ರಾಜಸ್ಥಾನ, ಮ.ಪ್ರ. ಕಾಂಗ್ರೆಸ್ ಸಿಎಂ ಪ್ರಮಾಣವಚನ ಸಮಾರಂಭಕ್ಕೆ ಅಖಿಲೇಶ್, ಮಾಯಾವತಿ ಗೈರು

Update: 2018-12-18 06:10 GMT

ಕೋಲ್ಕತಾ, ಡಿ.18: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸೋಮವಾರ ನಡೆದಿದ್ದ ಕಾಂಗ್ರೆಸ್ ಸಿಎಂಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸದೇ ದೂರ ಉಳಿದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ರಚನೆಗೆ ಷರತ್ತುರಹಿತ ಬೆಂಬಲ ನೀಡಿದ್ದ ಉಭಯ ಪಕ್ಷಗಳು ವಿರೋಧ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದ್ದ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ದೂರ ಉಳಿದಿರುವುದು 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಸ್ತಾವಿತ ಬಿಜೆಪಿ ವಿರೋಧ ಮೈತ್ರಿಕೂಟ ರಚನೆಗೆ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ಪಕ್ಷ ಮೂರು ಹಿಂದಿ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ಅಧಿಕಾರಕ್ಕೇರಿದ್ದರೂ, ಬಿಎಸ್ಪಿ ನಾಯಕಿ ಮಾಯಾವತಿ ಕಾಂಗ್ರೆಸ್ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ್ದರು.

  ಮಾಯಾವತಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರೂ ಕಾಂಗ್ರೆಸ್ ನೀತಿಯನ್ನು ಟೀಕಿಸಿದ್ದರು. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ ಅಸೆಂಬ್ಲಿ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಗೆ ಈ ಎರಡು ಪಕ್ಷಗಳು ಬೇಸರಗೊಂಡಿವೆ ಎಂದು ನೇತಾರರೊಬ್ಬರು ಹೇಳಿದ್ದಾರೆ. ಈ ಎರಡು ಪಕ್ಷಗಳ ಅಧ್ಯಕ್ಷರಿಗೆ ಕಾಂಗ್ರೆಸ್ ಪಕ್ಷ ತನ್ನ ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ.

ಭೋಪಾಲ್‌ನಲ್ಲಿ ಸೋಮವಾರ ಕಮಲ್‌ನಾಥ್ ಮಧ್ಯಪ್ರದೇಶ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅಖಿಲೇಶ್ ತನ್ನ ಪ್ರತಿನಿಧಿಯಾಗಿ ಮಧ್ಯಪ್ರದೇಶದ ಎಸ್ಪಿಯ ಏಕೈಕ ಶಾಸಕ ರಾಜೇಶ್ ಕುಮಾರ್‌ರನ್ನು ಕಳುಹಿಸಿದ್ದರು. ತನ್ನ ಪಕ್ಷದ ಅಧ್ಯಕ್ಷರು ಲಕ್ನೋದಲ್ಲಿ ಸರಣಿ ಸಭೆ ನಡೆಸುತ್ತಿದ್ದ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ ಎಂದು ಎಸ್ಪಿ ಪಕ್ಷದ ಎಂಎಲ್‌ಸಿ ಹಾಗೂ ವಕ್ತಾರ ಉದಯವೀರ್ ಸಿಂಗ್ ಹೇಳಿದ್ದಾರೆ.

 ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವೈಯಕ್ತಿಕ ಕಾರಣದಿಂದ ಸಮಾರಂಭಕ್ಕೆ ತೆರಳಿಲ್ಲ. ಜೈಪುರ ಹಾಗೂ ಭೋಪಾಲ್‌ಗೆ ರಾಜ್ಯಸಭಾ ಸಂಸದ ನದಿಮುಲ್ ಹಕ್ ಹಾಗೂ ಸಂಸದ ದಿನೇಶ್ ದ್ವಿವೇದಿ ತೃಣಮೂಲ ಕಾಂಗ್ರೆಸ್ ಪರ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News