ಎಲ್ಲಾ ಗ್ರಾಮಗಳಿಗೆ ನದಿ ಮೂಲದ ನೀರು ಪೂರೈಕೆಗೆ 'ಜಲಧಾರೆ ಯೋಜನೆ': ಸಚಿವ ಕೃಷ್ಣ ಭೈರೇಗೌಡ

Update: 2018-12-18 14:50 GMT

ಬೆಳಗಾವಿ, ಡಿ.18: ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ವರ್ಷವಿಡೀ ನದಿ ನೀರು ಪೂರೈಸುವ ಉದ್ದೇಶದಿಂದ ಜಲಧಾರೆ ಯೋಜನೆ ರೂಪಿಸಲಾಗುತ್ತಿದೆ. ಸುಮಾರು ಎಪ್ಪತ್ತು ಸಾವಿರ ಕೋಟಿ ರೂ. ವೆಚ್ಚದಲ್ಲಿ ಮುಂಬರುವ ಆರೇಳು ವರ್ಷಗಳ ಅವಧಿಯಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು ರಾಜ್ಯ ವಿಧಾನ ಪರಿಷತ್‍ನಲ್ಲಿ ಇಂದು ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ಡಾ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈಗಾಗಲೇ ಗದಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಲಧಾರೆ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಸಮೀಪದ ಯಾವುದಾದರೂ ನದಿ ಮೂಲದಿಂದ ಶುದ್ಧೀಕರಿಸಿದ ನೀರನ್ನು ಕುಡಿಯಲು ಪೂರೈಸುವ ಮಹತ್ವಾಕಾಂಕ್ಷೆ ಸರ್ಕಾರಕ್ಕೆ ಇದೆ. ಇದಕ್ಕಾಗಿ ವಿಸ್ತೃತ ಯೋಜನೆ ಹಾಗೂ ರೂಪು-ರೇಷೆಗಳನ್ನು ರಚಿಸಲಾಗುತ್ತಿದೆ. ಆರರಿಂದ ಏಳು ವರ್ಷಗಳ ದೀರ್ಘಾವಧಿಯಲ್ಲಿ ಯೋಜನೆ ಜಾರಿಗೊಳ್ಳಲಿದೆ ಎಂದರು.

ಗ್ರಾಮೀಣ ಪ್ರದೇಶಗಳಿಗೆ ಕೊಳವೆ ನೀರು ಸರಬರಾಜು ಯೋಜನೆ, ಕೈ-ಪಂಪು, ಕೊಳವೆ ಬಾವಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಪ್ರಸ್ತುತ ಎಲ್ಲಾ ಗ್ರಾಮದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. 2018-19 ನೇ ಸಾಲಿನಲ್ಲಿ ಒಟ್ಟು 24,294 ಜನ ವಸತಿಗಳಿಗೆ ನೀರು ಸರಬರಾಜು ಮಾಡಲು 42,393 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಳೆದ ನವೆಂಬರ್ ಅಂತ್ಯಕ್ಕೆ 6,135 ಕಾಮಗಾರಿಗಳು ಪೂರ್ಣಗೊಂಡಿವೆ. ಮಳೆ ನೀರು ಸಂಗ್ರಹಿಸಿ ಅಂತರ್ಜಲವನ್ನು ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 26.6 ಕೋಟಿ ಜಾನುವಾರುಗಳಿವೆ. ಕುಡಿಯುವ ನೀರು ಪ್ರಮಾಣ ಲೆಕ್ಕ ಹಾಕುವಾಗ ಜಾನುವಾರು ಸಂಖ್ಯೆಯನ್ನೂ ಕೂಡಾ ಪರಿಗಣಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಗ್ರಾಮೀಣ ಮುಖ್ಯ ರಸ್ತೆಗಳ ಯೋಜನೆ: ಲೋಕೋಪಯೋಗಿ ಇಲಾಖೆಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳನ್ನು ನಿರ್ವಹಿಸುವ ಮಾದರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಮುಖ್ಯ ರಸ್ತೆಗಳನ್ನು ಗುರುತಿಸಿ ಅವುಗಳನ್ನು ವರ್ಷವಿಡೀ ಸುಸ್ಥಿತಿಯಲ್ಲಿ ಇರುವಂತೆ ನಿರ್ವಹಿಸಲು ಹೊಸ ಯೋಜನೆಯನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು ರಾಜ್ಯ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ತಿಳಿಸಿದರು.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ವರೆಗೆ 7,665.94 ಕೋಟಿ. ರೂ. ವೆಚ್ಚದಲ್ಲಿ 16,087 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ವಾಣಿಜ್ಯ ಸಂಪರ್ಕ ಹೊಂದಿರುವ ಕೆಲವು ಗ್ರಾಮೀಣ ರಸ್ತೆಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಭಾರದ ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ ಈ ರಸ್ತೆಗಳು ನಿಯಮಿತವಾಗಿ ದುರಸ್ತಿ ಮಾಡಬೇಕಾಗುತ್ತದೆ. ಇದಕ್ಕಾಗಿ ಗ್ರಾಮೀಣ ಮುಖ್ಯ ರಸ್ತೆಗಳ ಯೋಜನೆ ಜಾರಿಗೊಂಡರೆ ನಿರ್ವಹಣಾ ಕಾರ್ಯ ಸುಲಭವಾಗುತ್ತದೆ. ಯೋಜನೆಯು ಇನ್ನೂ ಇಲಾಖಾ ಹಂತದಲ್ಲಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.

ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈವರೆಗೆ 4961.03 ಕೋಟಿ ವೆಚ್ಚದಲ್ಲಿ 18,548 ಕಿ.ಮೀ. ರಸ್ತೆಯನ್ನು ದುರಸ್ತಿಪಡಿಸಲಾಗಿದೆ.  2013-14ನೇ ಸಾಲಿನಿಂದ ಕೇಂದ್ರ ಮತ್ತು ರಾಜ್ಯದ ಪಾಲು ಶೇಕಡಾ 75 ಹಾಗೂ ಶೇಕಡಾ 25ರ ಅನುಪಾತದಲ್ಲಿ ಇತ್ತು. 2015-16 ನೇ ಸಾಲಿನಿಂದ ಶೇಕಡಾ 60 ಹಾಗೂ ಶೇಕಡಾ 40 ರ ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಕಳೆದ ಸುಮಾರು ಐದು ವರ್ಷಗಳಿಂದ ಈ ಅನುದಾನ ಬಿಡುಗಡೆಯಾಗಿಲ್ಲ. ಕೇಂದ್ರದ ಆದೇಶಕ್ಕಾಗಿ ನಿರೀಕ್ಷಿಸುತ್ತಿದ್ದೇವೆ                      ಎಂದು ಸಚಿವರು ವಿವರಿಸಿದರು.

ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ 5613 ಹಳ್ಳಿಗಳನ್ನು, ಗ್ರಾಮವಿಕಾಸ ಯೋಜನೆಯಡಿಯಲ್ಲಿ 939 ಹಳ್ಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ 963 ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News