'ಹೊರಗಿನವರು' ಹೇಳಿಕೆ ನೀಡಿ ವಿವಾದಕ್ಕೀಡಾದ ಮಧ್ಯ ಪ್ರದೇಶದ ನೂತನ ಸಿಎಂ ಕಮಲ್ ನಾಥ್

Update: 2018-12-18 10:28 GMT

ಭೋಪಾಲ್, ಡಿ. 18: ಸ್ಥಳೀಯರು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳಲು ಇತರ ರಾಜ್ಯಗಳ 'ಹೊರಗಿನವರು' ಕಾರಣ ಎಂದು ದೂಷಿಸುವ ಮೂಲಕ ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿ ಕಮಲ್ ನಾಥ್ ವಿವಾದಕ್ಕೀಡಾಗಿದ್ದಾರೆ.

ರಾಜ್ಯದ ಯುವಜನತೆಗೆ  ಉದ್ಯೋಗಾವಕಾಶಗಳನ್ನು ಒದಗಿಸುವ ಕೈಗಾರಿಕೆಗಳಿಗೆ ಪ್ರೋತ್ಸಾಹಕಗಳನ್ನು ನೀಡುವ ಪ್ರಸ್ತಾವನೆಯನ್ನು ಘೋಷಿಸುವ ವೇಳೆ ಅವರು ಹೊರಗಿನವರ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದಾರೆ. ಬಿಜೆಪಿ ಈಗಾಗಲೇ ಈ ವಿಚಾರ ಕೈಗೆತ್ತಿಕೊಂಡಿದ್ದು ಉತ್ತರ ಪ್ರದೇಶ ಮತ್ತು ಬಿಹಾರದ ವಲಸಿಗ ಕಾರ್ಮಿಕರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

''ಇಲ್ಲಿ ಸ್ಥಾಪಿಸಲಾಗಿರುವ ಹಲವಾರು ಕೈಗಾರಿಕೆಗಳಲ್ಲಿ ಇತರ ರಾಜ್ಯಗಳಾದ ಉತ್ತರ ಪ್ರದೇಶ ಹಾಗೂ ಬಿಹಾರದವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾನು ಟೀಕಿಸಲು ಬಯಸುವುದಿಲ್ಲ, ಆದರೆ ಮಧ್ಯ ಪ್ರದೇಶದ ಯುವಜನತೆ ವಂಚಿತರಾಗಿದ್ದಾರೆ'' ಎಂದು ಹೇಳಿದ ಕಮಲ್ ನಾಥ್ ರಾಜ್ಯದ ಯುವಜನತೆಗೆ ಶೇ 70ರಷ್ಟು ಉದ್ಯೋಗಗಳನ್ನು ಮೀಸಲಿರಿಸುವ ಕೈಗಾರಿಕೆಗಳಿಗೆ ಸರಕಾರ ಪ್ರೋತ್ಸಾಹ ನೀಡಲಿದೆ ಎಂದರು. ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಹೊಸ ಗಾರ್ಮೆಂಟ್ ಪಾರ್ಕ್ ಸ್ಥಾಪಿಸಲಾಗುವುದು ಎಂದೂ ಅವರು ಹೇಳಿದರು.

ಕಮಲ್ ನಾಥ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಗಿರಿರಾಜ್ ಕಿಶೋರ್, ಕಮಲ್ ನಾಥ್ ತಮ್ಮ ಮಾತುಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದರಲ್ಲದೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಹಾಗೂ ಬಿಹಾರದ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

''ಉತ್ತರ ಪ್ರದೇಶ ಮತ್ತು ಬಿಹಾರದ ಜನರು ಅವರು ಕೆಲಸ ಮಾಡುವ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಅವರ ಕ್ಷಮೆಯಾಚಿಸಬೇಕು ಇಲ್ಲದೇ ಇದ್ದರೆ ಜನರು ಅವರಿಗೆ ಉತ್ತರ ನೀಡುತ್ತಾರೆ'' ಎಂದು ಗಿರಿರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News