ಅಂಬೇಡ್ಕರ್ ನಿವಾಸ ಯೋಜನೆಯಡಿ 1,48,217 ಮನೆಗಳ ನಿರ್ಮಾಣ: ಸಚಿವ ಯು.ಟಿ.ಖಾದರ್

Update: 2018-12-18 12:52 GMT

ಬೆಳಗಾವಿ, ಡಿ.18: ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಡಿ 2015-16 ರಿಂದ ಈವರೆಗೆ 1,48,217 ಮನೆಗಳನ್ನು ನಿರ್ಮಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ವಿಧಾನಸಭೆಯಲ್ಲಿ ಇಂದು ಗಮನ ಸೆಳೆಯುವ ಸೂಚನೆ ಮೇರೆಗೆ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, 2015-16ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಡಾ.ಬಿ.ಆರ್.ಅಂಬೇಡ್ಕರ್ ಆವಾಸ್ ಯೋಜನೆಯನ್ನು ಜಾರಿಗೆ ತಂದಿದ್ದು, 2015-16ನೇ ಸಾಲಿನಿಂದ ಈವರೆಗೆ 3,42,974 ಫಲಾನುಭಿಗಳನ್ನು ಆಯ್ಕೆ ಮಾಡಲಾಗಿದ್ದು, 1,48,217 ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

1,31,840 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, 62,843 ಮನೆಗಳು ಪ್ರಾರಂಭವಾಗಬೇಕಿದೆ. ಜಿಪಿಎಸ್ ಆಧಾರಿತ ಭೌತಿಕ ಪ್ರಗತಿಗೆ ಅನುಗುಣವಾಗಿ 2015-16 ರಿಂದ ಅಕ್ಟೋಬರ್ 2018ರ ಅಂತ್ಯದವರೆಗೆ ಒಟ್ಟು 2,934.48 ಕೋಟಿ ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಮಾತ್ರ ಆರ್.ಡಿ.ಸಂಖ್ಯೆಯನ್ನು ನಮೂದಿಸಲಾದ 53,571 ಫಲಾನುಭವಿಗಳಿಗೆ 198.55 ಕೋಟಿ ರೂ. ಬಿಡುಗಡೆ ಮಾಡಬೇಕಿದ್ದು ಬಿಡುಗಡೆ ಆದೇಶ ಹೊರಡಿಸಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯ ಖಜಾನೆಯಿಂದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ಬ್ಯಾಂಕ್ ಖಾತೆಗೆ ಹಣ ಕೆಲವೇ ದಿನಗಳಲ್ಲಿ ಜಮಾ ಆಗಲಿದ್ದು, ಶೀಘ್ರದಲ್ಲಿಯೇ ಫಲಾನುಭವಿಗಳ ಖಾತೆಗೆ ಬಿಡುಗಡೆಗೆ ಕ್ರಮ ವಹಿಸುವುದಾಗಿ ಖಾದರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News