ಘಾನಾ ವಿವಿಯಲ್ಲಿ ಗಾಂಧಿ ಪುತ್ಥಳಿ ತೆರವಿಗೆ ವ್ಯಾಪಕ ಆಕ್ರೋಶ

Update: 2018-12-17 06:22 GMT

ಜೊಹಾನ್ಸ್‌ಬರ್ಗ್, ಡಿ. 17: ವಿಶ್ವಶಾಂತಿಯ ಪ್ರತಿಪಾದಕ ಮಹಾತ್ಮಗಾಂಧೀಜಿಯವರ ವಿರುದ್ಧ ಜನಾಂಗೀಯ ತಾರತಮ್ಯದ ಆರೋಪ ಮಾಡಿ, ಘಾನಾ ವಿಶ್ವವಿದ್ಯಾನಿಲಯ ಆವರಣದಲ್ಲಿದ್ದ ಅವರ ಪುತ್ಥಳಿಯನ್ನು ತೆರವುಗೊಳಿಸಿದ ಕ್ರಮಕ್ಕೆ ದಕ್ಷಿಣ ಆಫ್ರಿಕಾದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಹಾತ್ಮ ಗಾಂಧೀಜಿಯವರ ಮೊಮ್ಮಗಳು ಇಳಾ ಗಾಂಧಿ ನೇತೃತ್ವದ ಗಾಂಧಿ ತತ್ವ ಪ್ರತಿಪಾದನಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಈ ಕ್ರಮವನ್ನು ಟೀಕಿಸಿವೆ. ಉಭಯ ದೇಶಗಳ ಸಂಬಂಧದ ಪ್ರತೀಕವಾಗಿ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು 2016ರಲ್ಲಿ ಅಕಾರಾದಲ್ಲಿರುವ ಘಾನಾ ವಿವಿ ಕ್ಯಾಂಪಸ್‌ನಲ್ಲಿ ಗಾಂಧಿಪ್ರತಿಮೆ ಅನಾವರಣಗೊಳಿಸಿದ್ದರು.

ವಿವಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಹೋರಾಟಗಾರರು ಪ್ರತಿಮೆ ತೆರವಿಗೆ ಆಗ್ರಹಿಸಿದ್ದು, ಗಾಂಧೀಜಿಯವರು ಬರೆದ ಪ್ರಬಂಧವೊಂದರಲ್ಲಿ "ಭಾರತೀಯರು, ಕಪ್ಪು ಆಫ್ರಿಕನ್ನರಿಗಿಂತ ಅಸಂಖ್ಯಾತ ಪಾಲು ಶ್ರೇಷ್ಠರು" ಎಂದು ಬರೆದಿದ್ದಾರೆ ಎನ್ನುವುದು ಇವರ ಆರೋಪ. ಪ್ರತಿಭಟನೆ ಹಾಗೂ ಒತ್ತಡಕ್ಕೆ ಮಣಿದು ವಿವಿ ಆಡಳಿತ ಈ ವಾರ ಗಾಂಧಿಪ್ರತಿಮೆ ತೆರವುಗೊಳಿಸಿತ್ತು.

ಘಾನಾ ಬೆಳವಣಿಗೆಗಳ ಬಗ್ಗೆ ಡರ್ಬನ್ ಮೂಲದ ಗಾಂಧಿ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷೆ ಹಾಗೂ ಗಾಂಧೀಜಿಯವರ ಮೊಮ್ಮಗಳು ಇಳಾ ಗಾಂಧಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಯಾವುದೋ ಹೇಳಿಕೆಯನ್ನು ಆಧರಿಸಿ ಒಬ್ಬ ವ್ಯಕ್ತಿಯ ಬಗ್ಗೆ ತೀರ್ಮಾನಕ್ಕೆ ಬರುವುದು ಹಾಗೂ ಅವರಿಗೆ ಜನಾಂಗೀಯವಾದಿ ಎಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಪಿಟ್ಸ್‌ಬರ್ಗ್ ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡೇವಿಡ್ ಗೆಗಾನ್ ಕೂಡಾ ಗಾಂಧೀಜಿಯವರನ್ನು ಜನಾಂಗೀಯವಾದಿ ಎಂದು ಕರೆಯುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಗಾಂಧಿಯವರನ್ನು ಜನಾಂಗೀಯವಾದಿ ಎಂದು ನಿರ್ಧರಿಸುವುದು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ದೂರದರ್ಶಿತ್ವದ ಕೊರತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News