ಮಾಜಿ ಸಚಿವ ಮುರುಗೇಶ್ ನಿರಾಣಿಯ ಸಕ್ಕರೆ ಕಾರ್ಖಾನೆಯಲ್ಲಿ ಸ್ಫೋಟ: 4 ಕಾರ್ಮಿಕರು ಮೃತ್ಯು

Update: 2018-12-16 15:38 GMT

ಬಾಗಲಕೋಟೆ/ಬೆಂಗಳೂರು, ಡಿ.16: ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಮಾಲಕತ್ವದ ಸಕ್ಕರೆ ಕಾರ್ಖಾನೆಯ ಸಂಸ್ಕರಣಾ ಘಟಕದಲ್ಲಿ ಸ್ಫೋಟ ಸಂಭವಿಸಿ, ನಾಲ್ಕು ಕಾರ್ಮಿಕರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮುಧೋಳ ತಾಲೂಕಿನ ಕುಳಲಿ ಗ್ರಾಮದ ನಾಗಪ್ಪ ಧರ್ಮಟ್ಟಿ(40), ಆಫ್ಜಲಪುರದ ಶರಣಪ್ಪ ತೋಟದ್(35), ನಾವಲಗಿ ಗ್ರಾಮದ ಜಗದೀಶ್ ಪಟ್ಟಣಶೆಟ್ಟಿ(33), ಸಪ್ಪಡ್ಲ ಗ್ರಾಮದ ಶಿವಾನಂದ ಹೊಸಮಠ(42) ಮೃತರು ಎಂದು ತಿಳಿದುಬಂದಿದೆ.

ರವಿವಾರ ಮಧ್ಯಾಹ್ನ ಮುಧೋಳ ವ್ಯಾಪ್ತಿಯ ಕುಳಲಿ ಗ್ರಾಮದ ನಿರಾಣಿ ಶುಗರ್ಸ್‌ನ ಮೊಲ್ಯಾಸಿಸ್ ಸಂಸ್ಕರಣಾ ಘಟಕದ ಸ್ಫೋಟಕ್ಕೆ ಕಾರ್ಖಾನೆಯ ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಈ ವೇಳೆ ಕಾರ್ಖಾನೆ 10 ರಿಂದ 12 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಛಾವಣಿ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ನಾಲ್ವರು ಅಸುನೀಗಿದ್ದಾರೆ. ಗಾಯಗೊಂಡವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಖಾನೆ ಮಾಲಕ ಮುರುಗೇಶ್ ನಿರಾಣಿ ಕೂಡ ಸ್ಥಳಕ್ಕೆ ಭೇಟಿ ನೀಡಿ, 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪರಿಹಾರಕ್ಕೆ ಮುಖ್ಯಮಂತ್ರಿ ಸೂಚನೆ: ಸ್ಫೋಟದಲ್ಲಿ ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅವರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಾಗಲಕೋಟೆ, ವಿಜಾಪುರ, ಧಾರವಾಡ ಜಿಲ್ಲೆಗಳಿಂದ ಆ್ಯಂಬುಲೆನ್ಸ್‌ಗಳನ್ನು ಕಳುಹಿಸಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸುವಂತೆ ಹಾಗೂ ಘಟನೆಯ ಪೂರ್ಣ ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News