ದೇವರ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ದೂರವಿಡಿ: ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ

Update: 2018-12-16 18:34 GMT

ಚಿಕ್ಕಮಗಳೂರು, ಡಿ.16: ಪ್ರಧಾನಿ ನರೇಂದ್ರ ಮೋದಿ ದೇಶದ ಕಾರ್ಮಿಕ ವರ್ಗಗಳ ವಿರೋಧಿಯಾಗಿದ್ದು, ತಮ್ಮ ಅಧಿಕಾರವಧಿಯಲ್ಲಿ ಕಾರ್ಮಿಕರ ಏಳಿಗೆಗೆ ಅವರ ಕೊಡುಗೆ ಶೂನ್ಯವಾಗಿದೆ. ಕೇಂದ್ರದಲ್ಲಿ ಅಧಿಕಾರದ ಗುದ್ದುಗೆಯಲ್ಲಿರುವ ಬಿಜೆಪಿ ಸರಕಾರದ ಆಡಳಿತದಿಂದಾಗಿ ಕಾರ್ಮಿಕರ ಬದುಕು ಅತಂತ್ರ ಸ್ಥಿತಿಗೆ ತಲುಪುವಂತಾಗಿದೆ. ದುಡಿಯುವ ವರ್ಗಗಳ ಕಲ್ಯಾಣಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಶತಾಯಗತಾಯ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವುದು ಈ ದೇಶದ ಕಾರ್ಮಿಕ ವರ್ಗದ ಜವಾಬ್ದಾರಿಯಾಗಿದೆ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ ಕರೆ ನೀಡಿದರು.

ರವಿವಾರ ನಗರದ ಸವೂರ್ ಸಭಾಂಗಣದಲ್ಲಿ ಎಐಟಿಯುಸಿ ಮತ್ತು ಐ.ಎನ್.ಟಿ.ಯು.ಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಏರ್ಪಡಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನವಿರೋಧಿಯಾಗಿದೆ. ಬಿಜೆಪಿ ಸರಕಾರ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡಿದ ಪರಿಣಾಮ ಪ್ರಸಕ್ತ ದೇಶಾದ್ಯಂತ ಕಾರ್ಮಿಕರ ಬದುಕು ಅತಂತ್ರಗೊಂಡಿದೆ. ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿರುವ ಮೋದಿ ಸರಕಾರದ ಅವಧಿಯಲ್ಲಿ ಬಡವರ, ರೈತರ, ಕಾರ್ಮಿಕರ ಅಭಿವೃದ್ಧಿ ಶೂನ್ಯವಾಗಿದೆ ಎಂದರು.

ಐದು ವರ್ಷಗಳ ಬಿಜೆಪಿ ಸರಕಾರದ ಆಡಳಿತದಿಂದಾಗಿ ಜನತೆ ಭ್ರಮನಿರಸನಗೊಂಡಿದ್ದು, ಮೋದಿ ವಿರೋಧಿ ಅಲೆ ದೇಶಾದ್ಯಂತ ಎದ್ದಿದೆ ಎಂಬುದಕ್ಕೆ ಪಂಚರಾಜ್ಯಗಳ ಚುನಾವಣೆಯೇ ಸಾಕ್ಷಿ. ವಿರೋಧಿ ಅಲೆ ಇರುವ ಹಿನ್ನೆಲೆಯಲ್ಲಿ ಲೋಕಾಸಭೆ ಚುನಾವಣೆಗೆ ಬಿಜೆಪಿ ಪಕ್ಷದವರು ಹಾಗೂ ಅದರ ಅಂಗ ಸಂಸ್ಥೆಗಳಾದ ಸಂಘಪರಿವಾರ ಅಯೋಧ್ಯೆ, ಬಾಬಾಬುಡನ್‍ಗಿರಿ ವಿಚಾರಗಳನ್ನು ಕೆದಕಿ ವಿವಾದ ಸೃಷ್ಟಿಸಿ ರಾಜಕಾರಣ ಮಾಡಲು ಬರುತ್ತಿದ್ದಾರೆ. ಚುನಾವಣಾ ಸಂಬದರ್ಭದಲ್ಲಿ ದೇವರ ಹೆಸರಿನಲ್ಲಿ ರಾಜಕಾರಣ ಮಾಡಲು ಬರುತ್ತಿರುವ ಗೋಸುಂಬೆ ಬಿಜೆಪಿ ಪಕ್ಷದವರ ಬಗ್ಗೆ ಕಾರ್ಮಿಕ ವರ್ಗ ಅತ್ಯಂತ ಎಚ್ಚರಿಕೆಯಿಂದಿರಬೇಕೆಂದರು. 

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕಪ್ಪುಹಣ ತರುತ್ತೇವೆ. ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಗೆ ಸ್ಪಂದಿಸುತ್ತೇವೆಂದು ಹೇಳಿ ಅಧಿಕಾರದ ಗುದ್ದುಗೆ ಹಿಡಿದು ಐದು ವರ್ಷಗಳ ಕಾಲ ಅಧಿಕಾರ ಅನುಭವಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಕೊಳ್ಳೆ ಹೊಡೆದು ವಿದೇಶ ಸುತ್ತಿದರೇ ಹೊರತು, ಪ್ರಣಾಳಿಕೆಯ ಒಂದೂ ಭರವಸೆಯನ್ನೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಬದಲಾವಣೆ ಮಾಡುವುದರ ಜೊತೆಗೆ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಯಾವುದೇ ಕಾರ್ಮಿಕರು ಪ್ರತಿಭಟನೆ ಮತ್ತು ನ್ಯಾಯಕ್ಕಾಗಿ ಹೋರಾಡದಂತೆ ತುಳಿಯಲು ಮೋದಿ ಸರಕಾರ ಮುಂದಾಗಿದೆ. ಬಿಜೆಪಿಯ ಮೋದಿ ಮತ್ತು ಅವರ ಟೀಮ್ ಸುಳ್ಳು ಹೇಳುವುದರಲ್ಲಿ ನಂ.1 ಸ್ಥಾನದಲ್ಲಿದ್ದಾರೆ ಎಂದು ಆರೋಪಿಸಿದ ಅವರು, ಮೋದಿ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕರು 18 ಭಾರಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ.  ಜನವರಿ 8ರಂದು ದೇಶವ್ಯಾಪ್ತಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.

ಯುನೈಟೆಡ್ ಪ್ಲಾಟೇಶನ್ ವರ್ಕರ್ಸ್ ಯುನಿಯನ್‍ನ ಪ್ರಧಾನ ಕಾರ್ಯದರ್ಶಿ ಕೆ.ಗುಣಶೇಖರ್ ಮಾತನಾಡಿ, ಕಾರ್ಮಿಕ ಸಂಘಟನೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಮಾವೇಶವನ್ನು ಮಾಡಿ ತಮಗೆ ಆಗುವ ಅನ್ಯಾಯದ ವಿರುದ್ಧ ಹೋರಾಡಲೇ ಬೇಕಾದ ಅನಿವಾರ್ಯತೆ ಇದೆ. ಶಾಲೆ, ಆಸ್ಪತ್ರೆ, ಬ್ಯಾಂಕ್, ಗಣಿಗಾರಿಕೆಗಳನ್ನು ಖಾಸಗೀಕರಣ ಮಾಡಿ ದೇಶದ ಸಂಪತ್ತನ್ನು ಲೂಟಿ ಹೊಡೆಯಲು ಬಿಜೆಪಿ ಸರಕಾರ ಅಂಬಾನಿ, ಅದಾನಿಯಂತಹ ಶ್ರೀಮಂತ ಬಂಡವಾಳಶಾಹಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದನ್ನು ತಡೆಗಟ್ಟಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಲು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ದಿ.ಎಸ್ಟೇಟ್ ಸ್ಟಾಪ್ ಯುನಿಯನ್ ಆಫ್ ಸೌತ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ, ಸಹ್ಯಾದ್ರಿ ಪ್ಲಾಂಟೇಶನ್‍ನ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರ ಒಡೆಯರ್, ಮಲೆನಾಡು ತೋಟ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ಸೆಲ್ವಂ, ಮೈಸೂರು ತೋಟ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸುಬ್ರಮಣಿ, ಕರ್ನಾಟಕ ಪ್ಲಾಂಟೇಶನ್ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಟಿ.ಮುನಿಯಾಂಡಿ, ಸಿಪಿಐ ಮುಖಂಡರಾದ ರೇಣುಕಾರಾದ್ಯ, ರಾಧಾಸುಂದರೇಶ್ ಮತ್ತಿತರರು ಸಮಾವೇಶದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಹೇಳುತ್ತಲೇ ಭ್ರಷ್ಟಾಚಾರಿಗಳನ್ನು ಸೃಷ್ಟಿಸುತ್ತಿದ್ದಾರೆ. ತಮ್ಮ ಸಂಘಪರಿವಾರದ ಸಂಘಟನೆಗಳನ್ನು ಚೂ ಬಿಟ್ಟು ಕೋಮುವಾದ ಹರಡಿಸುತ್ತ ದೇಶದ ಅಲ್ಪಸಂಖ್ಯಾತರು, ಕೆಳವರ್ಗದ ಜನರ ಮೇಳೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿ ಸಾಮಾನ್ಯ ಜನರ ಸಮಸ್ಯೆಗಳನ್ನು ಹೆಚ್ಚಿಸಿದ್ದಾರೆ. ಜಿ.ಎಸ್.ಟಿ ಜಾರಿ ಮಾಡಿ ಸಣ್ಣಪುಟ್ಟ ಕಾರ್ಖಾನೆಗಳು ಮುಚ್ಚುವಂತೆ ಮಾಡಿದ್ದಾರೆ. ಇದರಿಂದಾಗಿ ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆಲ್ಲ ಕೋಮುವಾದಿ ಮನಸ್ಥಿತಿಯ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಕಾರಣವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಈ ದೇಶದ ಆರ್ಥಿಕತೆ ನಾಶವಾಗಿ, ವಿವಿಧತೆಯಲ್ಲಿ ಏಕತೆ ಎಂಬ ದೇಶದ ಸೌಹಾರ್ದ ಪರಂಪರೆಗೆ ಧಕ್ಕೆ ಉಂಟಾಗಲಿದೆ. 

- ಎನ್.ಶಿವಣ್ಣ, ಎಐಟಿಯುಸಿ ರಾಜ್ಯ ಕಾರ್ಯದರ್ಶಿ 

ಜ.8ಕ್ಕೆ ದೇಶಾದ್ಯಂತ ಮುಷ್ಕರ
ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ  ಬದಲು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಕೇಂದ್ರ ಸರಕಾರ ದುಡಿಯುವ ಜನರ ಜೀವನದ ಮೇಲೆ ಹಾಗೂ ಅವರ ಹಕ್ಕುಗಳ ಮೇಲೆ ಅವ್ಯಾಹತ ದಾಳಿ ನಡೆಸುತ್ತಿದೆ. ಮೋದಿ ಸರಕಾರದ ಸರಕಾರದ ಸರ್ವಾಧಿಕಾರಿ ಧೂೀರಣೆಯಿಂದ ಸಂಘಟಿತ, ಅಸಂಘಟಿತ ಕಾರ್ಮಿಕರು, ರೈತರು, ವಿದ್ಯಾರ್ಥಿ, ಯುವಜನರು, ದಲಿತರು, ಅಲ್ಪಸಂಖ್ಯಾತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸಬೇಕು, ಕನಿಷ್ಠ ವೇತನ ನೀಡಬೇಕು, ಕಾರ್ಮಿಕರ ಕಾಯ್ದೆಗಳನ್ನು ತಿದ್ದುಪಡಿ ಮಾಡಬಾರದು, ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು. ಎಲ್ಲಾ ಕಾರ್ಮಿಕರಿಗೂ ಪಿಂಚಣಿ ಜಾರಿಗೊಳಿಸಬೇಕೆಂದು ದೇಶಾದ್ಯಂತ ಜನವರಿ 8ರಂದು ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಿ ಕೋಮುವಾದಿ ಸರಕಾರಕ್ಕೆ ಪಾಠ ಕಲಿಸಬೇಕು.
- ಕೆ.ಗುಣಶೇಖರ್, ಪ್ರಧಾನ ಕಾರ್ಯದರ್ಶಿ, ಯುನೈಟೆಡ್ ಪ್ಲಾಟೇಶನ್ ವರ್ಕರ್ಸ್ ಯುನಿಯನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News