ಹಣದ ಹಿಂದೆ ಓಡದೆ ಗುರಿಯೆಡೆಗೆ ಸಾಗಿ: ವಿದ್ಯಾರ್ಥಿಗಳಿಗೆ ರಾಜ್ಯಪಾಲ ವಜುಭಾಯಿ ವಾಲಾ ಕರೆ

Update: 2018-12-18 15:15 GMT

ಶಿವಮೊಗ್ಗ, ಡಿ.18: ಹಣದ ಹಿಂದೆ ಓಡಿದವರು ಪ್ರಸ್ತುತ ಭಿಕ್ಷುಕರಾಗಿದ್ದಾರೆ. ಈ ಕಾರಣದಿಂದ ಹಣದ ಹಿಂದೆ ಓಡದೆ, ಗುರಿಯೆಡೆಗೆ ಓಡಿ. ವ್ಯಸನ ಮತ್ತು ಫ್ಯಾಷನ್‍ಗಳಿಗೆ ತಿಲಾಂಜಲಿಯಿಟ್ಟು, ಸಾಧಿಸುವೆಡೆ ಗಮನಹರಿಸಿ ಎಂದು ರಾಜ್ಯಪಾಲ ವಜುಭಾಯಿ ವಾಲಾರವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. 

ನಗರದ ದೇಶೀಯ ವಿದ್ಯಾಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 'ದೇಶೀಯ ವಿದ್ಯಾಶಾಲೆ ಸಂಸ್ಥೆಯ ಅಮೃತ ಮಹೋತ್ಸವ' ಕಾರ್ಯಕ್ರಮ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಗುಣ, ಮೌಲ್ಯ, ನೈತಿಕತೆ ಬೆಳೆಸಿಕೊಳ್ಳಬೇಕು. ಧೈರ್ಯವಂತರಾಗಿರಬೇಕು. ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಎಷ್ಟು ವರ್ಷ ಬದುಕಿದ್ದೇವೆ ಎಂಬುವುದಕ್ಕಿಂತ, ಬದುಕಿರುವಷ್ಟು ವರ್ಷ ಏನು ಸಾಧಿಸಿದ್ದೇವೆ ಎಂಬುವುದು ಮುಖ್ಯ. ಈ ಕಾರಣದಿಂದ ಸಾಧಿಸುವ ಗುರಿಯಿಟ್ಟುಕೊಂಡು ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು. 

ದೇಶದ ಯುವ ಪೀಳಿಗೆಯಲ್ಲಿ ರಾಷ್ಟ್ರೀಯ ಭಾವನೆ ಬೆಳೆಸಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಜೊತೆಗೆ ರಾಷ್ಟ್ರಾಭಿಮಾನವನ್ನು ಮೂಡಿಸುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಬೇಕು. ರಾಷ್ಟ್ರದ ಐಕ್ಯತೆ ಬಗ್ಗೆ ಗೌರವ ಮೂಡಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಒಗ್ಗೂಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 
ಇದರ ಜೊತೆಯಲ್ಲಿ ಸ್ತ್ರೀಶಕ್ತೀಕರಣವೂ ಆಗಬೇಕಾಗಿದೆ. ಸದ್ಯ ಎಲ್ಲ ರಂಗಗಳಲ್ಲಿಯೂ ಮಹಿಳೆಯರಿಗೆ ಆದ್ಯತೆ ಸಿಗುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಹಾಗೆಯೇ ಉತ್ತಮ ಸಾಧನೆ ಕೂಡ ಮಾಡುತ್ತಿದ್ದಾರೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ. 60 ರಷ್ಟು ಯುವತಿಯರು ಹಾಗೂ ಶೇ. 40 ರಷ್ಟು ಯುವಕರು ಅಭ್ಯಾಸ ನಡೆಸುತ್ತಿರುವುದು, ಸ್ತ್ರೀಶಕ್ತೀಕರಣಕ್ಕೆ ಸಾಕ್ಷಿಯಾಗಿದೆ ಎಂದರು. 

ದೇಶವು ಎಲ್ಲ ರಂಗಗಳಲ್ಲಿಯೂ ಮುನ್ನುಗ್ಗುತ್ತಿದ್ದು, ಗಣನೀಯ ಸಾಧನೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಜಪಾನ್, ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳ ರೀತಿಯಲ್ಲಿ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಇದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಭಾರತ ಹಾಗೂ ಭಾರತೀಯರು ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ದೇಶದ ಶಿಕ್ಷಣ ಸಂಸ್ಥೆಗಳು ಕಾರಣವಾಗಿವೆ. ಶಿಕ್ಷಣ ಸಂಸ್ಥೆಗಳು ತಮ್ಮ ಮೇಲಿರುವ ಜವಾಬ್ದಾರಿ ಅರಿತು ಮುನ್ನಡೆಯಬೇಕು. ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸುವತ್ತ ಗಮನಹರಿಸಬೇಕು ಎಂದರು. 

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಸಾಮಾಜಿಕ ಕಳಕಳಿಯನ್ನಿಟ್ಟಿಕೊಂಡು ಹಿರಿಯರು ದೇಶೀಯ ವಿದ್ಯಾಸಂಸ್ಥೆ ಸ್ಥಾಪಿಸಿದ್ದರು. ಪ್ರಸ್ತುತ ಈ ಸಂಸ್ಥೆಯು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು. 

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಕುವೆಂಪು ವಿವಿ ಕುಲಪತಿ ಪ್ರೋ. ಜೋಗನ್ ಶಂಕರ್, ಸಂಸ್ಥೆಯ ಪ್ರಮುಖರಾದ ಬಸಪ್ಪಗೌಡ, ರುದ್ರಪ್ಪ, ರಾಜಶೇಖರ್, ದಿನೇಶ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News