ಟೇ ಅಲ್ಲದೇ ಅನುಮತಿ ನೀಡಿದ ಅಧಿಕಾರಿಯ ಮೇಲೆಯೂ ಶಿಸ್ತು ಕ್ರಮ ಜರುಗಿಸುವ ಕಾನೂನು ರೂಪಿಸಲಾಗಿದೆ ಎಂದು ತಿಳಿಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ತುಮಕೂರು ಜಿಲ್ಲೆ ವಿಶ್ವಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದ್ದು, ಇಸ್ರೋ ಉಪಕರಣ ತಯಾರಿಕ ಘಟಕವನ್ನು ಶುರುಮಾಡಲಿದೆ. ಕೆಲವೇ ತಿಂಗಳಲ್ಲಿ ಹೆಚ್‍ಎಎಲ್ ಹೆಲಿಕಾಪ್ಟರ್ ತಯಾರಿಕೆಯೂ ಪ್ರಾರಂಭಗೊಳ್ಳಲಿದೆ. ಇದರಿಂದಾಗಿ ಉದ್ಯೋಗಾವಕಾಶ ಸೃಷ್ಠಿಯಾಗಲಿದೆ ಎಂದು ತಿಳಿಸಿದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, ನಗರದ ನೀರಿನ ಬವಣೆ ನೀಗಿಸಲು ಬುಗುಡನಹಳ್ಳಿ ಅಂತೆ ಮರಳೂರು ಕೆರೆಗೆ ನೀರು ತುಂಬಿಸುವ ಮೂಲಕ 24*7 ನೀರು ಪೂರೈಕೆ ಮಾಡುವ ಯೋಜನೆಯೂ ಪ್ರಾರಂಭಗೊಳ್ಳುತ್ತಿದ್ದು, ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಮುಂದಾಲೋಚನೆ ವಹಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಡಾ.ರಾಕೇಶ್‍ ಕುಮಾರ್, ಮಾಜಿ ಶಾಸಕ ರಫೀಕ್ ಅಹಮದ್, ಎಸ್ಪಿ ದಿವ್ಯಾಗೋಪಿನಾಥ್, ಜಿ.ಪಂ.ಸಿಇಒ ಅನೀಸ್ ಕಣ್ಮಣಿ ಜಾಯ್, ಸ್ಮಾರ್ಟ್‍ಸಿಟಿ ಸಿಇಒ ರಂಗಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಸೇರಿದಂತೆ ಇತರರಿದ್ದರು.

ತುಮಕೂರು ನಗರದ ವರ್ತುಲ ರಸ್ತೆ, ಇಂಟಿಗ್ರೆಟೆಡ್ ಸಿಟಿ ಮಾನ್ಯೆಜ್‍ಮೆಂಟ್ ಅಂಡ್ ಕಂಟ್ರೋಲ್ ಸೆಂಟರ್ ಹಾಗೂ ಪ್ಯಾನ್ ಸಿಟಿ ಯೋಜನೆಗಳು ಸೇರಿದಂತೆ ಒಟ್ಟು 195 ಕೋಟಿ ರೂಗಳ ಮೊದಲ ಹಂತದ ಸ್ಮಾರ್ಟಸಿಟಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News