ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೊಂಡು ವಾಘಾ ತಲುಪಿದ ಹಮೀದ್ ಅನ್ಸಾರಿ

Update: 2018-12-18 14:59 GMT

ಮುಂಬೈ,ಡಿ.18: ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದ ಮುಂಬೈ ಮೂಲದ ಟೆಕ್ಕಿ ಹಮೀದ್ ನಿಹಾಲ್ ಅನ್ಸಾರಿ ಮಂಗಳವಾರ ವಾಘಾ ಗಡಿ ತಲುಪಿದರು. ಅನ್ಸಾರಿ ಕುಟುಂಬ ವರ್ಗ ಮತ್ತು ಅವರನ್ನು ಪಾಕ್ ಜೈಲಿನಿಂದ ಬಿಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಜತಿನ್ ದೇಸಾಯಿ ಈ ವೇಳೆ ವಾಘಾ ಗಡಿಯಲ್ಲಿ ಉಪಸ್ಥಿತರಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕಾನೂನುಬಾಹಿರವಾಗಿ ಗಡಿದಾಟಿದ ಆರೋಪದಲ್ಲಿ ಪಾಕಿಸ್ತಾನ ನ್ಯಾಯಾಲಯ ಅನ್ಸಾರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಯ ಅವಧಿ ಮುಗಿದರೂ ಅನ್ಸಾರಿಯನ್ನು ಬಿಡುಗಡೆ ಮಾಡುವ ಗೋಜಿಗೆ ಜೈಲಿನ ಅಥವಾ ಪಾಕಿಸ್ತಾನದ ಆಡಳಿತ ವರ್ಗ ಹೋಗಿರಲಿಲ್ಲ.

ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಪಾಕಿಸ್ತಾನ-ಭಾರತದ ಜನರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿರುವ ದೇಸಾಯಿ ಮುಂಬೈ ಮತ್ತು ಕರಾಚಿಯ ಪ್ರೆಸ್ ಕ್ಲಬ್ ಮಧ್ಯೆ ಸಂಪರ್ಕ ಕಲ್ಪಿಸುವ ಮೂಲಕ ಶಾಂತಿಗಾಗಿ ಮಾತುಕತೆ ಆರಂಭಿಸಿದ್ದರು. ನೆರೆ ರಾಷ್ಟ್ರದಲ್ಲಿ ತನಗಿರುವ ಸಂಪರ್ಕಗಳನ್ನು ಬಳಸಿದ ದೇಸಾಯಿ ಅನ್ಸಾರಿಯ ಬಿಡುಗಡೆಗೆ ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಅವರ ಪ್ರಯತ್ನದ ಫಲವಾಗಿ ಪಾಕಿಸ್ತಾನದ ಹಕ್ಕುಗಳ ವಕೀಲರಾದ ರಕ್ಷಂದಾ ನಾಝ್ ಮತ್ತು ಕಾಝಿ ಮುಹಮ್ಮದ್ ಅನ್ವರ್ ತಮ್ಮ ದೇಶದ ಆಡಳಿತ ವರ್ಗಕ್ಕೆ ಈ ಪ್ರಕರಣವನ್ನು ತಲುಪಿಸಿದರು.

ಮಂಗಳವಾರ ಹಮೀದ್ ಬಿಡುಗಡೆಗೊಂಡು ಪಂಜಾಬ್‌ನಲ್ಲಿರುವ ವಾಘಾ ಗಡಿ ತಲುಪಿದಾಗ ಅವರ ತಂದೆ ನಿಹಾಲ್ ಅನ್ಸಾರಿ ಮತ್ತು ತಾಯಿ ಫೌಝಿಯಾ ಅನ್ಸಾರಿ ಜೊತೆಗೆ ಜತಿನ್ ದೇಸಾಯಿ ಕೂಡಾ ಅವರನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News