ಶಾಸಕಾಂಗ ಪಕ್ಷದ ಸಭೆಯಲ್ಲಿ ಭುಗಿಲೆದ್ದ ಉತ್ತರ ಕರ್ನಾಟಕ ತಾರತಮ್ಯ ವಿಚಾರ

Update: 2018-12-18 14:28 GMT

ಬೆಳಗಾವಿ, ಡಿ.18: ವಿಧಾನಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ಭರವಸೆಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸದಂತೆ ಶಾಸಕರು ಒತ್ತಾಯಿಸಿದರು. ಈ ತಾರತಮ್ಯವನ್ನು ಸರಿಪಡಿಸಬೇಕಾದರೆ ಸಂಪುಟದಲ್ಲಿ ಆದ್ಯತೆ ನೀಡಬೇಕೆಂದು ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಶಾಸಕ ರಹೀಮ್‍ ಖಾನ್ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕ ಶಾಸಕರು ಸಂಪುಟ ಸೇರ್ಪಡೆಗೆ ಒತ್ತಡ ಹೇರಿದ್ದಾರೆ. ಜಿಲ್ಲೆ, ಜಾತಿ, ಉಪಪಂಗಡದ ಹೆಸರಿನಲ್ಲಿ ಸಂಪುಟ ಸೇರ್ಪಡೆಗೆ ತಮ್ಮದೇ ರೀತಿಯಲ್ಲಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ನಿಗಮ, ಮಂಡಳಿಗಳ ನೇಮಕ ಹಾಗೂ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮನ್ನು ಪರಿಗಣಿಸಬೇಕು ಎಂದು ವಿಧಾನಪರಿಷತ್ ಸದಸ್ಯರು ಒತ್ತಾಯಿಸಿದ್ದಾರೆ. ಮೊದಲ ಹಂತದಲ್ಲಿ 20 ಶಾಸಕರಿಗೆ ಅವಕಾಶ ನೀಡಬೇಕು ಎಂದು ಮೊದಲೇ ತೀರ್ಮಾನ ಅಗಿದೆ. ಆದುದರಿಂದ, ಎರಡನೆ ಹಂತದಲ್ಲಿ ನಿಗಮ, ಮಂಡಳಿಗಳಿಗೆ ಪರಿಷತ್ ಸದಸ್ಯರನ್ನು ಪರಿಗಣಿಸುವುದಾಗಿ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್ ಭರವಸೆ ನೀಡಿದ್ದಾರೆ.

ಸಭಾಪತಿ ಸ್ಥಾನದ ಜೊತೆಗೆ ಮುಖ್ಯಸಚೇತಕ ಸ್ಥಾನವನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕು ಎಂದು ಕೆಲವು ಸದಸ್ಯರು ಆಗ್ರಹಿಸಿದರು. ಆದರೆ, ಈಗಾಗಲೆ ಜೆಡಿಎಸ್‍ಗೆ ಉಪ ಸಭಾಪತಿ ಹಾಗೂ ಮುಖ್ಯ ಸಚೇತಕ ಸ್ಥಾನ ಬಿಟ್ಟುಕೊಡುವುದಾಗಿ ಮಾತುಕೊಟ್ಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸರಕಾರದ ಕಾರ್ಯವೈಖರಿಗೆ ಅಸಮಾಧಾನ: ನಮ್ಮ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಕೊಡಬೇಕಾದ ಅನುದಾನವೂ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಜೆಡಿಎಸ್ ನವರಿಗೆ ಒಂದು, ನಮ್ಮನ್ನು ಒಂದು ರೀತಿ ಕಾಣಲಾಗುತ್ತಿದೆ. ನಿಮ್ಮ ಮುಂದೆಯೂ ನಮ್ಮ ಸಮಸ್ಯೆಗಳನ್ನು ಹೇಳಿದ್ದೇವೆ. ಆದರೆ, ಇಲ್ಲಿಯವರೆಗೆ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ ಎಂದು ಕೆಲವು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ನಾವು ಕ್ಷೇತ್ರದ ಕೆಲಸ ಮಾಡುವುದು ಹೇಗೆ. ಮತ ಹಾಕಿದ ಜನ ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ, ಕ್ಷೇತ್ರದಲ್ಲಿ ನಾವು ತಲೆತಗ್ಗಿಸಿಕೊಂಡು ಓಡಾಡುವಂತಾಗಿದೆ ಎಂದು ಬೆಂಗಳೂರಿನ ಕೆಲ ಶಾಸಕರು ತಿಳಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ಅಧಿವೇಶನದ ನಂತರ ಬೆಂಗಳೂರಿನಲ್ಲಿ  ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ಕರೆಯುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

ವರ್ಗಾವಣೆ, ಸ್ಥಳೀಯ ಸಂಸ್ಥೆಗಳ ನೇಮಕಾತಿ, ಅಧಿಕಾರ ಹಂಚಿಕೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬರಪೀಡಿತ ತಾಲೂಕುಗಳನ್ನು ಸರಕಾರ ಘೋಷಣೆ ಮಾಡಿದೆ. ಆದರೆ, ಬರಪರಿಹಾರ ಕಾಮಗಾರಿಗೆ ಬಿಡುಗಡೆ ಮಾಡುತ್ತಿರುವ ಅನುದಾನ ತುಂಬಾ ಕಡಿಮೆಯಿದೆ. ಯಾವ ಕೆಲಸಗಳನ್ನೂ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ವರ್ಗಾವಣೆ ವಿಷಯದಲ್ಲಿ ನಾವು ಹೇಳಿದ ಅಧಿಕಾರಿಗಳನ್ನು ಹಾಕಿಕೊಡುತ್ತಿಲ್ಲ. ಜೆಡಿಎಸ್ ನಾಯಕರು ನಿಯೋಜಿಸಿದ ಅಧಿಕಾರಿಗಳ ಕೈಯಿಂದ ಕೆಲಸ ಮಾಡಿಸಬೇಕು. ಆ ಅಧಿಕಾರಿಗಳು ನಮಗೆ ಬೆಲೆ ನೀಡುತ್ತಿಲ್ಲ. ಉಪಮುಖ್ಯಮಂತ್ರಿ ಹಾಗೂ ಸಚಿವರು ನಮ್ಮ ನೆರವಿಗೆ ಬರುತ್ತಿಲ್ಲ ಎಂದು ದೂರಿದ್ದಾರೆ ಎನ್ನಲಾಗಿದೆ.

ಆ ವೇಳೆ ಮಧ್ಯಪ್ರವೇಶಿಸಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕಳೆದ ಡಿ.8 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿ ಕುಮಾರಸ್ವಾಮಿಯವರನ್ನು ಕರೆಸಬೇಕೆಂಬ ನಿರ್ಧಾರವಾಗಿತ್ತು. ಅದಕ್ಕೂ ಮೊದಲು ಸಮನ್ವಯ ಸಮಿತಿ ಸಭೆ ನಡೆದಿದ್ದರಿಂದ ಅಲ್ಲಿ ಚರ್ಚೆ ಮಾಡಿ ಬೆಂಗಳೂರಿನಲ್ಲೇ ಶಾಸಕಾಂಗ ಸಭೆ ನಡೆಸುವ ಬದಲಾಗಿ ಬೆಳಗಾವಿಯಲ್ಲಿ ನಡೆಸಬೇಕೆಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಇಂದಿನ ಸಭೆಗೆ ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಿಲ್ಲ. ಹಾಗಾಗಿ ಅವರು ಬಂದಿಲ್ಲ ಎಂದರು.

ಬೆಳಗಾವಿ ಅಧಿವೇಶನ ಮುಗಿದ ನಂತರ ಬೆಂಗಳೂರಿನಲ್ಲೇ ಶಾಸಕಾಂಗ ಸಭೆ ನಡೆಸಲಾಗುವುದು. ಅದರಲ್ಲಿ ಜೆಡಿಎಸ್-ಕಾಂಗ್ರೆಸ್ ಶಾಸಕರು ಭಾಗವಹಿಸುತ್ತಾರೆ. ಮುಖ್ಯಮಂತ್ರಿ ಕೂಡ ಭಾಗವಹಿಸುತ್ತಾರೆ. ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ನಿಮ್ಮ ಯಾವುದೇ ಬೇಡಿಕೆಗಳಿದ್ದರೂ ಅಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಈ ತಿಂಗಳ 22 ರಂದು ಸಚಿವ ಸಂಪುಟ ವಿಸ್ತರಣೆ ಮಾಡುವುದು ಖಚಿತ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರೂ, ತಮ್ಮ ಅಸಮಾಧಾನ ಹೊರಹಾಕಿದ ಕೆಲ ಶಾಸಕರು, ಪದೇ ಪದೇ ಸಂಪುಟ ವಿಸ್ತರಣೆ ಮುಂದೂಡುವುದು ಬೇಡ. ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಯಾವುದು ಸಾಧ್ಯವೋ ಅದನ್ನು ಆದಷ್ಟು ಶೀಘ್ರ ಮಾಡಿ ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದ 40 ಮಂದಿ, ದಕ್ಷಿಣ ಕರ್ನಾಟಕದಲ್ಲಿ 40 ಮಂದಿ ಶಾಸಕರು ಗೆದ್ದಿದ್ದೇವೆ. ದಕ್ಷಿಣ ಕರ್ನಾಟಕದವರು 11 ಮಂದಿ ಸಚಿವರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ 5 ಮಂದಿ ಮಾತ್ರ ಸಚಿವರಾಗಿದ್ದಾರೆ. ಈ ರಾಜಕೀಯ ತಾರತಮ್ಯವನ್ನು ಜನ ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ನಾಯಕರು ಹಾದಿಬೀದಿಯಲ್ಲಿ ಇದರ ಬಗ್ಗೆಯೂ ಪ್ರಚಾರ ಮಾಡಿ ಉತ್ತರ ಭಾಗಕ್ಕಾಗಿರುವ ಅನ್ಯಾಯವನ್ನು ಜನರಿಗೆ ತಿಳಿಸುತ್ತಿದ್ದಾರೆ. ಈ ತಾರತಮ್ಯ ಸರಿಪಡಿಸದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೊಂದರೆಯಾಗುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಪುಟ ವಿಸ್ತರಣೆ ವೇಳೆ ಖಾಲಿ ಇರುವ ಆರಕ್ಕೆ ಆರು ಸ್ಥಾನವನ್ನು ಕಾಂಗ್ರೆಸ್‍ ನಾಯಕರು ಉತ್ತರ ಕರ್ನಾಟಕಕ್ಕೇ ನೀಡಬೇಕು. ಆಗ ಮಾತ್ರ ಉತ್ತರ ಕರ್ನಾಟಕಕ್ಕೆ ಆಗಿರುವ ತಾರತಮ್ಯ ಸರಿಪಡಿಸಲು ಸಾಧ್ಯ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನಿಂದ 3 ಮಂದಿ ಮಾತ್ರ ಗೆದ್ದಿದ್ದಾರೆ. ಅದರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಲಾಗಿದೆ. ಇನ್ನೊಬ್ಬರು ಉಪಮುಖ್ಯಮಂತ್ರಿಯಾಗಿದ್ದಾರೆ. ಬಳ್ಳಾರಿಯಲ್ಲಿ  6 ಮಂದಿ ಶಾಸಕರಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತಲೂ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡಿರುವುದು ಬಳ್ಳಾರಿ ಜಿಲ್ಲೆ. ಆದರೆ ನಮ್ಮಲ್ಲಿ ಒಬ್ಬರೂ ಸಚಿವರಿಲ್ಲ. ಬೇರೆ ಜಿಲ್ಲೆಯಿಂದ ಬಂದು ನಮ್ಮಲ್ಲೇ ಆಡಳಿತ ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಇದು ಅರ್ಥವಾಗುವುದಿಲ್ಲವೇ? ಸ್ಥಳೀಯವಾಗಿ ನಾವು ಜನರಿಗೆ ಏನು ಉತ್ತರ ನೀಡಲು ಸಾಧ್ಯವಾಗುತ್ತದೆ ಎಂದು ಬಳ್ಳಾರಿ ಶಾಸಕರು ಪ್ರಶ್ನಿಸಿದ್ದಾರೆ.

80 ಮಂದಿ ಶಾಸಕರು, 39 ಮಂದಿ ವಿಧಾನಪರಿಷತ್ ಸೇರಿ ಒಟ್ಟು 119 ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದು, ಈ ಪೈಕಿ ಸ್ಪೀಕರ್ ಹಾಗೂ ಸಭಾಪತಿ ಹೊರತುಪಡಿಸಿ 117 ಮಂದಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಇಂದು ನಡೆದ ಸಭೆಯಲ್ಲಿ ಕೇವಲ 58 ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News