ವಿಷವಾದ ಪ್ರಸಾದ

Update: 2018-12-17 05:17 GMT

ಪ್ರಾರ್ಥನಾ ಮಂದಿರ, ದೇವಾಲಯಗಳು ಮತ್ತು ಅದಕ್ಕೆ ತಳಕು ಹಾಕಿಕೊಂಡಿರುವ ನಂಬಿಕೆಗಳು ಮನುಷ್ಯನ ಒಳಿತಿಗಾಗಿ ಸೃಷ್ಟಿಯಾದವುಗಳು. ಜಗತ್ತು ಕೈ ಬಿಟ್ಟರೂ ದೇವರೊಬ್ಬನಿದ್ದಾನೆ ಎಂಬ ನಂಬಿಕೆಯಿಂದ ಅಸಂಖ್ಯ ಆಸ್ತಿಕರು ಈ ಭೂಮಿಯಲ್ಲಿ ಬದುಕುವ ಭರವಸೆಯನ್ನು ಹೊಂದಿದ್ದಾರೆ. ದೇವರ ನಂಬಿಕೆ ಈ ಜಗತ್ತಿನ ಕೋಟ್ಯಂತರ ಜನರಿಗೆ ಮಾನಸಿಕವಾಗಿ ನೆರವಾಗುತ್ತಿದೆ. ಆದರೆ ದೇವರ ನಂಬಿಕೆ ಪ್ರತಿಷ್ಠೆಯಾಗಿ, ಉದ್ಯಮವಾಗಿ, ಸ್ಪರ್ಧೆಯಾಗಿ ಪರಿವರ್ತನೆಗೊಂಡಾಗ ಅದು ಮನುಕುಲಕ್ಕೆ ಎಂತೆಂತಹ ಅಪಾಯಗಳನ್ನು ತಂದೊಡ್ಡಬಹುದು ಎನ್ನುವುದನ್ನೂ ನಾವು ನೋಡುತ್ತಿದ್ದೇವೆ. ನಂಬಿಕೆಗಳ ಹೆಸರಿನಲ್ಲಿ ವಿಶ್ವ ಒಂದೆಡೆ ಹಿಂಸೆಯಿಂದ ನಲುಗುತ್ತಿದ್ದರೆ, ಮಗದೊಂದೆಡೆ ವೌಢ್ಯ, ಕಂದಾಚಾರಗಳಿಗೆ ಬಲಿಯಾಗುತ್ತಿದೆ. ಇಂದು ಗಲ್ಲಿಗಲ್ಲಿಗಳಲ್ಲಿ ಮಂದಿರಗಳು, ಚರ್ಚುಗಳು, ಮಸೀದಿಗಳು ಇವೆಯಾದರೂ, ಜನರಲ್ಲಿ ದ್ವೇಷ, ಕ್ರೌರ್ಯ ಹೆಚ್ಚುತ್ತಲೇ ಹೋಗುತ್ತಿದೆ. ಭಕ್ತಿ ಎನ್ನುವುದು ಉನ್ಮಾದವಲ್ಲ. ಅದು ಉನ್ಮಾದವಾದಾಗ ಮನುಷ್ಯನ ದುರಂತ ಆರಂಭವಾಗುತ್ತದೆ. ರಕ್ಷಿಸಬೇಕಾದ ದೇವರ ನಂಬಿಕೆಯೇ ಆತನ ನಾಶಕ್ಕೆ ಕಾರಣವಾಗುತ್ತದೆ.

ಭಾರತದ ರಾಜಕೀಯವೇ ಇಂತಹ ಧಾರ್ಮಿಕ ಉನ್ಮಾದದ ಮೇಲೆ ನಿಂತಿದೆ. ಸಿಖ್‌ಹತ್ಯಾಕಾಂಡ, ಗುಜರಾತ್ ಹತ್ಯಾಕಾಂಡಗಳು ನಡೆದಿರುವುದು ಇಂತಹ ಉನ್ಮಾದದಿಂದಲೇ. ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ನಡೆಯುವ ದುರಂತಗಳೂ ಇದಕ್ಕಿಂತ ಭಿನ್ನವೇನೂ ಅಲ್ಲ. ಕೇರಳದಲ್ಲಿ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಸಿಡಿಸಿದ ಪಟಾಕಿಗಳು ನೂರಾರು ಜನರ ಪ್ರಾಣವನ್ನು ಬಲಿತೆಗೆದುಕೊಂಡಿರುವುದು ಇನ್ನೂ ಹಸಿಯಾಗಿದೆ. ಪಂಜಾಬ್‌ನಲ್ಲಿ ರಾಮಲೀಲಾ ಸಮಾರಂಭವನ್ನು ರೈಲ್ವೇ ಹಳಿಗಳ ಮೇಲೆ ನಿಂತು ನೋಡುತ್ತಿದ್ದವರು ರೈಲಿನಡಿಗೆ ಸಿಲುಕಿ ಬರ್ಬರವಾಗಿ ಮೃತಪಟ್ಟಿರುವುದು ಕೆಲ ತಿಂಗಳ ಹಿಂದೆಯಷ್ಟೇ ನಡೆಯಿತು. ಜಾತ್ರೆ, ಉತ್ಸವಗಳಲ್ಲಿ ಕಾಲ್ತುಳಿತ ದುರಂತಗಳನ್ನಂತೂ ನಾವು ಸಾಮಾನ್ಯ ಎಂಬಂತೆ ಸ್ವೀಕರಿಸುತ್ತಾ ಬಂದಿದ್ದೇವೆ. ಇಂತಹದೇ ಒಂದು ಮನುಷ್ಯ ಸೃಷ್ಟಿಸಿದ ದುರಂತಕ್ಕೆ ಕರ್ನಾಟಕವೂ ಸಾಕ್ಷಿಯಾಗಬೇಕಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮನ ದೇವಾಲಯದಲ್ಲಿ ವಿಷ ಮಿಶ್ರಿತ ಪ್ರಸಾದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಯಾವುದೇ ಪ್ರಾರ್ಥನಾ ಮಂದಿರಗಳು ಜಾತ್ರೆ, ಉತ್ಸವಗಳನ್ನು ಕೇವಲ ನಂಬಿಕೆಯ ಹಿನ್ನೆಲೆಯಲ್ಲಷ್ಟೇ ಮಾಡುವುದಲ್ಲ. ಅದೊಂದು ಉದ್ಯಮವೂ ಕೂಡ. ಆ ಉತ್ಸವದ ಹೆಸರಲ್ಲಿ ಆಯಾ ಧರ್ಮದ ಪ್ರಾರ್ಥನಾ ಮಂದಿರಗಳು ಭಾರೀ ಹಣವನ್ನು ತಿಜೋರಿಗೆ ತುಂಬಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಆ ಉತ್ಸವದಲ್ಲಿ ಅಥವಾ ಪೂಜೆಯ ಸಂದರ್ಭದಲ್ಲಿ ಹಾನಿಗಳು ಉಂಟಾದರೆ ಆ ಉತ್ಸವವನ್ನು ಆಯೋಜಿಸಿದ ಸಂಘಟಕರು ಅಥವಾ ಆ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ಮುಖಂಡರೇ ಹೊಣೆಗಾರರಾಗುತ್ತಾರೆ.

ಲಕ್ಷಾಂತರ ಜನರನ್ನು ಸೇರಿಸುವಾಗ, ಕಾಲ್ತುಳಿತಗಳು ಸಂಭವಿಸದಂತೆ, ಒಂದು ವೇಳೆ ಸಂಭವಿಸಿದರೂ ದೊಡ್ಡ ಹಾನಿಯಾಗದಂತೆ ಮುಂಜಾಗ್ರತೆ ವಹಿಸುವುದು ಸಂಘಟಕರ ಕೆಲಸ. ಭಕ್ತರ ದುಡ್ಡು ಮಾತ್ರ ಬೇಕು, ಆದರೆ ಅವರ ಯೋಗಕ್ಷೇಮದ ಹೊಣೆ ನಮ್ಮದಲ್ಲ ಎನ್ನುವ ಮನಸ್ಥಿತಿಯೇ ಇಂದು ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ದುರಂತಗಳು ಸಂಭವಿಸಲು ಕಾರಣ. ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ವಿತರಣೆಯ ಸಂದರ್ಭದಲ್ಲಿ ಸಂಘಟಕರಿಗೆ ವಿಶೇಷ ಹೊಣೆಗಾರಿಕೆಯಿದೆ. ಮುಖ್ಯವಾಗಿ, ‘ದೇವರ ಪ್ರಸಾದ’ ಎನ್ನುವ ಕಾರಣಕ್ಕಾಗಿಯೇ ಅದನ್ನು ಅಚ್ಚುಕಟ್ಟಾಗಿ, ಶುದ್ಧವಾಗಿ, ಜಾಗರೂಕತೆಯಿಂದ ತಯಾರಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ದೇವರ ಪ್ರಸಾದ ಸ್ವೀಕರಿಸಿ ಅಸ್ವಸ್ಥರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಭಾರೀ ಸಂಖ್ಯೆಯ ಭಕ್ತರು ಸೇರುವಾಗ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಪ್ರಸಾದಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಸ್ವಚ್ಛತೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತದೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಸಂಭವಿಸಿದ್ದು ತುಸು ಭಿನ್ನವಾದುದು. ಶುಚಿತ್ವದ ಕೊರತೆಯಿಂದ ಸಂಭವಿಸಿದ ದುರಂತ ಇದಲ್ಲ. ಯಾರೋ ಉದ್ದೇಶಪೂರ್ವಕವಾಗಿ ವಿಷವನ್ನು ಮಿಶ್ರ ಮಾಡಿರುವುದೇ ದುರಂತಕ್ಕೆ ಕಾರಣ. ದೇವಸ್ಥಾನದೊಳಗೆ ದೇವರ ಪ್ರಸಾದದಲ್ಲೇ ವಿಷ ಮಿಶ್ರಣ ಮಾಡುವ ಮನುಷ್ಯ ಖಂಡಿತವಾಗಿಯೂ ಆಸ್ತಿಕನಾಗಿರಲು ಸಾಧ್ಯವಿಲ್ಲ.

ಆತ ಆಸ್ತಿಕ ವೇಷದಲ್ಲಿರುವ ಕಪಟಿ. ಆತನ ಕ್ರೌರ್ಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಆದುದರಿಂದ ಪ್ರಕರಣವನ್ನು ಗಂಭೀರ ತನಿಖೆಗೆ ಒಳಪಡಿಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕಾಗಿದೆ. ಇದೇ ಸಂದರ್ಭದಲ್ಲಿ ಈ ದುರಂತವನ್ನು ತಪ್ಪಿಸುವ ಎಲ್ಲ ಸಾಧ್ಯತೆಗಳೂ ಇದ್ದವು. ಸಾವಿರಾರು ಜನರಿಗೆ ವಿತರಿಸುವ ಪ್ರಸಾದವನ್ನು ಮೊದಲು ಪರೀಕ್ಷೆಗೊಳಪಡಿಸುವುದು ಸಂಘಟಕರ ಹೊಣೆಗಾರಿಕೆಯಾಗಿದೆ. ಮೊತ್ತ ಮೊದಲು ಪ್ರಸಾದವನ್ನು ಪ್ರಾಣಿ, ಪಕ್ಷಿಗಳಿಗಾದರೂ ಹಾಕಿದ್ದಿದ್ದರೆ ಇಷ್ಟು ಮಂದಿ ಸಾಯುತ್ತಿರಲಿಲ್ಲವೇನೋ. ಅಥವಾ ಅಡುಗೆ ಮಾಡಿದಾತನೇ ಪ್ರಸಾದವನ್ನು ಉಣ್ಣುವ ಸಂಪ್ರದಾಯವನ್ನು ಇಟ್ಟುಕೊಳ್ಳಬೇಕು. ಅಥವಾ ಸಂಘಟಕರೇ ಮೊದಲು ಪ್ರಸಾದವನ್ನು ಸೇವಿಸಿ, ಸುಮಾರು ಒಂದು ಗಂಟೆಗಳ ಬಳಿಕ ಅದನ್ನು ಭಕ್ತರಿಗೆ ವಿತರಿಸುವ ಏರ್ಪಾಡು ಮಾಡಬೇಕು. ಒಂದು ವೇಳೆ ಪ್ರಸಾದ ಸೇವಿಸಿ ದೇಹದಲ್ಲಿ ಯಾವುದಾದರೂ ಏರುಪೇರು ಕಂಡು ಬಂದರೆ ಆ ಪ್ರಸಾದ ವಿತರಣೆಯನ್ನು ತಡೆಯುವ ಅವಕಾಶವಾದರೂ ಇರುತ್ತದೆ. ಆದುದರಿಂದ ಈ ದುರಂತದಲ್ಲಿ ಸಂಘಟಕರ ಬೇಜವಾಬ್ದಾರಿಯನ್ನು ಪೊಲೀಸರು ಯಾವ ರೀತಿಯಲ್ಲೂ ನಿರ್ಲಕ್ಷಿಸುವಂತಿಲ್ಲ.

ಇದೇ ಸಂದರ್ಭದಲ್ಲಿ ಪ್ರಸಾದದಲ್ಲಿ ವಿಷ ಮಿಶ್ರಣ ಮಾಡಿರುವುದರ ಹಿಂದೆ ದೊಡ್ಡ ಸಂಚೇ ಇರಬಹುದು. ದೇವಸ್ಥಾನದ ಸಮಿತಿಯೊಳಗೆ ಅಧಿಕಾರ ಹಿಡಿಯಲು ಪೈಪೋಟಿ, ಸಂಘಟಕರ ನಡುವಿನ ಹಗೆ ಅಥವಾ ಆಹಾರ ಸಿದ್ಧಪಡಿಸುವವರ ನಡುವೆ ಉಂಟಾದ ಅಸಮಾಧಾನಗಳು ಕೂಡ ಇದಕ್ಕೆ ಕಾರಣವಾಗಿರಬಹುದು. ಆದುದರಿಂದ ಬೇರೆ ಬೇರೆ ಆಯಾಮಗಳಲ್ಲಿ ಇದರ ತನಿಖೆ ನಡೆಯಬೇಕಾಗಿದೆ. ಇದೇ ಸಂದರ್ಭದಲ್ಲಿ ಸರಕಾರಿ ಪ್ರಾಯೋಜಿತ ಬಿಸಿಯೂಟ ಉಂಡು ಆಗಾಗ ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳುವ ಪ್ರಕರಣಗಳು ನಡೆಯುತ್ತಿರುತ್ತವೆ. ಬಿಸಿಯೂಟದ ಕುರಿತಂತೆ ಕೆಲವು ಶಕ್ತಿಗಳಿಗೆ ಅಸಮಾಧಾನಗಳಿವೆ. ಎಲ್ಲ ಜಾತಿಯ ಮಕ್ಕಳು ಒಟ್ಟಾಗಿ ಊಟ ಮಾಡುವ ಬಗ್ಗೆಯೇ ಆಕ್ಷೇಪಗಳಿವೆ. ಈ ಎಲ್ಲ ಸಿಟ್ಟುಗಳನ್ನು, ಅಸಮಾಧಾನಗಳನ್ನು ತೀರಿಸಲು ಮಕ್ಕಳ ಊಟದಲ್ಲಿ ಕಲಬೆರಕೆ ಮಾಡುವ ಸಾಧ್ಯತೆಗಳನ್ನು ನಾವು ನಿರಾಕರಿಸುವಂತಿಲ್ಲ. ಆದುದರಿಂದ ಬಿಸಿಯೂಟದ ಗುಣಮಟ್ಟದ ಕುರಿತಂತೆ ಸರಕಾರ ಸದಾ ಕಟ್ಟೆಚ್ಚರದಿಂದ ಇರಬೇಕು. ಆಗಾಗ ಬಿಸಿಯೂಟದ ಗುಣಮಟ್ಟ ತನಿಖೆಗೊಳಗಾಗುತ್ತಿರಬೇಕು. ಹಾಗೆಯೇ ಬಿಸಿಯೂಟ ಮಾಡುವ ಸ್ಥಳ, ಅದರ ವಿತರಣೆ ಇತ್ಯಾದಿಗಳು ಸಿಸಿ ಕ್ಯಾಮರಾಗಳ ಕಣ್ಗಾವಲಲ್ಲಿರಬೇಕು. ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕುವ ಶಕ್ತಿಗಳು ನಮ್ಮ ನಡುವೆ ಇರುವಾಗ, ಮಕ್ಕಳ ಬಿಸಿಯೂಟಕ್ಕೆ ವಿಷಯ ಹಾಕುವ ನೀಚರಿರುವುದರಲ್ಲಿ ಅಚ್ಚರಿಯೇನೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News