ಕಳಸ: ಜಿಲ್ಲಾಡಳಿತದ ಜನಸಂಪರ್ಕ ಸಭೆ; ಪ್ರತಿಧ್ವನಿಸಿದ ಮಹಾವೀರ ರಸ್ತೆ ಅವ್ಯವಸ್ಥೆ

Update: 2018-12-15 19:01 GMT

ಚಿಕ್ಕಮಗಳೂರು, ಡಿ.15: ಮೂಡಿಗೆರೆ ತಾಲೂಕು ಕಳಸ ಪಟ್ಟಣದ ಮಹಾವೀರ ರಸ್ತೆ ಹದಗೆಟ್ಟು ಅನೇಕ ವರ್ಷಗಳು ಕಳೆದಿವೆ. ರಸ್ತೆಯಲ್ಲಿನ ಧೂಳು ಕುಡಿದು ಸಾಕಾಗಿದೆ, ಧೂಳು ಸೇವಿಸಿ ರಸ್ತೆ ಬದಿಯ ವ್ಯಾಪಾರಿಗಳು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ, ದುರಸ್ತಿ ನೆಪದಲ್ಲಿ ವಾಹನ, ಸಾರ್ವಜನಿಕರ ಸುಗಮ ಸಂಆರಕ್ಕೆ ನಿರ್ಬಂಧ ಹೇರಲಾಗಿದೆ, ಜನ ಸಂಚಾರವಿಲ್ಲದೆ ವ್ಯಾಪಾರ ಇಲ್ಲದಂತಾಗಿದೆ. ಶೀಘ್ರ ದುರಸ್ತಿ ಮಾಡಿಕೊಡಿ ಎಂದು ಸ್ಥಳೀಯ ಗ್ರಾಪಂ, ತಾಪಂ, ಜಿಪಂ ಸದಸ್ಯರಲ್ಲಿ ಮನವಿ ಮಾಡಿ ಮಾಡಿ ಬೇಸತ್ತಿದ್ದೇವೆ. ಈಗಲಾದರೂ ನಮ್ಮ ಗೋಲು ಅರ್ಥಮಾಡಿಕೊಂಡು ಸಮಸ್ಯೆಗೆ ಶೀಘ್ರ ಸ್ಪಂದಿಸಿ. ಇಲ್ಲವಾದರೆ ಖಾಸಗಿಯವರಿಗೆ ಈ ರಸ್ತೆಯನ್ನು ಬಿಟ್ಟುಕೊಡಿ, ನಾವೇ ಹಣ ಸಂಗ್ರಹಿಸಿ ದುರಸ್ತಿ ಮಾಡಿಕೊಳ್ಳುತ್ತೇವೆ....ಹೀಗೆಂದು ನೂರಾರು ಸಾರ್ವಜನಿಕರು ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಬಳಿ ಪರಿಪರಿಯಾಗಿ ಅಂಗಲಾಚಿದ ದೃಶ್ಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಕಂಡು ಬಂತು. 

ಪಟ್ಟಣದ ಕಲಶೇಶ್ವರ ಸಭಾ ಭವನದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಳಸ ಪಟ್ಟಣದ ಮಹಾವೀರ ರಸ್ತೆಯ ನೂರಾರು ನಿವಾಸಿಗಳು, ವ್ಯಾಪಾರಿಗಳು ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಬಳಿ ಅನೇಕ ವರ್ಷಗಳಿಂದ ದುರಸ್ತಿ ಕಾಣದೇ ಹದಗೆಟ್ಟ ರಸ್ತೆ ಸರಿಪಡಿಸಲು ಆಗ್ರಹಿಸಿದರು. 

ಕಳೆದ ಹದಿನೈದು ವರ್ಷಗಳಿಂದ ಮಾಡಬಾರದ ಪ್ರತಿಭಟನೆಗಳನ್ನು ಮಾಡಿಯಾಯಿತು. ಮನವಿಗಳನ್ನು ಸಂಬಂಧಿಸಿದ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಮನವಿ ನೀಡಿ ಹೈರಾಣಾಗಿದ್ದೇವೆ. ಆದರೆ ಇದುವರೆಗೂ ರಸ್ತೆ ಮಾತ್ರ ದುರಸ್ತಿಯಾಗಲಿಲ್ಲ. ಸಾರ್ವಜನಿಕರ ಒತ್ತಡಕ್ಕೆ ಮಣಿದು ಅರ್ಧ ರಸ್ತೆಯನ್ನು ಮಾತ್ರ ದುರಸ್ತಿ ಮಾಡಲಾಗಿದೆ. ಹತ್ತಾರು ವರ್ಷಗಳಿಂದ ರಸ್ತೆಯ ದೂಳು ಸೇವಿಸುತ್ತಾ ವಿವಿಧ ರೋಗಗಳಿಗೆ ತುತ್ತಾಗಿದ್ದೇವೆ, ವ್ಯಾಪಾರವಿಲ್ಲದೇ ಅತಂತ್ರರಾಗಿದ್ದೇವೆ. ನೀವು ರಸ್ತೆಯನ್ನು ದುರಸ್ತಿ ಮಾಡಿಕೊಡಿ, ಇಲ್ಲವೇ ಖಾಸಗಿಯವರಿಗೆ ಈ ರಸ್ತೆಯನ್ನು ಸರಕಾರವೇ ದಾನ ಮಾಡಲಿ. ಚಂದಾ ಎತ್ತಿಯಾದರೂ ದುರಸ್ತಿ ಮಾಡಿಕೊಳ್ಳುತ್ತೇವೆ ಎಂದು ಸಾರ್ವಜನಿಕರು ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಸತ್ಯಭಾಮ, ಈ ರಸ್ತೆ ಗ್ರಾಪಂಗೆ ಸೇರಿರುವುದರಿಂದ ಗ್ರಾಮ ಪಂಚಾಯತ್‍ನಲ್ಲಿ ಬಗೆಹರಿಸಿಕೊಳ್ಳಬೇಕು ಎಂದಾಗ, ಈ ರಸ್ತೆ ದುರಸ್ತಿ ಮಾಡಲು ಗ್ರಾಪಂ ನೀದ ಸಾಧ್ಯವಿಲ್ಲ. ಈ ಕಾರಣಕ್ಕೆ ಇಲ್ಲಿಗೆ ಬಂದಿದ್ದೇವೆ. ಇಂತಹ ಹಾರಿಕೆಯ ಉತ್ತರ ಜಿಲ್ಲಾಡಳಿತ ನೀಡಬಾರದು. ನೀವು ಒಂದು ಬಾರಿ ಆ ರಸ್ತೆಯಲ್ಲಿ ಸಂಚರಿಸಿ ನೋಡಿ, ಆಗ ಸಮಸ್ಯೆ ಅರ್ಥವಾಗುತ್ತದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯೆ ಪ್ರವೇಶಿಸಿದ ಮೂಡಿಗೆರೆ ಕ್ಷೇತ್ರ ಶಾಸಕ ಕುಮಾರಸ್ವಾಮಿ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಪ್ರಭಾಕರ್ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಿಕೊಡುತ್ತೇವೆಂದು ಸ್ಥಳದಲ್ಲೆ ಜನರಿಗೆ ಭರವಸೆ ನೀಡಿದ್ದರಿಂದ ಧರಣಿ ನಡೆಸುತ್ತಿದ್ದ ವ್ಯಾಪಾರಿಗಳು, ಸಾರ್ವಜನಿಕರು ಶಾಂತರಾದರು.

ಬಳಿಕ ಜಿಲ್ಲಾಧಿಕಾರಿ ಶ್ರೀರಂಗಯ್ಯ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂದಿಸಿದ ಯಾವುದೇ ಅರ್ಜಿಗಳು ಬಂದರೂ ಕಾನೂನಿನ ನಿಯಮದಲ್ಲಿ ಆಗುವಂತಹ ಕೆಲಸಗಳನ್ನು ಒಂದು ತಿಂಗಳಲ್ಲಿ ಮಾಡಿಕೊಡುತ್ತೇವೆ. ಈ ಸಂಬಂಧ ಅರ್ಜಿ ಸಲ್ಲಿಸಿದ 45 ದಿನದೊಳಗೆ ಅದಕ್ಕೆ ಹಿಂಬರಹವನ್ನು ಕೊಡುತ್ತೇವೆ. ಸಾಗುವಳಿ ಜಮೀನಿನ ಮಂಜೂರಾತಿಗೆ ಫಾರಂ ನಂ.57ರಲ್ಲಿ ಅರ್ಜಿಯನ್ನು ಸಲ್ಲಿಸಲು ಮಾರ್ಚ್ 31ರವರೆಗೆ ಕಾಲಾವಕಾಶವಿದೆ ಎಂದರು.

ಫಾರಂ ನಂ.57ರಲ್ಲಿ ಪ್ರತೀ ಹೋಬಳಿಯ ನಾಡ ಕಚೇರಿಯಲ್ಲೂ ಅರ್ಜಿಗಳನ್ನು ಸಲ್ಲಿಸಬಹುದು. ಸ.ನಂ.85ರಲ್ಲಿ ಮಂಜೂರಾದ 10 ಎಕರೆ ಭೂಮಿಯಲ್ಲಿ ಕುದುರೆಮುಖ ಲೇಬರ್ ಕಾಲನಿ ನಿವಾಸಿಗಳಿಗೂ ಕಳಸ ನಿವಾಸಿಗಳಿಗೂ ಸಮಾನವಾಗಿ ನಿವೇಶನ ಹಂಚಿಕೆ ಮಾಡಬೇಕು. ಹೊರನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಪಡಿತರ ಚೀಟಿಯಲ್ಲಿ ಅವ್ಯವಹಾರ ಆಗಿದೆ ಅನ್ನುವ ದೂರಿಗೆ ಈಗಾಗಲೇ ಈ ವಿಚಾರದ ಬಗ್ಗೆ ತಪ್ಪಿತಸ್ಥರ ವಿರುದ್ಧತನಿಖೆಗೆ ಆದೇಶ ಮಾಡಿದ್ದೇನೆ. ಕಳಸಕ್ಕೆ ಪ್ರತೀ ಸೋಮವಾರ ಆಹಾರ ಇಲಾಖಾ ಅಧಿಕಾರಿ ಭೇಟಿ ನೀಡಿ ಕರ್ತವ್ಯ ನಿರ್ವಹಿಸಬೇಕೆಂದರು. 

94ಸಿ, ಬಗರ್ ಹುಕುಂ ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಲು ಸೂಚಿಸಿದ್ದೇನೆ. ಯಾವ ಯಾವ ಗ್ರಾಮ ಪಂ. ನಿಂದ ನಿವೇಶನಗಳ ಭೂಮಿಗೆ ಮನವಿ ಬಂದಿದೆಯೋ ಅದನ್ನು ಸರ್ವೇ ನಡೆಸಿ ನಿವೇಶನ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸರಕಾರಿ ಶಾಲೆಗಳಿಗೆ ಸಂಬಂಧಿಸಿದ ಕಂದಾಯ ಭೂಮಿಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮನವಿಯನ್ನು ನೀಡಬೇಕು. ದಾಖಲಾತಿ ಪರಿಶೀಲಿಸಿ ಒಂದು ವಾರದೊಳಗೆ ಖಾತೆ ಮಾಡಿಕೊಡಲು ಕ್ರಮ ತೆಗೆದುಕೊಳ್ಳುತ್ತೇನೆ. ಕಳಸ ನಾಡ ಕಚೇರಿಯಲ್ಲಿರುವ ಸಿಬ್ಬಂದಿ ಸಮಸ್ಯೆಯನ್ನು ಜ.1ರ ಒಳಗೆ ನೇಮಕಕ್ಕೆ ಅವಕಾಶ ಮಾಡಿಕೊಡುತ್ತೇನೆಂದರು. 

ಶ್ರೀಮಂತರ ಒತ್ತುವರಿಗೆ ಅವಕಾಶ ಮಾಡಿಕೊಡುವ ಅರಣ್ಯ ಇಲಾಖೆ, ಬಡವರು ಗುಡಿಸಲು ಹಾಕಿಕೊಂಡರೆ ಅದನ್ನು ಕಿತ್ತು ಹಾಕುತ್ತಾರೆ ಎನ್ನುವ ಗ್ರಾಮಸ್ಥರೊಬ್ಬರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಅಧಿಕಾರಿಗಳು ಎಲ್ಲರನ್ನು  ಸಮಾನವಾಗಿ ನೋಡಿಕೊಳ್ಳಬೇಕು. ತಾರತಮ್ಯ ನೀತಿ ಸಹಿಸುವುದಿಲ್ಲ. ಈ ಬಗ್ಗೆ ಊರುಗಳನ್ನು ತನಗೆ ನೀಡಿದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆಂದು ಉತ್ತರಿಸಿದರು.

ಸಭೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯಭಾಮ, ಜಿಪಂ ಸದಸ್ಯ ಕೆ.ಆರ್.ಪ್ರಭಾಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕುಮಾರ್, ತಾಪಂ ಅಧ್ಯಕ್ಷ ಕೆ.ಸಿ.ರಥನ್, ಸದಸ್ಯರಾದ ಮುಹಮ್ಮದ್ ರಫೀಕ್, ರಾಜೇಂದ್ರ ಪ್ರಸಾದ್, ವೇದಾವತಿ ಲಕ್ಷ್ಮಣ್,ಮೀನಾಕ್ಷಿ, ಮೂಡಿಗೆರೆ ತಹಶೀಲ್ದಾರ್ ಪದ್ಮನಾಭ ಶಾಸ್ತ್ರೀ, ಕಳಸ ಗ್ರಾಪಂ ಅಧ್ಯಕ್ಷೆ ರತೀ ರವೀಂದ್ರ, ಸಂಸೆ ಗ್ರಾಪಂ ಅಧ್ಯಕ್ಷ ಸನ್ಮತಿ, ಸಚಿತ್ರಾ, ಹೇಮಲತಾ, ಎಪಿಎಂಸಿ ಅಧ್ಯಕ್ಷ ಸಂತೋಷ್ ಹಿನಾರಿ ಮತ್ತಿತರರು ಉಪಸ್ಥಿತರಿದ್ದರು.

ರೈತರಿಂದ 8 ಲಕ್ಷದವರೆಗೆ ಹಣ ವಸೂಲಿ ಮಾಡಿ  ನಕಲಿ ಖಾತೆ, ಪಹಣಿಯನ್ನು ಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ಇದ್ದು, ಅದು ಸಿಂಧು ಆಗಲ್ಲ. ಇದರ ಬಗ್ಗೆ ನಾನು ತನಿಖೆ ನಡೆಸುತ್ತೇನೆ. ರೈತರು ಎಚ್ಚರ ವಹಿಸಿಕೊಳ್ಳಬೇಕು. ನಮ್ಮ ಗಮನಕ್ಕೆ ಬರದೆ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಪರ್ಯಾಯವಾಗಿ ಕುದುರೆಮುಖದಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯಕ್ಕೆ ಒಪ್ಪಿಸಲಾಗಿದೆ. ಕುದುರೆಮುಖದಲ್ಲಿನ ಅಲ್ಲಿರುವ ಟೌನ್ ಶಿಪ್ ಉಳಿಸಿಕೊಳ್ಳಬೇಕಾಗಿದೆ. ಅರಣ್ಯ ಇಲಾಖೆ ಬಡವರ ಮೇಲೆ ಗಧಾಪ್ರಹಾರ ಮಾಡಲು ಹೋಗಬಾರದು. ಹಂತ ಹಂತವಾಗಿ ಕಳಸ ಹೋಬಳಿಯ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡಿಯೇ ಮುಂದಿನ ವಿದಾನ ಸಭೆ ಚುನಾವಣೆಗೆ ಮತ ಕೇಳಲು ಬರುತ್ತೇನೆ.

- ಎಂ.ಪಿ.ಕುಮಾರಸ್ವಾಮಿ, ಶಾಸಕ


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News