ರೈತರ ಸಾಲ ಮನ್ನಾಗೊಳಿಸುವ ತನಕ ಮೋದಿಯನ್ನು ನಿದ್ರಿಸಲು ಬಿಡಲ್ಲ: ರಾಹುಲ್ ಗಾಂಧಿ

Update: 2018-12-18 10:57 GMT

ಹೊಸದಿಲ್ಲಿ, ಡಿ.18: “ರೈತರ ಸಾಲವನ್ನು ಮನ್ನಾಗೊಳಿಸುವ ತನಕ ನಾವು ಮೋದೀಜಿಗೆ ನಿದ್ರಿಸಲು ಅಥವಾ ವಿರಮಿಸಲು ಬಿಡೆವು'' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

"ದೇಖಾ ಆಪ್ನೆ ?, ಕಾಮ್ ಶುರು ಹೋ ಗಯಾ ಹೈ"  (ನೀವು ನೋಡಿದ್ದೀರಾ ? ಕೆಲಸ ಅದಾಗಲೇ ಆರಂಭಗೊಂಡಿದೆ) ಎಂದು ಸಂಸತ್ ತಲುಪುತ್ತಿದ್ದಂತೆಯೇ ರಾಹುಲ್ ಹೇಳಿದರು.

ಅಧಿಕಾರ ವಹಿಸಿಕೊಂಡ ಕೇವಲ ಆರು ಗಂಟೆಗಳಲ್ಲಿ ಮಧ್ಯ ಪ್ರದೇಶ ಮತ್ತು ಛತ್ತೀಸಗಢದಲ್ಲಿ ತಮ್ಮ ಪಕ್ಷದ ಸರಕಾರ ರೈತರ ಸಾಲ ಮನ್ನಾಗೊಳಿಸಿದೆ ಎಂದ ರಾಹುಲ್ ರಾಜಸ್ಥಾನದಲ್ಲೂ ಸದ್ಯವೇ ಸಾಲಮನ್ನಾ ಘೋಷಿಸಲಾಗುವುದು ಎಂದು ಹೇಳಿದರು.

ತಮ್ಮ ಪಕ್ಷ ಇತ್ತೀಚಿಗಿನ ವಿಧಾನಸಭಾ ಚುನಾವಣೆಗಳಲ್ಲಿ ಸಾಧಿಸಿದ ಗೆಲುವು ರೈತರ ಗೆಲುವು ಎಂದು ಬಣ್ಣಿಸಿದ ರಾಹುಲ್, “ಪ್ರಧಾನಿ ಮೋದಿ ಬಡ ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾಗೊಳಿಸಿಲ್ಲ'' ಎಂದರು. ಎಲ್ಲಾ ಕಾಂಗ್ರೆಸ್ ಆಡಳಿತದ ರಾಜ್ಯಗಳ ರೈತರಿಗೆ ಸಾಲ ಮನ್ನಾ ಆಶ್ವಾಸನೆ ನೀಡಿದ ರಾಹುಲ್ ಬಿಜೆಪಿ ಕೂಡ ದೇಶದಲ್ಲಿ ಇದೇ ರೀತಿ ಮಾಡುವಂತೆ ಇದು ಅನಿವಾರ್ಯಗೊಳಿಸುವುದು' ಎಂದರು.

``ಒಂದು ಕಡೆಯಲ್ಲಿ ರೈತರು, ಬಡವರು, ಯುವಕರು ಹಾಗೂ ಸಣ್ಣ ವರ್ತಕರಿದ್ದರೆ ಇನ್ನೊಂದೆಡೆ ದೇಶದ 10 ಉನ್ನತ ಕೈಗಾರಿಕೋದ್ಯಮಿಗಳಿದ್ದರು, ಮೋದಿ ಅವರ ಕಿಸೆಗಳಿಗೆ ರೂ 3.5 ಲಕ್ಷ ಕೋಟಿ ಹಾಕಿದ್ದಾರೆ'' ಎಂದು ರಾಹುಲ್ ಆರೋಪಿಸಿದರು.

 ಅಮಾನ್ಯೀಕರಣವನ್ನು `ದೊಡ್ಡ ಹಗರಣ' ಎಂದು ಬಣ್ಣಿಸಿದ ರಾಹುಲ್ ವಿವಾದಿತ ರಫೇಲ್ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸುತ್ತಾ ``ನಾವು ಮಾತನಾಡಲು ಸಿದ್ಧ. ಆದರೆ ಬಿಜೆಪಿ ಸಿದ್ಧವಾಗಿಲ್ಲವೆಂಬಂತೆ ಕಾಣಿಸುತ್ತಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News